ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸುತ್ತಲಿನ ಗೆಜ್ಜಲಗಟ್ಟಾ, ಆನ್ವರಿ, ರೋಡಲಬಂಡಾ, ಗೌಡೂರು, ಗುಡದನಾಳ ಸೇರಿ ರಾಷ್ಟ್ರೀಯ ಹೆದ್ದಾರಿ (150ಎ) ಮೇಲೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್ಸ್‌ಗಳು ಸಂಚಾರದುದ್ದಕ್ಕು ಸಂಚಕಾರ ತಂದೊಡ್ಡುತ್ತಿವೆ.
ಗುಡದನಾಳ ಗ್ರಾಮದಲ್ಲಿ 7 ಕಡೆ, ನಿಲೋಗಲ್ ಗ್ರಾಮದಲ್ಲಿ 5, ಆನ್ವರಿಯಲ್ಲಿ 6, ವೀರಾಪುರ 5, ಮಲ್ಲಾಪುರಲ್ಲಿ 5, ರೋಡಲಬಂಡಾದಲ್ಲಿ 5, ಯಲಗಟ್ಟಾದಲ್ಲಿ 6, ಕೋಠಾ ಗ್ರಾಮದಲ್ಲಿ 6 ಕಡೆ ಹಾಗೂ ಗುರುಗುಂಟಾ, ಗೊಲ್ಲಪಲ್ಲಿ ತಿಂಥಣಿ ಬ್ರಿಜ್‌ವರೆಗೂ ರಾಷ್ಟ್ರೀಯ ಹೆದ್ದಾರಿಯುದ್ದಕ್ಕು ಅಡಿ ಎತ್ತರದ ಹಂಪ್ಸ್‌ಗಳನ್ನು ನಿರ್ಮಿಸಿದ್ದು ಸಂಚಾರಕ್ಕೆ ಕಿರಿಕಿರಿಯುಂಟು ಮಾಡುತ್ತಿವೆ.
ಹಟ್ಟಿ ಹೊಸೂರು ಕ್ರಾಸ್‌ನಿಂದ ಗುಡದನಾಳ ಕ್ರಾಸ್‌ವರೆಗಿನ ಹಟ್ಟಿ ಪಟ್ಟಣ ಪಂಚಾಯ್ತಿ ಹಾಗೂ ಅಧಿಸೂಚಿತ ಪ್ರದೇಶದುದ್ದಕ್ಕು ಹಂಪ್ಸ್‌ಗಳಿವೆ. ಆದರೆ ಈ ಬಗ್ಗೆ ಎಲ್ಲಿಯೂ ಸೂಚನಾ ಫಲಕಗಳಿಲ್ಲದ್ದರಿಂದ ವೇಗವಾಗಿ ಬರುವ ವಾಹನ ಚಾಲಕರು, ಬೈಕ್ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿವೆ.
ನಿಯಮವೇನು?: ಯಾವುದೇ ರಸ್ತೆಯಲ್ಲಿ ಹಂಪ್ಸ್ ನಿರ್ಮಿಸಲು ನಿರ್ದಿಷ್ಟ ನಿಯಮಗಳಿವೆ. 4 ಇಂಚು ಎತ್ತರ ಮತ್ತು 11.5 ಅಡಿ ಅಗಲದ ಹಂಪ್ಸ್ ರಸ್ತೆಯ ಇಕ್ಕೆಲದ ಅಂಚಿನವರೆಗೂ ವ್ಯಾಪಿಸುವಂತೆ ಬಣ್ಣ ಬಳಿದು ಕ್ಯಾಟ್-ಐ ಅಳವಡಿಸಬೇಕು. ಸ್ಪಷ್ಟವಾಗಿ ಕಾಣುವಂತೆ ಎರಡು ಬದಿ ಸೈನ್‌ಬೋರ್ಡ್‌ಗಳನ್ನು ಹಾಕಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಯಾವುದೇ ನಿಯಮ ಪಾಲನೆ ಆಗಿಲ್ಲ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ತಂದು ಸಾರ್ವಜನಿಕರು ತಮ್ಮ ತಮ್ಮ ಮನೆ ಮುಂದೆ ಯರ್ರಾಬಿರ್ರಿ ಹಂಪ್ಸ್ ಗಳನ್ನು ಹಾಕಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಡಿಗಟ್ಟಲೆ ಎತ್ತರವಿರುವ ಹಂಪ್ಸ್‌ಗಳು ರಸ್ತೆಯ ಎರಡು ಅಂಚಿನವರೆಗೆ ಇಲ್ಲ. ಪಕ್ಕದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಸವಾರರು ಬೈಕ್‌ಗಳನ್ನು ಓಡಿಸಿಕೊಂಡು ಹೋಗುತ್ತಾರೆ. ಇನ್ನು ಕಾರು-ಜೀಪ್, ಲಾರಿಗಳ ಒಂದು ಬದಿಯ ಟೈರು ರಸ್ತೆ ಮೇಲೆ ಮತ್ತೊಂದು ಟೈರು ಪಕ್ಕದ ರಸ್ತೆ ಮೇಲೆ ಹಾದು ಹೋಗುವಾಗ ಜೀಪಿನಿಂದ ಜನ, ಸಾಮಾನು ಸರಂಜಾಮು ಬಿದ್ದ ಘಟನೆಗಳು ನಡೆದಿವೆ. ಅಗತ್ಯವಿರುವ ಕಡೆ ಮಾತ್ರ ಹಂಪ್ಸ್ ಗಳನ್ನು ಉಳಿಸಿ ಉಳಿದೆಲ್ಲಾ ಕಡೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ಸೂಚಿಸಿರುವ ಕಡೆಗೆ ಮಾತ್ರ ಹಂಪ್ಸ್‌ಗಳಿರಬೇಕು. ಅನಧಿಕೃತವಾಗಿ ಹಂಪ್ಸ್‌ಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಅನಗತ್ಯ ಹಂಪ್ಸ್‌ಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಆದೇಶಿಸಲಾಗಿದೆ.
.ಆಂಜನೇಯ,
ಎಇಇ ಲೋಕೋಪಯೋಗಿ ಇಲಾಖೆ