Advertisement

ಬಿಜೆಪಿ ಬಲ ಪ್ರದರ್ಶನ

12:27 PM Apr 05, 2019 | |

ದಾವಣಗೆರೆ: ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಗುರುವಾರ ಸಂಸದ, ಬಿಜೆಪಿ ಅಭ್ಯರ್ಥಿ ಭರ್ಜರಿ ರೋಡ್‌ ಶೋ ಮೂಲಕ ಮತ್ತೂಮ್ಮೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ
ಪೂಜೆ ಸಲ್ಲಿಸಿದ ನಂತರ ನಾಮಪತ್ರ ಸಲ್ಲಿಕೆಯ ಮೆರವಣಿಗೆ ಪ್ರಾರಂಭಿಸಿದರು. ದುಗ್ಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಕುಟುಂಬ ಸದಸ್ಯರು ಸಾಥ್‌ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಬಳಿ ನಾಮಪತ್ರ ಸಲ್ಲಿಸುವ ಮುನ್ನ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಮತ್ತು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಇಬ್ಬರೂ ಎದುರಾದರು. ಇಬ್ಬರು ಪರಸ್ಪರ ಕೈ ಮುಗಿಯುವ ಮೂಲಕ ಗಮನ ಸೆಳೆದರು. ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಶಾಸಕ ಶಾಮನೂರು ಶಿವಶಂಕರಪ್ಪ
ಅವರನ್ನು ನೋಡುತ್ತಲೇ ಕೈ ಮುಗಿದರು. ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ಎಂದಿನ ಶೈಲಿಯಲ್ಲಿ ಮುಗುಳ್ನಗೆ ಬೀರಿದರು.

ಏ.2 ರಂದೇ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಎರಡು ಜೊತೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆಯ ಅಂತಿಮ ದಿನವೂ 2 ಜೊತೆ ನಾಮಪತ್ರ ಸಲ್ಲಿಸಿದರು. ಜಿ.ಎಂ. ಸಿದ್ದೇಶ್ವರ್‌ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಚಿಕ್ಕೋಡಿಯಿಂದ ದಾವಣಗೆರೆ ಆಗಮಿಸಿದ್ದರು. ಹೆಲಿಕಾಪ್ಟರ್‌ ಮೂಲಕ ಜಿಎಂಐಟಿ ಹೆಲಿಪ್ಯಾಡ್‌
ಗೆ ಆಗಮಿಸಿದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ ನಂತರ ನೇರವಾಗಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ,
ಮೆರವಣಿಗೆಯಲ್ಲಿ ಪಾಲ್ಗೊಂಡರು.

ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಂ.ಪಿ. ರೇಣುಕಾಚಾರ್ಯ, ಜಿ. ಕರುಣಾಕರರೆಡ್ಡಿ, ಪ್ರೊ|ಎನ್‌. ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಕೆ. ಮಾಡಾಳ್‌ ವಿರುಪಾಕ್ಷಪ್ಪ, ಆಯನೂರು ಮಂಜುನಾಥ್‌, ಮಾಜಿ ಸಚಿವ ಮುರುಗೇಶ್‌ ನಿರಾಣಿ, ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಎಂ. ಬಸವರಾಜನಾಯ್ಕ, ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಇತರರು ಸಾಥ್‌ ನೀಡಿದರು.ದುರ್ಗಾಂಬಿಕಾ ದೇವಸ್ಥಾನದಿಂದ ಭರ್ಜರಿ ಮೆರವಣಿಗೆ,
ಕಾರ್ಯಕರ್ತರ ಹರ್ಷೋದ್ಘಾರ,ಆಗಾಗ ಕಿವಿಗಡುಚಿಕ್ಕುವಂತೆ ಕೇಳಿ ಬರುತ್ತಿದ್ದ ಮೋದಿ… ಮೋದಿ ಎಂಬ ಘೋಷಣೆ, ಜಾನಪದ ವಾದ್ಯಗಳ ಹಿಮ್ಮೇಳದೊಂದಿಗೆ ಸಾಗಿ ಬಂದಿತು.

ಹೊಂಡದ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಿದ್ದೇಶಣ್ಣ ಗೆದ್ದಾಗಿದೆ. ಎಷ್ಟು ಲಕ್ಷ ಮತಗಳ ಅಂತರ ಎಂಬುದರ ಬಗ್ಗೆ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದರು. ಡೈರಿಯಲ್ಲಿನ ವಿಷಯ ಸುಳ್ಳು ಎಂದಾದರೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ರಾಜಕೀಯ ನಿವೃತ್ತಿ ಪಡೆಯುವರೇ ಎಂದು ನೇರ ಸವಾಲು ಹಾಕಿದರು. ರಾಹುಲ್‌ಗಾಂಧಿ ಪ್ರಧಾನಿ
ಆಗುವುದು ತಿರುಕನ ಕನಸು… ಎಂದು ತಿವಿದ ಅವರು ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಮುಕ್ತ ದೇಶ ಆಗಲಿದೆ ಎಂದು ಭವಿಷ್ಯ ನುಡಿದರು. ಬೇರೆ ಕಡೆ ಹೋಗಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಮೆರವಣಿಗೆಯಿಂದ ತೆರಳಿದರು. ಹೊಂಡದ
ವೃತ್ತ, ಅರುಣಾ ಚಿತ್ರಮಂದಿರ ವೃತ್ತದ ಮೂಲಕ ಬಿಜೆಪಿ ಪ್ರಚಾರ ಮೆರವಣಿಗೆ ರಾಂ ಆ್ಯಂಡ್‌ ಕೋ ವೃತ್ತ ತಲುಪಿತು. ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್‌, ವಿಧಾನ
ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಎಲ್ಲರೂ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಮೋದಿ ಮತ್ತು ಯಡಿಯೂರಪ್ಪ ಸರ್ಕಾರದ ಸಾಧನೆಗಳ ಕೊಂಡಾಡಿದರು. ಸಿದ್ದೇಶ್ವರ್‌ ಅವರನ್ನು ಭರ್ಜರಿ ಮತಗಳ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು. ರೋಡ್‌
ಶೋ, ಬಹಿರಂಗ ಸಭೆಯ ನಂತರ ಜಿಲ್ಲಾಧಿಕಾರಿ ಕಚೇರಿಗೆ ಪುನಃ ತೆರಳಿದ ಸಂಸದ ಸಿದ್ದೇಶ್ವರ್‌ ಮತ್ತೊಂದು ಜೊತೆ ನಾಮಪತ್ರ ಸಲ್ಲಿಸಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಎಂ.ಪಿ.
ರೇಣುಕಾಚಾರ್ಯ, ಕೆ. ಮಾಡಾಳ್‌ ವಿರುಪಾಕ್ಷಪ್ಪ, ಎಸ್‌.ವಿ. ರಾಮಚಂದ್ರಪ್ಪ ಸಾಥ್‌ ನೀಡಿದರು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ ದಾವಣಗೆರೆಯ ವಿವಿಧ ಭಾಗದಲ್ಲಿ ಪ್ರಚಾರ
ನಡೆಸಿದರು.

ಏ.23 ರಂದು ನಡೆಯುವ ದಾವಣಗೆರೆ ಲೋಕಸಭಾ ಕ್ಷೇತ್ರದ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುವುದರೊಂದಿಗೆ ಒಂದು
ಘಟ್ಟ ಮುಗಿದಂತಾಗಿದೆ. ಏ.5 ರಂದು ನಾಮಪತ್ರ ಪರಿಶೀಲನೆ ನಂತರ ನಾಮಪತ್ರ ಸ್ವೀಕಾರಗೊಂಡಿರುವ ಪಟ್ಟಿ ಸಿಗುತ್ತದೆ.
ನಾಮಪತ್ರ ವಾಪಸ್ಸಾತಿ ನಂತರ ದಾವಣಗೆರೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಅಂತಿಮ ಚಿತ್ರಣ ದೊರೆಯಲಿದೆ. ಆ ನಂತರವೇ ಅಸಲಿ ಚುನಾವಣಾ ರಣಾಂಗಣ ಶುರು.

Advertisement

Udayavani is now on Telegram. Click here to join our channel and stay updated with the latest news.

Next