Advertisement

ಮೇಲ್ಮನೆ ಕದನ ಕುತೂಹಲ : 4 ರಾಜ್ಯಗಳ 16 ಸ್ಥಾನಗಳಿಗೆ ಇಂದು ಚುನಾವಣೆ, ವಿಶೇಷ ವೀಕ್ಷಕರ ನೇಮಕ

12:03 AM Jun 10, 2022 | Team Udayavani |

ಹೊಸದಿಲ್ಲಿ: ಪ್ರಬಲ ಪೈಪೋಟಿ, ಕುದುರೆ ವ್ಯಾಪಾರದ ಆರೋಪ, ರೆಸಾರ್ಟ್‌ ವಾಸಗಳ ನಡುವೆಯೇ ನಾಲ್ಕು ರಾಜ್ಯಗಳಿಂದ ರಾಜ್ಯಸಭೆಯ 16 ಸ್ಥಾನಗಳಿಗಾಗಿ ಶುಕ್ರವಾರ ಮತದಾನ ನಡೆಯಲಿದೆ.

Advertisement

ಒಟ್ಟು ಖಾಲಿಯಿದ್ದ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯನ್ನು ಚುನಾವಣ ಆಯೋಗ ಇತ್ತೀಚೆಗೆ ಘೋಷಿಸಿತ್ತು. ಆ ಪೈಕಿ ಉತ್ತರಪ್ರದೇಶ, ತಮಿಳುನಾಡು, ಬಿಹಾರ, ಆಂಧ್ರ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢ‌, ಪಂಜಾಬ್‌, ತೆಲಂಗಾಣ, ಝಾರ್ಖಂಡ್‌ ಮತ್ತು ಉತ್ತರಾಖಂಡದ ಎಲ್ಲ 41 ಅಭ್ಯರ್ಥಿಗಳು ಅವಿರೋಧವಾಗಿ ನೇಮಕಗೊಂಡಿದ್ದರು. ಹೀಗಾಗಿ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಕರ್ನಾಟಕದ ಒಟ್ಟು 16 ಸೀಟುಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.

ನಾಲ್ಕೂ ರಾಜ್ಯಗಳಲ್ಲಿ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಲ್ಲ 4 ಕಡೆಯೂ ವಿಶೇಷ ವೀಕ್ಷಕರನ್ನು ನೇಮಕ ಮಾಡಿದ್ದು, ಇಡೀ ಪ್ರಕ್ರಿಯೆಯನ್ನು ವೀಡಿಯೋ ಗ್ರಫಿ ಮಾಡಲಾಗುವುದು ಎಂದು ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಗುರುವಾರ ತಿಳಿಸಿದ್ದಾರೆ.

ಮಹಾರಾಷ್ಟ್ರ ಕುತೂಹಲ: ಮಹಾರಾಷ್ಟ್ರದಲ್ಲಿ 6 ಸ್ಥಾನಗಳಿಗೆ 7 ಮಂದಿ ನಾಮಪತ್ರ ಸಲ್ಲಿಸಿ ರುವ ಕಾರಣ ಚುನಾವಣ ಕಣ ರಂಗೇರಿದೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರಗಳನ್ನು ರೂಪಿಸಿವೆ. ಆಡಳಿತಾರೂಢ ಮಹಾ ವಿಕಾಸ ಅಘಾಡಿ ಮತು ವಿಪಕ್ಷ ಬಿಜೆಪಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಈ ಚುನಾವಣೆಯೇ ವೇದಿಕೆಯಾಗಿದೆ. 2 ದಶಕಗಳ ಅನಂತರ ಮಹಾರಾಷ್ಟ್ರದಲ್ಲಿ ರಾಜ್ಯಸಭೆ ಚುನಾವಣೆ ಪ್ರಬಲ ಪೈಪೋಟಿಗೆ ಸಾಕ್ಷಿಯಾಗಿದ್ದು, ಶಿವಸೇನೆ,

ಎನ್‌ಸಿಪಿ, ಕಾಂಗ್ರೆಸ್‌ ತಮ್ಮ ಶಾಸಕರನ್ನು ಬೇರೆ ಬೇರೆ ಹೊಟೇಲ್‌, ರೆಸಾರ್ಟ್‌ಗಳಿಗೆ ಶಿಫ್ಟ್ ಮಾಡಿವೆ. ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ನಾಯಕ ಹಾಗೂ ಸಚಿವರ ಅಶ್ವಿ‌ನಿ ವೈಷ್ಣವ್‌ ತಮ್ಮ ತಮ್ಮ ಪಕ್ಷಗಳ ನಾಯಕರೊಂದಿಗೆ ಗುರುವಾರವಿಡೀ ಸರಣಿ ಸಭೆಗಳನ್ನು ನಡೆಸಿದ್ದಾರೆ. ಮಾಜಿ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರ ಕೊರೊನಾ ಪರೀಕ್ಷಾ ವರದಿ ಗುರುವಾರ ನೆಗೆಟಿವ್‌ ಎಂದು ಬಂದಿರುವ ಕಾರಣ ಶುಕ್ರವಾರದ ಚುನಾವಣೆಯಲ್ಲಿ ಅವರು ಭಾಗಿಯಾಗಲಿದ್ದಾರೆ.

Advertisement

ಹರಿಯಾಣದಲ್ಲೂ ರೆಸಾರ್ಟ್‌ ರಾಜಕೀಯ: ಹರಿಯಾಣದಲ್ಲೂ ರೆಸಾರ್ಟ್‌ ರಾಜಕೀಯದ ಗಾಳಿ ಬೀಸಿದ್ದು, ಬಿಜೆಪಿ ತನ್ನೆಲ್ಲ ಶಾಸಕರನ್ನು ಬುಧವಾರವೇ ಚಂಡೀಗಢ‌ದ ರೆಸಾರ್ಟ್‌ಗೆ ಕರೆದೊಯ್ದಿದೆ. ಅಲ್ಲಿ ಅವರಿಗೆ ರಾಜ್ಯಸಭೆ ಮತದಾನದ ತರಬೇತಿ ನೀಡಿ, ಮತದಾನದ ದಿನ ಅವರನ್ನು ವಾಪಸ್‌ ಕರೆತರಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಒ.ಪಿ. ಧನ್‌ಕರ್‌ ಹೇಳಿದ್ದಾರೆ.

ರಾಜಸ್ಥಾನದಲ್ಲೂ ಸರ್ಕಸ್‌: ರಾಜಸ್ಥಾನದ 4 ಸೀಟುಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್‌ 2ರಲ್ಲಿ ಮತ್ತು ಬಿಜೆಪಿ 1ರಲ್ಲಿ ಗೆಲುವು ಸಾಧಿಸುವುದು ನಿಚ್ಚಳವಾಗಿದೆ. ಆದರೆ, 4ನೇ ಸೀಟು ಕುತೂಹಲ ಕೆರಳಿಸಿದೆ. ಮಾಧ್ಯಮ ದಿಗ್ಗಜ ಸುಭಾಷ್‌ಚಂದ್ರ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಬಿಜೆಪಿ ಮತ್ತು ಆರ್‌ಎಲ್‌ಪಿ ಬೆಂಬಲ ಘೋಷಿಸಿವೆ. ಆದರೆ ಅವರಿಗೆ 8 ಮತಗಳ ಕೊರತೆ ಎದುರಾಗಿದೆ. ಇಲ್ಲೂ ಕುದುರೆ ವ್ಯಾಪಾರವಾಗುವ ಭೀತಿಯಿದ್ದ ಕಾರಣ ಜೂ.2ರಂದೇ ಕಾಂಗ್ರೆಸ್‌ ತನ್ನೆಲ್ಲ ಶಾಸಕರು ಮತ್ತು ಕೆಲವು ಪಕ್ಷೇತರ ಶಾಸಕರನ್ನು ಉದಯಪುರದ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದೆ. ಬಿಜೆಪಿ ಕೂಡ ತನ್ನ ಶಾಸಕರನ್ನು ಜೈಪುರದ ಹೊಟೇಲ್‌ಗೆ ಶಿಫ್ಟ್ ಮಾಡಿದೆ.

ಜಾಮೀನು ನಿರಾಕರಣೆ; ಉದ್ಧವ್‌ ಟೀಂಗೆ ಹಿನ್ನಡೆ
ಚುನಾವಣೆಗೆ ಒಂದು ದಿನ ಬಾಕಿಯಿರುವಂತೆಯೇ ಮಹಾರಾಷ್ಟ್ರದಲ್ಲಿ ಉದ್ಧವ್‌ ಟೀಂಗೆ ಹಿನ್ನಡೆ ಉಂಟಾಗಿದೆ. ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಜೈಲಲ್ಲಿರುವ ಸಚಿವ ನವಾಬ್‌ ಮಲಿಕ್‌ ಮತ್ತು ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಒಂದು ದಿನದ ಮಟ್ಟಿಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬಯಿ ವಿಶೇಷ ಕೋರ್ಟ್‌ ಗುರುವಾರ ವಜಾ ಮಾಡಿದೆ. ಕೈದಿಗಳಿಗೆ ಪ್ರಜಾಪ್ರಾತಿನಿಧ್ಯ ಕಾಯ್ದೆಯನ್ವಯ ಮತದಾನ ಮಾಡುವ ಹಕ್ಕು ಇರುವುದಿಲ್ಲ ಎಂದು ಜಾರಿ ನಿರ್ದೇಶನಾಲಯ ವಾದಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ ಇಬ್ಬರಿಗೂ ಜಾಮೀನು ನಿರಾಕರಿಸಿದೆ.

ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾದರೂ ನಾಲ್ಕನೇ ಅಭ್ಯರ್ಥಿಗಾಗಿ ಕಾಂಗ್ರೆಸ್‌ – ಜೆಡಿಎಸ್‌ ನಡುವೆ ಚೌಕಾಸಿಯ ಜತೆಗೆ ವಾಕ್ಸಮರ ನಿಂತಿಲ್ಲ. ಅಭ್ಯರ್ಥಿ ಹಿಂದೆಗೆತ ವಿಚಾರದಲ್ಲಿ ಎರಡೂ ಪಕ್ಷಗಳ ನಾಯಕರ ಪ್ರತಿಷ್ಠೆಯೇ ಮೇಲುಗೈ ಸಾಧಿಸಿದೆ.

ಈ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ಶಾಸಕರಿಗೆ ಆತ್ಮಸಾಕ್ಷಿಯ ಮತ ಕೋರಿ ಬಹಿರಂಗ ಪತ್ರ ಬರೆದಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ

ಎಚ್‌.ಡಿ. ಕುಮಾರಸ್ವಾಮಿ, “ನಮ್ಮನ್ನು ಬಿಜೆಪಿಯ ಬಿ ಟೀಂ ಎಂದು ಜರೆದು, ಈಗ ಪತ್ರ ಬರೆಯಲು ನಾಚಿಕೆಯಾಗುವು ದಿಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಬಿಜೆಪಿಯನ್ನು ಸೋಲಿ ಸಲು ಕಾಂಗ್ರೆಸನ್ನು ಜೆಡಿಎಸ್‌ ಬೆಂಬಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ್‌ ಪ್ರತಿಪಾದಿಸಿದ್ದಾರೆ. ಸಿದ್ದರಾಮಯ್ಯ ಅವರು ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿರುವ ಡಿ.ಕೆ.ಶಿ., ನಾವು ಗೌರವದಿಂದ ಮತ ಕೇಳಿದ್ದೇವೆ ಎಂದಿದ್ದಾರೆ.

ಇನ್ನೊಂದೆಡೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಎಡಪಕ್ಷದ ಸ್ನೇಹಿತ ಸೀತಾರಾಂ ಯಚೂರಿಯವರ ಮೂಲಕ ಸೋನಿಯಾ ಗಾಂಧಿಯವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ.

ಗುರುವಾರ ಬೆಳಿಗ್ಗೆ ಕುಮಾರಸ್ವಾಮಿ ಟ್ವೀಟ್‌ ಮಾಡುವ ಮೂಲಕ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಕಾಂಗ್ರೆಸ್‌ ನಾಯಕರು, ಜಾತ್ಯತೀತತೆ ಉಳಿಯಬೇಕಿದ್ದರೆ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಲಿ. ಜೆಡಿಎಸ್‌ ಅಭ್ಯರ್ಥಿ ಹಿಂದೆಗೆತ ಒಂದೇ ಸಂಧಾನದ ಮಾರ್ಗ ಎಂದು ಸವಾಲೆಸೆದರು. ಸಿದ್ದರಾಮಯ್ಯ ಅವರು ಜೆಡಿಎಸ್‌ ಶಾಸಕರಿಗೆ ಬರೆದ ಪತ್ರದಲ್ಲಿ, “ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಮತಗಳು ಇಲ್ಲದಿದ್ದರೂ ಜೆಡಿಎಸ್‌ ಏಕಾಏಕಿ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್‌ಗೆ ಆಘಾತ ತಂದಿದೆ.

ಲೆಕ್ಕಾಚಾರಗಳು ಹೇಗೆ? :

122 ಮತಗಳಲ್ಲಿ ನಿರ್ಮಲಾ ಸೀತಾರಾಮನ್‌ ಮತ್ತು ಜಗ್ಗೇಶ್‌ಗೆ ತಲಾ 45 ಮತ ಹಾಕಿದರೆ ಉಳಿದ 32 ಮತ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ಗೆ. ಜತೆಗೆ 90 ಎರಡನೇ ಪ್ರಾಶಸ್ತ್ಯ ಮತಗಳೂ ಅವ ರಿಗೆ ಲಭ್ಯ. ಹೀಗಾಗಿ ಗೆಲುವು ಸುಲಭ ಎಂಬ ಲೆಕ್ಕಾಚಾರ.

70 ಮತಗಳಲ್ಲಿ 45 ಮತಗಳು ಜೈರಾಂ ರಮೇಶ್‌ಗೆ. ಉಳಿದ 25 ಮತಗಳು ಮನ್ಸೂರ್‌ ಅಲಿ ಖಾನ್‌ಗೆ. ಜತೆಗೆ 45 ಎರಡನೇ ಪ್ರಾಶಸ್ತ್ಯ ಮತಗಳು. ಜೆಡಿಎಸ್‌ನ ಕೆಲವರು ಆತ್ಮಸಾಕ್ಷಿ ಮತ ಹಾಕುವ ನಿರೀಕ್ಷೆ.

32 ಪ್ರಥಮ ಪ್ರಾಶಸ್ತ್ಯ ಮತಗಳು ಕುಪೇಂದ್ರ ರೆಡ್ಡಿಗೆ. ಕಾಂಗ್ರೆಸ್‌ನಿಂದ ಕೆಲವರು ಆತ್ಮಸಾಕ್ಷಿ ಮತ ಹಾಕಬಹುದು ಎಂಬ ಭರವಸೆ.

ಮತದಾನ ಎಲ್ಲಿ? :

ವಿಧಾನಸೌಧ ಮೊದಲ ಮಹಡಿಯ 108ನೇ ಸಂಖ್ಯೆ ಕೊಠಡಿ.

ಸಮಯ: ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ

ಫ‌ಲಿತಾಂಶ: ಸುಮಾರು ರಾತ್ರಿ 8 ಗಂಟೆಗೆ

 ಬಿರುಸಿನ ಕಾರ್ಯತಂತ್ರ :

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕಾಂಗ  ಪಕ್ಷಗಳ ಸಭೆ ನಡೆದು ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ರಾತ್ರಿ ಬಿಜೆಪಿಯ ಶಾಸಕ ರಿಗೆ ಭೋಜನ ಕೂಟ ಆಯೋಜಿಸಿದ್ದರು. ಬಿಜೆಪಿ ಶುಕ್ರವಾರ ಬೆಳಗ್ಗೆ ಮತಗಳ ಹಂಚಿಕೆ ಮಾಡಲಿದೆ. ಅಡ್ಡಮತದಾನ ನಿರೀಕ್ಷೆ ಜೆಡಿಎಸ್‌ ಶಾಸಕರಿಂದ ಅಡ್ಡ ಮತದಾನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಇವೆ. ಆದರೆ ಜಿ.ಟಿ. ದೇವೇಗೌಡರು ನನ್ನ ಮತ ಜೆಡಿಎಸ್‌ ಅಭ್ಯರ್ಥಿಗೆ ಎಂದು ಹೇಳಿದ್ದಾರೆ. ಗುಬ್ಬಿ ಶ್ರೀನಿವಾಸ್‌ ಆತ್ಮ ಸಾಕ್ಷಿಯ ಮತ ಹಾಕುತ್ತೇನೆ ಎಂದಿದ್ದಾರೆ. ಮತ್ತೂಬ್ಬ ಶಾಸಕ ಶ್ರೀನಿವಾಸ ಗೌಡ ಅವರ ನಿಲುವು ಇನ್ನೂ ಪ್ರಕಟವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next