ಹೊಸದಿಲ್ಲಿ: ದೇಶದಲ್ಲಿ ಮಲ ಹೊರುವ ಪದ್ಧತಿಯಿಂದ ಅನೇಕ ಕಾರ್ಮಿಕರು ಸಾವನ್ನಪ್ಪುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೊಸ ಯೋಜನೆಯನ್ನು ಆರಂಭಿಸಲಿದೆ.
ಆ ಯೋಜನೆಯು ಇದೇ ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಸರಕಾರದ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಮಲ ಹೊರುವ ಪದ್ಧತಿಯನ್ನು ಹಾಗೂ ಚರಂಡಿ ಸ್ವಚ್ಛಗೊಳಿಸುವುದನ್ನು ಸಂಪೂರ್ಣವಾಗಿ ಯಾಂತ್ರಿಕವಾಗಿಸಲೆಂದು ನೂತನ ಯೋಜನೆಯನ್ನು ಈಗಾಗಲೇ ಸರಕಾರ ರೂಪಿಸಿದೆ ಎಂದು ತಿಳಿಸಲಾಗಿದೆ.
1993ರಿಂದ ಈವರೆಗೆ ಒಟ್ಟು 900 ಕಾರ್ಮಿಕರು ಮಲ ಹೊರುವುದರಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಸರಕಾರಿ ದಾಖಲೆಗಳು ತಿಳಿಸುತ್ತವೆ.
ಆದರೆ ಈ ಸಂಖ್ಯೆ ಇನ್ನೂ ಹೆಚ್ಚಿದೆಯೆಂದು ಸಾಮಾಜಿಕ ಹೋರಾಟಗಾರರು ಹೇಳಿದ್ದಾರೆ. ಮನುಷ್ಯರಿಂದ ಮಲ ಹೊರಿಸುವ ಪದ್ಧತಿಗೆ 2013ರಲ್ಲಿಯೇ ನಿಷೇಧ ಹೇರಲಾಗಿದೆಯಾದರೂ ಕೆಲವೆಡೆ ಈ ಪದ್ಧತಿ ಇನ್ನೂ ಜಾರಿಯಲ್ಲಿದೆ.