Advertisement

ಶಿಕ್ಷಕರ ಬೋಧನೆಯೇ ಪರಿಣಾಮಕಾರಿ

03:30 PM Apr 04, 2019 | Naveen |

ಚಿತ್ರದುರ್ಗ: ಕಂಪ್ಯೂಟರ್‌ ಶಿಕ್ಷಣಕ್ಕಿಂತ ಶಿಕ್ಷಕರ ಬೋಧನೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹಿರಿಯ ನಟ ಎಚ್‌.ಜಿ. ದತ್ತಾತ್ರೇಯ ಹೇಳಿದರು.

Advertisement

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ವತಿಯಿಂದ ಬುಧವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ರಾಸೇಯೋ, ಎನ್‌ ಸಿಸಿ, ರೆಡ್‌ಕ್ರಾಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಕಂಪ್ಯೂಟರ್‌ ಶಿಕ್ಷಣ ನೀಡುತ್ತೇವೆ. ಆದರೆ ಇದಕ್ಕಿಂತ ಶಿಕ್ಷಕರ ಬೋಧನೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಯುವಕ-ಯುವತಿಯರು ಎಂತಹ ತೊಂದರೆ ಇದ್ದರೂ ಮತದಾನ ಮಾಡಬೇಕು. ಚುನಾವಣೆಯನ್ನು ದೂರದಿಂದ ನೋಡಿದರೆ ಅದರ ಮಹತ್ವ ಗೊತ್ತಾಗದು. ಅನುಭವಿಸಿ ನೋಡಬೇಕು ಎಂದರು.

ಶಿಕ್ಷಣ ಎಂದರೆ ಅನೇಕ ಉತ್ತರಗಳನ್ನು ಹೇಳುತ್ತಾರೆ. ಆದರೆ ನನಗೆ ಸ್ವಾಮಿ ವಿವೇಕಾನಂದರು ಹೇಳಿದಂತೆ ಮನುಷ್ಯನ ಶಕ್ತಿ ಹಾಗೂ ಸ್ವರೂಪದಾತ ಶಕ್ತಿಯೇ ಶಿಕ್ಷಣ ಎಂಬುದನ್ನು ನಾನು ನಂಬಿದ್ದೇನೆ. ನಮ್ಮ ಕಾಲದಲ್ಲೇ ಉಪನ್ಯಾಸಕರು ಸ್ಮಾರ್ಟ್‌ ಕ್ಲಾಸ್‌ ಬೇಕು ಎಂದು ಹೇಳುತ್ತಿದ್ದರು. ಆದರೆ ನಾನು ಎಂದಿಗೂ ಯಾವುದೇ 1ಉಪಕರಣ ಬಳಕೆ ಮಾಡದೆ ಶಿಕ್ಷಣ ಪಡೆದಿದ್ದೇನೆ ಎಂದರು.

ಜೀವನದಲ್ಲಿ ಸರಿಯಾದ ಗುರಿ ಕಡೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರಿಗೆ ಇರುತ್ತದೆ. ಯುವಕ-ಯುವತಿಯರು ಕಲಿಕೆಯ ವಯಸ್ಸಿನಲ್ಲೇ ಸಾಧನೆ ಮಾಡಬೇಕು. 50 ವರ್ಷ ದಾಟಿದ ಮೇಲೆ ಜಗತ್ತನ್ನು ಮುಷ್ಠಿಯಲ್ಲಿ ಹಿಡಿದುಕೊಳ್ಳುವ ಸಮಯ ಹಾಳು ಮಾಡಿಕೊಂಡೆ ಎಂದು ಕೆಲವರು ನೊಂದುಕೊಳ್ಳುತ್ತಾರೆ. ಆ ರೀತಿ ಆಗಬಾರದು ಎಂದರು. ನಮ್ಮ ಕಾಲದಲ್ಲಿ ಗುರುಗಳನ್ನು ಹುಡುಕಿಕೊಂಡು ಹೋಗಿ ಪಾಠ ಕೇಳುತ್ತಿದ್ದೆವು. ಇಂದು ಮನೆ ಪಾಠದ ಹಾವಳಿ ಹೆಚ್ಚಿದೆ.

Advertisement

ಎಲ್ಲೆಡೆ ಹಣಕ್ಕೆ ಪಾಠ ಮಾಡುವ ಪರಿಪಾಠ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಲೇಜು ಪ್ರಾಂಶುಪಾಲ ಪ್ರೊ| ಎಂ.ಬಿ. ಬಸವರಾಜಪ್ಪ, ನಿವೃತ್ತ ಪ್ರಾಧ್ಯಾಪಕ ಜಿ.ಟಿ. ಗೋವಿಂದಪ್ಪ, ಐಕ್ಯೂಎಸಿ ಸಂಚಾಲಕ ಪ್ರೊ| ಕೆ.ಕೆ. ಕಾಮಾನಿ, ಪ್ರೊ| ನಾಗರಾಜ್‌ ಇದ್ದರು.

ಕಾಲೇಜು ದಿನಗಳ ನೆನಪು ಮಾಡಿಕೊಂಡ ದತ್ತಣ್ಣ
ವಿಜ್ಞಾನ ಕಾಲೇಜಿಗೆ ಬಂದ ತಕ್ಷಣ ನನಗೆ ಹಳೆಯ ನೆನಪುಗಳು ಕಾಡುತ್ತವೆ. ಎನ್‌ಸಿಸಿ ತಂಡದಲ್ಲಿ ಹೊರಲಾರದ ತೂಕದಷ್ಟು ಶೂ ಹಾಕಿಕೊಂಡು ಆಡಿದ ಕ್ರಿಕೆಟ್‌, ಕ್ರೀಡಾಂಗಣ ಎಲ್ಲವೂ ನೆನಪಾಗುತ್ತವೆ. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಕೊಠಡಿಗಳಿದ್ದು ಆಯಾ ವಿಷಯದಲ್ಲಿ ಅಭ್ಯಾಸ ಮಾಡುತ್ತಿದ್ದ ಸ್ನೇಹಿತರು ಒಟ್ಟಿಗೆ ಕೂತು ಸಂತೋಷದಿಂದ ಮಾಡುತ್ತಿದ್ದ ಕೆಲಸ ಕಾರ್ಯಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ದತ್ತಣ್ಣ ನೆನಪಿಸಿಕೊಂಡರು. ಆ ದಿನಗಳಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಶಿಕ್ಷಕರಿಗೆ ಕೊಡುತ್ತಿದ್ದರೆ ಚಿತ್ರದುರ್ಗದ ಎಲ್ಲ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ದೊರಕುತ್ತಿತ್ತು. ನಮಗೆ ಪಾಠ ಕಲಿಸಿದ ಗುರುಗಳನ್ನು ನೆನೆಯುವುದೇ ಖುಷಿ ಕೊಡುತ್ತದೆ. ನಮ್ಮನ್ನು ಮೂರ್ತಿ ಮಾಡುವಲ್ಲಿ ಶಿಕ್ಷಕರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಇಂಜಿನಿಯರಿಂಗ್‌ ಶಿಕ್ಷಣಕ್ಕೆ ಸೇರಿದ ಮಕ್ಕಳಿಗೆ ಕಾಯಂ ಶಿಕ್ಷಕರು ಇರುತ್ತಿರಲಿಲ್ಲ, ಆಗ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next