ಬೆಳ್ತಂಗಡಿ : ಆರೋಗ್ಯ ಕ್ಷೇತ್ರದಲ್ಲಿ, ವಿಜ್ಞಾನದಲ್ಲಿ ಹಲವು ಬದಲಾವಣೆಗಳಾಗಿದ್ದು, ಸಮರ್ಪಕ ಚಿಕಿತ್ಸೆಗೆ ಖರ್ಚು ತಗಲುವುದರಿಂದ ಧರ್ಮಸ್ಥಳ ಯೋಜನೆ ಮೂಲಕ ಕಳೆದ 15 ವರ್ಷಗಳಿಂದ ಯೋಜನೆಯ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಒದಗಿಸಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಸ್ಥಳದಲ್ಲಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಯ 16ನೇ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನ್ಯೂ ಇಂಡಿಯಾ ಇನ್ಶೂ ರೆನ್ಸ್‌ನ ಪ್ರಾದೇಶಿಕ ಪ್ರಬಂಧಕಿ ಜ್ಯೋತಿ,
ವಿಭಾಗೀಯ ಪ್ರಬಂಧಕ ಮನೋಹರ ರೈ, ನ್ಯಾಶನಲ್ ಇನ್ಶೂರೆನ್ಸ್‌ನ ವಿಭಾಗೀಯ ಪ್ರಬಂಧಕಿ ಪ್ರತಿಭಾ, ಓರಿಯೆಂಟಲ್ ಇನ್ಶೂರೆನ್ಸ್‌ನ ವಿಭಾಗೀಯ ಪ್ರಬಂಧಕಿ ಉಷಾ, ಯೋಜನೆಯ ಕೇಂದ್ರ ಒಕ್ಕೂಟ ಅಧ್ಯಕ್ಷ ಪ್ರಭಾಕರ ಹೊಸಂದೋಡಿ ಉಪಸ್ಥಿತರಿದ್ದರು.
ರುಡ್‌ಸೆಟ್ ನಿರ್ದೇಶಕ ಜನಾರ್ದನ, ಯೋಜನಾಧಿಕಾರಿ ಜಯಕರ ಶೆಟ್ಟಿ, ಹಣಕಾಸು ನಿರ್ದೇಶಕ ಶಾಂತಾರಾಮ ಪೈ, ಸಮುದಾಯ ವಿಭಾಗ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಯೋಜನೆಯ ವಿವಿಧ ವಲಯಾಧ್ಯಕ್ಷರು, ಸಂಪೂರ್ಣ ಸುರಕ್ಷಾ ಕಚೇರಿ ಸಿಬಂದಿ ಭಾಗವಹಿಸಿದ್ದರು. ಸಂಪೂರ್ಣ ಸುರಕ್ಷಾ ನಿರ್ದೇಶಕ ಅಬ್ರಾಹಂ ಸ್ವಾಗತಿಸಿ, ಗಣೇಶ್ ಭಟ್ ವಂದಿಸಿದರು. ಜಿನರಾಜ ಶೆಟ್ಟಿ ನಿರೂಪಿಸಿದರು.
60.5 ಕೋಟಿ ರೂ. ಪ್ರೀಮಿಯಂ
ಈ ಬಾರಿ 1 ಲಕ್ಷದ 80 ಸಾವಿರ ಕುಟುಂಬದ 6 ಲಕ್ಷ ಸದಸ್ಯರು ಸಂಪೂರ್ಣ ಸುರಕ್ಷಾ ಯೋಜನೆಗೆ ಹೆಸರನ್ನು ನೋಂದಾಯಿಸಿದ್ದಾರೆ. ಇವರ 60.5 ಕೋಟಿ ರೂ. ಪ್ರೀಮಿಯಂನ ಚೆಕ್ ಅನ್ನು ಮೂರು ವಿಮಾ ಕಂಪೆನಿಗಳಿಗೆ ಯೋಜನೆಯ ಅಧ್ಯಕ್ಷ ಡಾ| ಹೆಗ್ಗಡೆಯವರು ಹಸ್ತಾಂತರಿಸಿದರು. 2004ರಲ್ಲಿ ಆರಂಭಿಸಲಾದ ಸಂಪೂರ್ಣ ಸುರಕ್ಷಾ ಗುಂಪು ವಿಮಾ ಯೋಜನೆ ಉಡುಪಿ, ದ.ಕ., ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಕಳೆದ ಬಾರಿ 10 ಲಕ್ಷ ಫಲಾನುಭವಿಗಳ ವಿಮೆಗೆ 467 ಕೋಟಿ ರೂ. ವಿನಿಯೋಗಿಸಲಾಗಿತ್ತು.
ಚಿಕಿತ್ಸೆ ಸೇವೆಗಳ ವಿಸ್ತರಣೆ
ವಿಮೆಯಿಂದ ಲಕ್ಷಾಂತರ ರೋಗಿಗಳು ಪ್ರಯೋಜನ ಪಡೆದಿದ್ದಾರೆ. ಇದನ್ನು ಕರ್ತವ್ಯವೆಂದು ತಿಳಿದುಕೊಂಡು ಈ ಬಾರಿಯೂ ಮುಂದುವರಿಸುತ್ತಿದ್ದೇವೆ. ಈ ವರ್ಷ ಪ್ರೀಮಿಯಂ ಅಧಿಕವಾಗಿದ್ದರೂ ಚಿಕಿತ್ಸೆ ಸೇವೆಗಳ ವಿಸ್ತರಣೆಯೂ ಮಾಡಲಾಗಿದೆ ಮತ್ತು ಎಂದಿನಂತೆ ಯೋಜನೆಯ ಪಾಲುದಾರರು ವಿಮೆಯಲ್ಲಿ ಭಾಗಿಗಳಾಗಿದ್ದಾರೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ