Advertisement

ಭ್ರಷ್ಟಾಚಾರಕ್ಕೆ ಪರ್ಯಾಯ ಪದ ಕಾಂಗ್ರೆಸ್‌: ನಳಿನ್‌ ಕುಮಾರ್‌

11:17 AM Apr 04, 2019 | Team Udayavani |

ಮೂಡುಬಿದಿರೆ: ಕಾಂಗ್ರೆಸ್‌ ಎಂಬುದು ಭ್ರಷ್ಟಾಚಾರದ ಪರ್ಯಾಯ ಪದ. ಕಾಂಗ್ರೆಸ್‌ ಎಂದರೆ ಹಿಂಸೆ, ಬಿಜೆಪಿ ಎಂದರೆ ಅಹಿಂಸೆ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮೂರನೇ ಬಾರಿ ಕಣಕ್ಕಿಳಿದಿರುವ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ನೋಟು ಅಮಾನ್ಯದ ಬಳಿಕ ಕಪ್ಪುಹಣ ನಿಯಂತ್ರಣಕ್ಕೆ ಬಂದಿದೆ; ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗಿದೆ. ಈ ಹಿಂದೆ ಜಾತಿ-ಮತಗಳ ಆಧಾರದಲ್ಲಿ ಮೀಸಲಾತಿ ಇದ್ದರೆ ಈಗ ಆರ್ಥಿಕವಾಗಿ ಹಿಂದುಳಿದವರಿಗೂ ಸೂಕ್ತ ಮೀಸಲಾತಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಜಪೆ ವಿಮಾನ ನಿಲ್ದಾಣ ಹೊಸತನಗಳೊಂದಿಗೆ ಬದಲಾವಣೆಗೊಳ್ಳುತ್ತಿದ್ದು 2014-18ರ ವರೆಗೆ 296.91 ಕೋಟಿ ರೂ. ಅನುದಾನ ಬಂದಿದೆ; ನವಮಂಗಳೂರು ಬಂದರು ವಿಸ್ತರಣೆಯಾಗುತ್ತಿದೆ. ತೆಂಗು ಪಾರ್ಕ್‌, ಪ್ಲಾಸ್ಟಿಕ್‌ ಪಾರ್ಕ್‌, ಮೀನುಗಾರಿಕಾ ಜೆಟ್ಟಿ, ಸ್ಮಾರ್ಟ್‌ ಸಿಟಿ, ಅಮೃತ ಯೋಜನೆ ಕಾರ್ಯಗತಗೊಳ್ಳಲಿವೆ’ ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಗರಿಷ್ಠ ಅನುದಾನ
ಕೇಂದ್ರ ಸರಕಾರದಿಂದ ದ.ಕ. ಜಿಲ್ಲೆಗೆ 5 ವರ್ಷಗಳಲ್ಲಿ 16,505 ಕೋಟಿ ರೂ. ಅನುದಾನ ಬಂದಿದೆ. ರಾ.ಹೆ. ಪ್ರಾಧಿಕಾರದ ಮೂಲಕ 7,318 ಕೋಟಿ ರೂ., ವಿವಿಧ ರಸ್ತೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗಳು 5,413 ಕೋ.ರೂ. ವೆಚ್ಚದಲ್ಲಿ ಸಾಕಾರಗೊಳ್ಳುತ್ತಿವೆ. ಜಿಲ್ಲೆಯ ನಗರ ಪಂಚಾಯತ್‌ಗಳಿಗೆ 14ನೇ ಹಣಕಾಸು ಯೋಜನೆಯಡಿ 41.12 ಕೋಟಿ ರೂ., ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ 713 ಕಾಮಗಾರಿಗಳಿಗೆ 22.50 ಕೋಟಿ ರೂ. ಅನುದಾನ ನೀಡಲಾಗಿದೆ. ಗ್ರಾಮೀಣ ರಸ್ತೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಲು ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯಡಿ ದ.ಕ. ಜಿ.ಪಂ.ಗೆ 64 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, “ಕ್ಷೇತ್ರದ ಅಭಿವೃದ್ಧಿಗೆ ದೇಶದ ಪ್ರಧಾನಿಯಾಗಿ ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿಯಬೇಕು. ಅವರಿಗೆ ಬಲಕೊಡುವ ಸಂಸದ ಈ ಕ್ಷೇತ್ರದಿಂದ ಆರಿಸಲ್ಪಡಬೇಕಾಗಿದೆ ಎಂದು ಹೇಳಿದರು.

Advertisement

ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷರಾದ ಕೆ.ಪಿ. ಜಗದೀಶ ಅಧಿಕಾರಿ, ರವಿಶಂಕರ ಮಿಜಾರು, ರಾಮಚಂದರ್‌ ಬೈಕಂಪಾಡಿ, ಜಿಲ್ಲಾ ಪ್ರ. ಕಾರ್ಯದರ್ಶಿ ಸುದರ್ಶನ ಎಂ., ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ ಕಟೀಲು, ಎಂ. ಬಾಹುಬಲಿ ಪ್ರಸಾದ್‌, ಕೆ.ಆರ್‌. ಪಂಡಿತ್‌ ಮೊದಲಾದವರು ಉಪಸ್ಥಿತರಿದ್ದರು.

ರಾ.ಹೆ. 169 ವಿಸ್ತರಣೆ
ರಾಷ್ಟ್ರೀಯ ಹೆದ್ದಾರಿ 169ನ್ನು 45 ಮೀ.ಗೆ ಅಗಲಗೊಳಿಸುವ ಪ್ರಸ್ತಾವನೆಗೆ ಇದ್ದ ಎಲ್ಲ ಅಡ್ಡಿ ಆತಂಕಗಳೂ ನಿವಾರಣೆಯಾಗಿವೆ. ಸೆಪ್ಟಂಬರ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ; ಗುರುಪುರ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಎಂದು ನಳಿನ್‌ ಹೇಳಿದರು.

ಈ ಬಾರಿ 2 ಲಕ್ಷದ ಅಂತರ
ಕಳೆದ ಬಾರಿ 1.4 ಲಕ್ಷದಷ್ಟು ಅಧಿಕ ಬಹುಮತ ಸಾಧಿಸಿರುವ ಬಿಜೆಪಿ ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸುವ ಭರವಸೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next