Advertisement

ಬಾಲಕಿಯರಿಗೆ ಅಗತ್ಯ ಸೌಲಭ್ಯ ಒದಗಿಸಿ

04:43 PM Apr 04, 2019 | Team Udayavani |

ಯಾದಗಿರಿ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರ ಸಂಸ್ಥೆಯಲ್ಲಿ ವಿವಿಧ ರೀತಿಯ ಸಮಸ್ಯೆಯಲ್ಲಿ ಇರುವ ಮಕ್ಕಳು ವಾಸಿಸುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮಕ್ಕಳಿಗೆ
ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಂಡು ರಾಜ್ಯದಲ್ಲಿಯೆ ಒಂದು ಮಾದರಿ ಸಂಸ್ಥೆಯಾಗಿ ಪರಿವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಹಾಗೂ ಸುರಕ್ಷಿತ ವ್ಯವಸ್ಥೆ ಪರಿಶೀಲಿಸಿದ ಅವರು, ಮಕ್ಕಳನ್ನು ಖುದ್ದು ವಿಚಾರಿಸಿದರು.

ಮಕ್ಕಳಿಗೆ ನೀಡುವ ಊಟ, ವಸತಿ ವ್ಯವಸ್ಥೆಗಳ ಬಗ್ಗೆ ಹಾಗೂ ಬಾಲಮಂದಿರದಲ್ಲಿ ಯಾವುದಾದರೂ ರೀತಿಯ ಶೋಷಣೆಗಳು ನಡೆಯುತ್ತಿವೆಯೇ? ಯಾವುದಾದರೂ ಸಮಸ್ಯೆಗಳಿವೆಯೇ ಎಂದು ಪ್ರಶ್ನಿಸಿ ಮಾಹಿತಿ ಪಡೆದರು. ಬಾಲಮಂದಿರದಲ್ಲಿ ಲಭ್ಯವಿರುವ ಅವಕಾಶ ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳುವಂತೆ ಬಾಲಕಿಯರಿಗೆ ಕಿವಿಮಾತು ಹೇಳಿದರು.

ಬಾಲ ಮಂದಿರದಲ್ಲಿ ಇರುವ ಮಕ್ಕಳ ಸುರಕ್ಷತೆ, ಶೈಕ್ಷಣಿಕ ಅವಕಾಶಗಳು, ಆರೋಗ್ಯ ಚಿಕಿತ್ಸಾ ಸೌಲಭ್ಯಗಳು ಮಹತ್ವದ ವಿಷಯಗಳಾಗಿವೆ. ಅವುಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಬಾಲಕಿಯರ ಮಂದಿರ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಜಾಗೃತರಾಗಿ ಕರ್ತವ್ಯ ನಿರ್ವಹಿಸಲು ಅಧೀಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು. ಎಲ್ಲರನ್ನೂ ಉತ್ತಮವಾಗಿ ಆರೈಕೆ ಮಾಡುವಂತೆ ನಿರ್ದೇಶನ ನೀಡಿದರು. ಬಾಲಮಂದಿರಕ್ಕೆ ತನ್ನದೇ ಆದ ಸ್ವಂತ ಕಟ್ಟಡ ಇದೆ. ಸುರಕ್ಷತಾ ವ್ಯವಸ್ಥೆ ಸಮಾಧಾನಕರವಾಗಿದೆ. 2017-18ನೇ ಸಾಲಿನ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ ಡಿಬಿ)ಯ ಮ್ಯಾಕ್ರೋ ಕ್ರಿಯಾ ಯೋಜನೆಯಡಿ ಹೊಸ ಕಟ್ಟಡದಲ್ಲಿ ಅವಶ್ಯವಿರುವ ಮೂಲಭೂತ ಸೌಲಭ್ಯ ಹಾಗೂ ಪೀಠೊಪಕರಣ ಒದಗಿಸಲಾಗಿದೆ. ಅಗತ್ಯವಿದ್ದರೆ ಇನ್ನಷ್ಟು ಬೆಡ್‌, ಬಟ್ಟೆ ಒದಗಿಸುವಂತೆ ಸೂಚಿಸಿದರು.

ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಪಾಟೀಲ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next