Advertisement

ಮತ ಜಾಗೃತಿ ಕ್ರೀಡಾಕೂಟಕ್ಕೆ ಬೆರಳೆಣಿಕೆ ಕ್ರೀಡಾಪಟುಗಳು

03:18 PM Apr 04, 2019 | Team Udayavani |

ಚಿತ್ರದುರ್ಗ: ಮತದಾನ ಜಾಗೃತಿಗೆ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳಬೇಕಿತ್ತು. ಆದರೆ ಗಂಡು ಮೆಟ್ಟಿದ ಕೋಟೆ ನಾಡಿನ ಕ್ರೀಡಾಪಟುಗಳು ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಸ್ವೀಪ್‌ ಸಮಿತಿ, ಶಿಕ್ಷಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮತದಾನ ಜಾಗೃತಿ ಅಂಗವಾಗಿ ಏರ್ಪಡಿಸಿದ್ದ ಹೊನಲು ಬೆಳಕಿನ ವಾಲಿಬಾಲ್‌ ಮತ್ತು ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ವರ್ಗದ ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಲಿ ಎನ್ನುವ ಉದ್ದೇಶದಿಂದ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ. ಯುವಕರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಬೆರಳೆಣಿಕೆಯಷ್ಟು ಮಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಬೇಸರ ತರಿಸಿದೆ ಎಂದರು.

ದೇಶಿ ಕ್ರೀಡೆ ಕಬಡ್ಡಿಗೆ ಮೊದಲನೇ ಬಹುಮಾನವಾಗಿ 2000 ರೂ. ನಿಗದಿ ಮಾಡಲಾಗಿತ್ತು. ಅದನ್ನು 5000 ರೂ.ಗೆ ಹೆಚ್ಚಿಸಿ ಕಬಡ್ಡಿಗೆ ಪ್ರೋತ್ಸಾಹ ನೀಡಿರುವುದಾಗಿ ತಿಳಿಸಿದರು. ಇದೇ ತಿಂಗಳ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ 18 ವರ್ಷ ಪೂರೈಸಿದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರತಿಯೊಂದು ಮತವೂ ಅಮೂಲ್ಯವಾದುದಾಗಿದೆ. ಶೇ. 100 ರಷ್ಟು ಮತ ಚಲಾಯಿಸುವ ಮೂಲಕ ರಾಜ್ಯದಲ್ಲಿ ಮತದಾನದಲ್ಲಿ ಮೊದಲನೇ ಸ್ಥಾನ ಪಡೆಯಬೇಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರಜೆಗಳ ಕೈಯಲ್ಲಿದೆ. ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿ ಉತ್ತಮ ಅಡಿಪಾಯ ಹಾಕುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ವಾಲಿಬಾಲ್‌ ಪಂದ್ಯಾವಳಿಯಲ್ಲಿ ಕೋಟೆ ತಂಡ,
ಹೊಳಲ್ಕೆರೆ ಲಿಂಬ್ರಾ, ಎಸ್‌ಆರ್‌ಎಸ್‌ ಆರ್ಟ್ಸ್ ಮತ್ತು ಕಾಮರ್ಸ್‌ ಕಾಲೇಜು, ವಿದ್ಯಾವಿಕಾಸ್‌, ಕಬಡ್ಡಿ ಪಂದ್ಯಾವಳಿಯಲ್ಲಿ ಮಣಿಕಂಠ, ಭಗತ್‌ ಸಿಂಗ್‌, ರಾಯಬಾರಿ, ತುಂಗಾ ಸ್ಪೋರ್ಟ್ಸ್ ಬಾಯ್ಸ್ ಸೇರಿದಂಯೆ ಒಟ್ಟು 10 ತಂಡಗಳು ಭಾಗವಹಿಸಿದ್ದವು.

Advertisement

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಮಹೇಂದ್ರನಾಥ್‌, ನೆಹರು ಯುವ ಕೇಂದ್ರದ ಶ್ರೀನಿವಾಸ್‌, ಗೋಪಾಲಸ್ವಾಮಿ ನಾಯಕ್‌, ಗಾಯತ್ರಿ ಶಿವರಾಮ್‌, ಸ್ಟೇಡಿಯಂ ಅಧಿಕಾರಿ ನಾಗರಾಜ್‌, ತರಬೇತುದಾರ ಮಹಮ್ಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next