ಮುಂಬಯಿ: ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಶುಕ್ರವಾರ ಎರಡು ಚಿರತೆಗಳು ಸಂಚರಿಸುತ್ತಿರುವುದು ಕಂಡುಬಂದಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಇನ್ನೂ ಚಿರತೆಗಳ ವಿಚಾರ ಗೊತ್ತಾಗುತ್ತಿದ್ದಂತೆ ಮನೆಗಳ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಒಂದಲ್ಲ ಎರಡು ಚಿರತೆಗಳು ಇರುವುದು ಗಮನಕ್ಕೆ ಬಂದಿದೆ ಸ್ಥಳೀಯ ಜನರು ಇದನ್ನು ಕಂಡು ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೊದಲ ಚಿರತೆ ನಗರದ ಸವತಾ ನಗರ ಪ್ರದೇಶದ ಹೃದಯಭಾಗದಲ್ಲಿ ಕಾಣಿಸಿಕೊಂಡರೆ ಇನ್ನೊಂದು 5 ಕಿ.ಮೀ ದೂರದ ಗೋವಿಂದ ನಗರದಲ್ಲಿ ಕಾಣಿಸಿಕೊಂಡಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಒಂದು ಚಿರತೆ ಜನ ವಸತಿ ಪ್ರದೇಶದಲ್ಲಿ ಚಲಿಸುತ್ತಿರುವುದನ್ನು ಮತ್ತು ನಗರದ ಕಿರಿದಾದ ಓಣಿಗಳಲ್ಲಿ ತಿರುಗಾಡುವುದನ್ನು ತೋರಿಸಿದೆ.
ಇನ್ನೊಂದು ದೃಶ್ಯಾವಳಿಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಓಡಾಡುವುದು ಕಂಡು ಬಂದಿದ್ದು ಇದನ್ನು ಕಂಡ ಸ್ಥಳೀಯರು ಜೋರಾಗಿ ಬೊಬ್ಬೆ ಹೊಡೆದಾಗ ತಪ್ಪಿಸಿಕೊಳ್ಳಲು ಹತ್ತಿರದ ಕಟ್ಟಡದ ಒಳಗೆ ಪ್ರವೇಶಿಸುವುದು ಕಂಡು ಬಂದಿದೆ.
ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು, ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಚಿರತೆ ಸೆರೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ಒಂದು ಚಿರತೆಯನ್ನು ಸೆರೆ ಹಿಡಿದ್ದಾರೆ, ಇನ್ನೊಂದು ಚಿರತೆಯ ಕಾರ್ಯಾಚರಣೆ ಮುಂದುವರೆದಿದ್ದು ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.