Advertisement

ದೇಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದ ಮೋದಿ: ನಡಹಳ್ಳಿ

05:21 PM Apr 13, 2019 | Team Udayavani |

ಮುದ್ದೇಬಿಹಾಳ: ದೇಶ ಮೊದಲು ಆಮೇಲೆ ಉಳಿದದ್ದು, ದೇಶ ಉಳಿದರೆ ನಾವೆಲ್ಲ ಉಳಿತೇವೆ. ದೇಶ ಬೆಳೆದರೆ ನಾವೆಲ್ಲ ಬೆಳಿತೇವೆ. ದೇಶದಲ್ಲಿ ಶಾಂತಿ ಇದ್ದರೆ ಮಾತ್ರ ನಾವೆಲ್ಲ ನೆಮ್ಮದಿ ಬದುಕು ನಡೆಸುವುದು ಸಾಧ್ಯವಾಗುತ್ತದೆ ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕು ತಂಗಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರಕ್ಕೆ ತಂಗಡಗಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಸುಭದ್ರ, ಸಮರ್ಥ ದೇಶ ಕಟ್ಟಲು ಒಬ್ಬ ಧೀಮಂತ, ಧೈರ್ಯವಂತ, ಸರ್ವಸ್ವವನ್ನೂ ದೇಶಕ್ಕೆ ತ್ಯಾಗ ಮಾಡುವ ಮಹಾತ್ಮನನ್ನು ಪ್ರಧಾನಿಯನ್ನಾಗಿ ಪಡೆದುಕೊಂಡಿದ್ದೇವೆ. ಈಗ ಮತ್ತೆ ಚುನಾವಣೆ ಬಂದಿದೆ. ಎಲ್ಲರ ಬಾಯಲ್ಲೂ
ಮತ್ತೂಮ್ಮೆ ಮೋದಿ ಅನ್ನೋ ಮಾತು ಬರ್ತಿದೆ. ನಾವೆಲ್ಲ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದರೆ, ಮುದ್ದೇಬಿಹಾಳ ತಾಲೂಕಿಗೆ 2018ರಲ್ಲಿ ಜನತೆ ನನ್ನ ಗೆಲ್ಲಿಸುವ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಇಲ್ಲಿನ ಗುಲಾಮಗಿರಿ ಆಡಳಿತ ತೆಗೆದು ಹಾಕಿ ಸಾಮಾನ್ಯ ಕುಟುಂಬದಿಂದ ಬಂದ ನನ್ನ ಆಯ್ಕೆ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ನನಗೆ ಹೆಚ್ಚಿನ ಮತ ಹಾಕಿದಂತೆ ಜಿಗಜಿಣಗಿ ಅವರಿಗೂ ಹೆಚ್ಚು ಮತ ಹಾಕಿ ಪ್ರಧಾನಿ ಮೋದಿ ಪ್ರಧಾನಿ ಆಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

68 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ಸಿಗರು ಹಣ ಪಡೆದು ಲೈಸೆನ್ಸ್‌ ಮೂಲಕ ಕೇವಲ 12ಕೋಟಿ ಜನಕ್ಕೆ ಗ್ಯಾಸ್‌ ಸಿಲಿಂಡರ್‌ ಕೊಟ್ಟಿದ್ದರು. ಆದರೆ ಮೋದಿ ಪ್ರಧಾನಿ ಆದ ಮೇಲೆ ಬಡವರ, ಕೂಲಿಕಾರ ತಾಯಂದಿರ ಸಂಕಷ್ಟ ಅರಿತು 15 ಕೋಟಿ ಬಡ ಕುಟುಂಬಕ್ಕೆ ಉಜ್ವಲ ಯೋಜನೆ ಅಡಿ ಉಚಿತ ಗ್ಯಾಸ್‌ ಸಿಲಿಂಡರ್‌ ನೀಡಿದರು. ಬಡ ರೈತರ ಖಾತೆಗೆ ಪ್ರತಿ ವರ್ಷ ತಲಾ 6,000 ರೂ.ದಂತೆ ಹಣ ಹಾಕಲು 20 ಸಾವಿರ ಕೋಟಿ ರೂ. ಹಣವನ್ನು ತೆಗೆದಿಟ್ಟಿದ್ದಾರೆ. ಇವತ್ತು ಹಳ್ಳಿಗಳಲ್ಲಿ ಶೇ. 75 ಜನ ಮೋದಿ ಅವರು ಜಾರಿಗೊಳಿಸಿದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಮೋದಿ ಸಾಧನೆ ಬಿಚ್ಚಿಟ್ಟರು.

Advertisement

ಬಿಜೆಪಿ ಪ್ರಚಾರ ಸಮಿತಿ ಸಂಚಾಲಕ ಮಲಕೇಂದ್ರಗೌಡ ಪಾಟೀಲ ಮಾತನಾಡಿದರು. ಇಲ್ಲೂ ಕೂಡ ಶಾಸಕರು ಎಂದಿನಂತೆ ಸಾಮಾನ್ಯ ಹೊಟೇಲೊಂದರಲ್ಲಿ ಸಾಮಾನ್ಯ ಕಾರ್ಯಕರ್ತರ ಜೊತೆ ಬೆರೆತು ಸಾಮೂಹಿಕ ಉಪಹಾರ ಸೇವಿಸಿದರು. ನಂತರ ಗ್ರಾಮದ ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಸಂಚರಿಸಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿ ಗ್ರಾಪಂ ವ್ಯಾಪ್ತಿಯ ಕೆಲ ಹಳ್ಳಿಗಳಿಗೂ ತೆರಳಿ ಪ್ರಚಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next