Advertisement

ಯಾದಗಿರಿ ನಾಯಕರ ಕಾಂಗ್ರೆಸ್‌ ಸೇರ್ಪಡೆ-ಮರುಕ್ಷಣವೇ ರದ್ದು!

01:00 PM Apr 04, 2019 | Naveen |

ಯಾದಗಿರಿ: ಬಿಜೆಪಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ| ಭೀಮಣ್ಣ ಮೇಟಿ ಮತ್ತು ಬೆಂಬಲಿಗರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತವಾಗಿ ಬುಧವಾರ ಸೇರ್ಪಡೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ರದ್ದುಗೊಳಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Advertisement

ಜಿಲ್ಲೆಯ ಕಾಂಗ್ರೆಸ್‌ ಪ್ರಭಾವಿ ನಾಯಕರ ವಿರೋಧವೇ ಸೇರ್ಪಡೆ ರದ್ದುಗೊಳ್ಳಲು ಕಾರಣ ಎನ್ನುವ ಮಾತು ಪ್ರಬಲವಾಗಿ ಕೇಳಿಬರುತ್ತಿದೆ. ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಡಾ| ಭೀಮಣ್ಣ ಮೇಟಿ, ದೇವಿಂದ್ರಪ್ಪ ಮುನಮಟ್ಟು, ಸಿದ್ಧಪ್ಪ ಗುಂಡಳ್ಳಿ, ಭೀಮರೆಡ್ಡಿ ಚಟ್ನಳ್ಳಿ, ಮಲ್ಲಿಕಾರ್ಜುನ ತಡಿಬಿಡಿ ಹಾಗೂ ಮಹಾಲಿಂಗರಾವ ಖಾನಾಪುರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್‌, ಯಾದಗಿರಿ ಜಿಲ್ಲೆಯ ಬಿಜೆಪಿ ಮುಖಂಡರು ನಮ್ಮ ಪಕ್ಷಕ್ಕೆ ಸೇರುತ್ತಿರುವುದು ಹೆಚ್ಚಿನ ಶಕ್ತಿ ತುಂಬುವ ಕೆಲಸವಾಗಿದೆ. ಕಲಬುರಗಿ ಮತ್ತು ರಾಯಚೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಚುನಾವಣೆ ಇರುವ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಯಲ್ಲಿ ತೊಡಗುವಂತೆ ಹೇಳಿದ್ದರು. ಆದರೇ, ಕೆಲ ಗಂಟೆಗಳಲ್ಲಿಯೇ ಭೀಮಣ್ಣ ಮೇಟಿ ಮತ್ತು ಇತರರ ಸೇರ್ಪಡೆ ರದ್ದುಗೊಳಿಸಿ ಕೆಪಿಸಿಸಿ ಚುನಾವಣೆ ನಿರ್ವಹಣೆ ಸಮಿತಿ ಅಧ್ಯಕ್ಷ ಪ್ರಕಾಶ ಕೆ. ರಾಠೊಡ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಇಂತಹದೊಂದು ರಾಜಕೀಯ ಆಟ ನಡೆದಿದ್ದು, ಕೆಪಿಸಿಸಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರೂ ಸೇರಿದಂತೆ ಮುಖಂಡರ ಗಮನಕ್ಕಿಲ್ಲದೇ ಭೀಮಣ್ಣ ಮೇಟಿ ಮತ್ತು ಬೆಂಬಲಿಗರನ್ನು ಸೇರ್ಪಡೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಸ್ಥಳೀಯ ನಾಯಕರೊಂದಿಗೆ ಚರ್ಚಿಸದೇ ನಿರ್ಧಾರ ಕೈಗೊಂಡಿರುವುದರಿಂದ ಪ್ರಭಾವಿ ನಾಯಕರೊಬ್ಬರು ಅವರಿಂದಲೇ ಚುನಾವಣೆ ನಡೆಸಿಕೊಳ್ಳಿ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಹೈಕ ಪ್ರಮುಖರು ಕೆಪಿಸಿಸಿಯನ್ನು ಸಂಪರ್ಕಿಸಿ ಮನದಟ್ಟು ಮಾಡಿದ್ದಾರೆ ಎನ್ನಲಾಗಿದೆ.

ಮೇಟಿ ಜತೆ ಸೇರ್ಪಡೆಗೆ ತೆರಳಿದ್ದ ಭೀಮರೆಡ್ಡಿ ಚಟ್ನಳ್ಳಿ ಎಂಬುವವರು ಈ ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ಅಸಂಘಟಿತ ಕಾರ್ಮಿಕರ ಕಾಂಗ್ರೆಸ್‌ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಪಕ್ಷದ ಸ್ಥಳೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಬಿಜೆಪಿಯಲ್ಲಿ ಮೇಟಿ ಕಡೆಗಣಿಸಿದರೇ?: 2 ವರ್ಷಗಳ ಹಿಂದೆಯಷ್ಟೇ ಬಿಜೆಪಿಗೆ ಸೇರಿದ್ದ ಡಾ| ಭೀಮಣ್ಣ ಮೇಟಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಲಾಗಿತ್ತು. ಅಲ್ಲದೇ ಮೇಟಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದನ್ನು ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಕಾರಣ ಏನು?
ಕೆಪಿಸಿಸಿ ಡಾ| ಭೀಮಣ್ಣ ಮೇಟಿ ಇತರರ ಸೇರ್ಪಡೆ ವಿಚಾರವಾಗಿ ಜಿಲ್ಲೆಯ ಮುಖಂಡರ ಗಮನಕ್ಕೆ ಏಕೆ ತಂದಿಲ್ಲ ಎಂದು ಕಾಂಗ್ರೆಸ್‌ನಲ್ಲಿಯೇ ಚರ್ಚೆಯಾಗುತ್ತಿದೆ. ಸುಮಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಹಿರಿಯರೊಂದಿಗೆ ಚರ್ಚೆ ನಡೆಸದೇ ಇಂತಹ ನಿರ್ಧಾರಕ್ಕೆ ಪ್ರಭಾವಿಗಳು ವಿರೋಧ ವ್ಯಕ್ತಪಡಿಸಿ ಹೈಕ ಭಾಗದ ನಾಯಕರಿಂದ ಕೆಪಿಸಿಸಿ ಮೇಲೆ ಒತ್ತಡ ಹೇರಿದ್ದರಿಂದ ಸೇರ್ಪಡೆ ರದ್ದುಗೊಂಡಿದೆ ಎನ್ನುವ ಮಾಹಿತಿ ಕಾಂಗ್ರೆಸ್‌ ಮೂಲಗಳಿಂದ ಲಭ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next