ಔರಾದ: ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ ಘಟನೆ ಚಿಂತಾಕಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಚಿಂತಾಕಿ ಗ್ರಾಮದಲ್ಲಿ ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹಾಗೂ ಪಂಡಿತ್ ಚಿದ್ರಿ ಇಬ್ಬರೂ ಮತಗಟ್ಟೆಗೆ ಬರುತ್ತಿದ್ದಾಗ ಬಿಜೆಪಿಯ ಕೆಲ ಮುಖಂಡರು ಮತಗಟ್ಟೆ ಎದುರು ಕುಳಿತುಕೊಂಡಿದ್ದರು. ಜಿಪಂ ಅಧ್ಯಕ್ಷರು ಮತಗಟ್ಟೆ ಹೊರಗಿನಿಂದಲೇ ಭೇಟಿ ನೀಡಿ, ಮತಗಟ್ಟೆ ಒಳಗೆ ಹೊಗಬೇಡಿ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಇದರಿಂದ ಕೋಪಗೊಂಡ ಜಿಪಂ ಅಧ್ಯಕ್ಷರು ಪೊಲೀಸರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ಮನಬಂದಂತೆ ಧಳಿಸಿದ್ದಾರೆ ಎಂದು ಗಾಯಗೊಂಡ ಗ್ರಾಪಂ ಸದಸ್ಯರು ತಿಳಿಸಿದ್ದಾರೆ.
ಪಂಡರಿಕೃಷ್ಣಪ್ಪ ಮೇತ್ರೆ, ಗ್ರಾಪಂ ಮಾಜಿ ಸದಸ್ಯ ಗೋವಿಂದರೆಡ್ಡಿ ವಿಠಲರೆಡ್ಡಿ , ಗ್ರಾಪಂ ಸದಸ್ಯರಾದ ಗೋಪಾಲ ರೆಡ್ಡಿ ಘಾಳೆಪ್ಪ, ಗೋವಿಂದ ರೆಡ್ಡಿ ಅಂಜಾರೆಡ್ಡಿ ಪೊಲೀಸರ ಏಟಿನಿಂದ ಗಾಯಗೊಂಡು ಚಿಂತಾಕಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲು ಮತ್ತು ತಲೆಗೆ ಗಾಯವಾಗಿವೆ ಎಂದು ಚಿಂತಾಕಿ ವೈದ್ಯ ಶಿವಕುಮಾರ ತಿಳಿಸಿದ್ದಾರೆ. ಸ್ಥಳಕ್ಕೆ ಔರಾದ ಸಿಪಿಐ ರವೀಂದ್ರನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಂತಾಕಿ ಪಿಎಸ್‌ಐ ಬಾಸುಮಿಯ್ನಾ ಅವರು ಜಿಲ್ಲಾ ಪಂಚಾಯತ ಅಧ್ಯಕ್ಷರ ಕೈಗೊಂಬೆಯಾಗಿ ಬಿಜೆಪಿ ಮುಖಂಡರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಪಿಎಸ್‌ಐ ವಿರುದ್ಧ ದೂರು ನೀಡಲು ಹೋದಾಗ, ಪಿಎಸ್‌ಐ ಹಾಗೂ ಔರಾದ ಸಿಪಿಐ ಅವರು, ಪಿಎಸ್‌ಐ ವಿರುದ್ಧ ದೂರು ನೀಡುವುದು ಬೇಡ ಎಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಭೆ ನಡೆಸಿದರು. ಆದರೆ ಇದರಿಂದ ಪ್ರಯೊಜನವಾಗಲಿಲ್ಲ. ನಂತರ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಂಡೆಪ್ಪ ಕಂಟೆ ಬಿಜೆಪಿ ಮುಖಂಡರ ಮನವೊಲಿಸಿದ್ದಾರೆ.
ಸಾರ್ವಜನಿಕರಿಂದ ಕಲ್ಲು ತೂರಾಟ: ಪಿಎಸ್‌ಐ ಬಾಸುಮಿಯ್ನಾ ಅವರು ಲಾಠಿ ಪ್ರಹಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಕೇಲ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಸೇವೆ ನಿರತ ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎಂಬುದು ತಿಳಿದು ಬಿಜೆಪಿಯವರು ನಮ್ಮ ಮೇಲೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ತಿಳಿಸಿದ್ದಾರೆ.
ದೂರು ದಾಖಲು: ಚಿಂತಾಕಿ ಮತಗಟ್ಟೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆ ಹಾಗೂ ಚುನಾವಣೆ ಸಿಬ್ಬಂದಿಗೆ ಸೇವೆಗೆ ಅಡೆತಡೆ ಮಾಡಲಾಗಿದೆ ಎಂದು ಪಿಎಸ್‌ಐ ಬಾಸುಮಿಯ್ನಾ ದೂರು ನೀಡಿದ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ