ಶಿವಮೊಗ್ಗ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡದೆ ಇರದಂತಹ ಅನೇಕ ನೀರಾವರಿ ಯೋಜನೆಗಳಿಗೆ ಮೈತ್ರಿ ಸರಕಾರದಲ್ಲಿ ಯಾವ ತೀರ್ಮಾನ ಮಾಡಿದ್ದೇವೆ. ಅದನ್ನು ಬಿಜೆಪಿ ನಾಯಕರು ನಾವು ಮನವಿ ಮಾಡಿಕೊಟ್ಟು ಮಾಡಿಸಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಸೊರಬ ಜನತೆ ಋಣ ತೀರಿಸಲು, ಬಂಗಾರಪ್ಪ ಅವರ ನೆನಪಿಗೋಸ್ಕರ ಮೂಡಿ ಏತ ನೀರಾವರಿ ಯೋಜನೆಗೆ ತೀರ್ಮಾನ ಕೈಗೊಂಡಿದ್ದೇವೆ. ಇದನ್ನು ಯಾವುದೇ ಬಿಜೆಪಿ ನಾಯಕರ ಮನವಿಗೆ ಕೊಟ್ಟಿದ್ದಲ್ಲ. ರೈತರ ಮನವಿಯಂತೆ ಮಾಡಲಾಗಿದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಬುಧವಾರ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಡೆದ ರೋಡ್‌ಶೋನಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ಉಪ ಚುನಾವಣೆಯಲ್ಲಿ ಮಧು ಅವರು ಗೆಲುವಿನ ಹತ್ತಿರ ಬಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಅತೀ ಹೆಚ್ಚಿನ
ಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆ ಮಾಡಲು ಅನುಕೂಲ ಕಲ್ಪಿಸಬೇಕೆಂದು ಕೋರಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪರನ್ನು ಈ ಬಾರಿ ಅತೀ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು. ಕಳೆದ ಎಂಟು ತಿಂಗಳ ಹಿಂದೆ ಅ ಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ, ರಾಜ್ಯದ ಜನತೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ. ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳಿಗೂ ಸಹ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ. ಮಧು ಅವರ ಗೆಲುವು ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ರೈತರ 400 ಕೋಟಿ ಸಾಲಮನ್ನಾ ಆಗಿದೆ. ರೈತರ ಸಾಲಮನ್ನಾ, ಕೃಷಿಯಲ್ಲಿನ ಬದಲಾವಣೆಗೆ ನಿಮ್ಮ ಆರ್ಶೀವಾದ ಬೇಕು. ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ರೈತರಿಗೆ ಅರಣ್ಯ ಹಕ್ಕು ಕಾಯಿದೆ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಅದಕ್ಕೆ ಪರಿಹಾರ ಕೊಡಲು ಪಾರ್ಲಿಮೆಂಟ್ ನಲ್ಲಿ ಕಾನೂನು ತಿದ್ದುಪಡಿ ಮಾಡಬೇಕಿದೆ. ರಾಜ್ಯದ ಜನರು 28 ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಇಡೀ ದೇಶ, ರಾಜ್ಯ ಶಿವಮೊಗ್ಗದತ್ತ ನೋಡುತ್ತಿದೆ. ಶಿವಮೊಗ್ಗ ಹೋರಾಟಗಾರರ ನೆಲ. ಈ ಪುಣ್ಯಭೂಮಿಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಕಾರ್ಯಕರ್ತರ ಅಭಿಪ್ರಾಯದಂತೆ ಮಧು ಬಂಗಾರಪ್ಪ ಕಣಕ್ಕೆ ಇಳಿಸಿದ್ದೆವೆ. ಯಡಿಯೂರಪ್ಪ, ರಾಘವೇಂದ್ರ ಅವ ರನ್ನು ನೋಡಿದ್ದೀರಾ. ಈ ಕ್ಷೇತ್ರ, ದೇಶದಲ್ಲಿ ಬದಲಾವಣೆ ಬೇಕಿದೆ. ನಿಮ್ಮ ಸೇವೆ ಮಾಡಲು ಮಧು ಬಂಗಾರಪ್ಪರಿಗೆ ಆಶೀರ್ವಾದ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ ಮಧು ಗೆಲ್ಲುವುದು ನಿಶ್ಚಿತವಾಗಿದೆ. ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರು ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇಂದಿನ ಜನಸ್ತೋಮ ನೋಡಿದರೆ ಕಾಂಗ್ರೆಸ್-ಜೆಡಿಎಸ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹೊಸ ಸಾಧನೆಯನ್ನು ಮಾಡಲಿದೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಾ| ಆರ್.ಎಂ. ಮಂಜುನಾಥ ಗೌಡ, ಶಾಸಕ ರಾಜೇಗೌಡ, ಎಂಎಲ್‌ಸಿ ಭೋಜೇಗೌಡ, ಕಿಮ್ಮನೆ ರತ್ನಾಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್. ಎಸ್. ಸುಂದರೇಶ್, ಯೋಗೀಶ್, ನಾಗರಜ್ ಕಂಕಾರಿ ಇತರರಿದ್ದರು.