Advertisement

ಪ್ರತಿ ಜಿಲ್ಲೆಗೆ 2 ಕೋವಿಡ್‌ ಪರೀಕ್ಷಾ ಲ್ಯಾಬ್‌

11:18 AM May 10, 2020 | Naveen |

ದಾವಣಗೆರೆ: ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲೂ ಎರಡರಂತೆ ರಾಜ್ಯದಲ್ಲಿ ಒಟ್ಟು 60 ಕೋವಿಡ್‌ ಪರೀಕ್ಷಾ ಲ್ಯಾಬ್‌ಗಳನ್ನು ಸ್ಥಾಪಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಹೇಳಿದ್ದಾರೆ.

Advertisement

ಶನಿವಾರ, ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೋವಿಡ್ ನಿಗ್ರಹಕ್ಕಾಗಿ ರಾಜ್ಯದಲ್ಲಿರುವ 60 ಮೆಡಿಕಲ್‌ ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷೆ ಲ್ಯಾಬ್‌ ಸ್ಥಾಪಿಸಲು ಸರ್ಕಾರ ಈಗಾಗಲೇ ಆದೇಶಿಸಿದೆ. ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್‌ ಸಿದ್ದಗೊಳ್ಳುವ ವಿಶ್ವಾಸವಿದೆ ಎಂದರು.

ದಾವಣಗೆರೆಯ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯ ಪಿಸಿಆರ್‌ ಲ್ಯಾಬ್‌ನಲ್ಲಿ ಇಂದಿನಿಂದ ಕೋವಿಡ್‌ ಪರೀಕ್ಷೆಗೆ ಚಾಲನೆ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲೂ ಕೋವಿಡ್‌ ಟೆಸ್ಟಿಂಗ್‌ ಲ್ಯಾಬ್‌ ಸಿದ್ಧಗೊಳ್ಳಲಿದ್ದು, ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು ತಪ್ಪಲಿದೆ. ಖಾಸಗಿ ಲ್ಯಾಬ್‌ಗಳಿಗೆ ದರ ನಿಗದಿಗೊಳಿಸಿದ್ದು, ಸರ್ಕಾರದ ವತಿಯಿಂದಲೇ ಕಿಟ್‌ ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಾರಂಭದಲ್ಲಿ ರಾಜ್ಯದ ಕೇವಲ ಎರಡು ಲ್ಯಾಬ್‌ ಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದ್ದುದರಿಂದ ದಿನಕ್ಕೆ 250 ರಿಂದ 300 ಟೆಸ್ಟ್‌ ಮಾತ್ರ ಸಾಧ್ಯವಾಗುತ್ತಿತ್ತು. ಇದೀಗ ಸುಮಾರು 30 ಲ್ಯಾಬ್‌ಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೇ ಅಂತ್ಯದೊಳಗೆ 60 ಲ್ಯಾಬ್‌ಗಳು ಕಾರ್ಯ ನಿರ್ವಹಿಸಲಿದ್ದು, ದಿನವೊಂದಕ್ಕೆ ಸುಮಾರು 5 ರಿಂದ 5,500 ಪರೀಕ್ಷೆ ಮಾಡಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ ಮಾತ್ರ ಕೋವಿಡ್ ನಿಗ್ರಹ ಸಾಧ್ಯ. ಜನರ ಜೀವ ಮತ್ತು ಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದ್ದು, ಜನರು ಸಹಕರಿಸಬೇಕೆಂದು ಮನವಿ ಮಾಡಿದರು. ದಾವಣಗೆರೆಯಲ್ಲಿ ಶನಿವಾರ 6 ಕೊರೊನಾ ಪಾಸಿಟಿವ್‌ ಪ್ರಕರಣ ವರದಿಯಾಗಿವೆ. ಆದರೆ ಈ ಪ್ರಕರಣಗಳು ಸೋಂಕಿತ ವ್ಯಕ್ತಿಯ ಸಂಪರ್ಕದವರಾಗಿದ್ದಾರೆ. ಚಿಗಟೇರಿ ಆಸ್ಪತ್ರೆ ಕೋವಿಡ್‌ ಆಸ್ಪತ್ರೆಯಾಗಿದ್ದು 300 ಹಾಸಿಗೆಗಳ ವ್ಯವಸ್ಥೆ ಇದೆ. ಇತರೆ ಆರೋಗ್ಯದ ಸಮಸ್ಯೆಗಳಿಗೆ ಬಾಪೂಜಿ, ಎಸ್‌ಎಸ್‌ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಖಾಸಗಿ ಆಸ್ಪತ್ರೆಗಳು, ಈ ವೇಳೆ ತೆರೆದು ಚಿಕಿತ್ಸೆ ನೀಡದಿದ್ದಲ್ಲಿ ಅವರ ಪರವಾನಗಿ ರದ್ದುಪಡಿಸಲಾಗುವುದು ಎಂದರು.

Advertisement

ದಾವಣಗೆರೆಯ ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿರುವ ಹೌಸ್‌ಸರ್ಜನ್‌ ಮತ್ತು ಪಿಜಿ ವಿದ್ಯಾರ್ಥಿಗಳಿಗೆ 18 ತಿಂಗಳಿಂದ ಶಿಷ್ಯಭತ್ಯೆ ನೀಡದ ಮಾಹಿತಿ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಭತ್ಯೆ ಪಾವತಿಯಾದ ಬಗ್ಗೆ ಆಡಿಟ್‌ ಆಕ್ಷೇಪಣೆ ಹಿನ್ನೆಲೆ ಭತ್ಯೆ ನಿಲ್ಲಿಸಲಾಗಿದೆ. ಈ ಬಗ್ಗೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಕ್ಷೇತ್ರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು, ಗೇಟ್‌ನಲ್ಲಿ ಕೆಲಸ ಮಾಡುವವರಿಗೆ ಗುಣಮಟ್ಟದ ಮಾಸ್ಕ್ ನೀಡಬೇಕು. ಗ್ರಾಮಗಳಲ್ಲಿ ಆರ್‌ಓ ಪ್ಲಾಂಟ್‌ಗಳು ಕೆಟ್ಟು ಹೋಗಿದ್ದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗ 5 ರೂ. ನೀಡಿ ನೀರು ಪಡೆಯುವುದು ಕೂಡ ಕಷ್ಟವಾಗಿದ್ದು, ಆರ್‌ಓ ಪ್ಲಾಂಟ್‌ಗಳಲ್ಲಿ ಉಚಿತವಾಗಿ ನೀರು ಕೊಡಬೇಕೆಂದರು. ಜಿಪಂ ಸಿಇಒ ಪದ್ಮಾ ಬಸವಂತಪ್ಪ ಪ್ರತಿಕ್ರಿಯಿಸಿ, ಎಎಂಸಿ ನೀಡಲಾದ ಏಜೆನ್ಸಿ ಇದನ್ನು ನಿರ್ವಹಣೆ ಮಾಡಬೇಕು. ಉಚಿತವಾಗಿ ನೀರು ಕೊಡಲು ಬರುವುದಿಲ್ಲ. ವೆಚ್ಚವನ್ನು ಗ್ರಾಪಂನಿಂದ ಭರಿಸಬಹುದೆಂದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಕುಡಿಯುವ ನೀರು ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವರೊಂದಿಗೆ ಇನ್ನೊಂದು ದಿನ ಸಭೆ ಕರೆದು ಚರ್ಚಿಸೋಣ. ಈಗ ಕೋವಿಡ್‌ ನಿಯಂತ್ರಣ ಕುರಿತು ಹೆಚ್ಚಿನ ಒತ್ತು ನೀಡಬೇಕು. ತಾಲೂಕುಗಳಿಗೆ ದಾವಣಗೆರೆಯಿಂದ ಜನರು ಹೋಗುತ್ತಿರುವುದ ಬಗ್ಗೆ ದೂರುಗಳಿದ್ದು, ಎಸ್‌ಪಿಯವರು ಚೆಕ್‌ಪೋಸ್ಟ್‌ನಲ್ಲಿ ಬಿಗಿಗೊಳಿಸಬೇಕು ಎಂದು ಹೇಳಿದರು.

ಕಂಟೈನ್‌ಮೆಂಟ್‌ ಝೋನ್‌ನ ಎಲ್ಲರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದರೆ ಉತ್ತಮ. ಇತರೆ ಸಮಸ್ಯೆಗೆಂದು ಆಸ್ಪತ್ರೆಗೆ ಹೋಗುವವರನ್ನು ಅನಾವಶ್ಯಕವಾಗಿ ಕ್ವಾರಂಟೈನ್‌ ಮಾಡುವುದು ಬೇಡ ಎಂದು ವಿಪ ಸದಸ್ಯ ಅಬ್ದುಲ್‌ ಜಬ್ಟಾರ್‌ ಹೇಳಿದರು. ಎಸ್ಪಿ ಹನುಮಂತರಾಯ ಮಾತನಾಡಿ, ದಾವಣಗೆರೆಯಲ್ಲಿ ಕೊರೊನಾ ಸೋಂಕಿನ ಮೂಲಗಳನ್ನು ಎರಡು ರೀತಿಯಲ್ಲಿ ಪತ್ತೆ ಹಚ್ಚಲಾಗುತ್ತಿದೆ. ಒಂದು ಸರ್ವೇಲೆನ್ಸ್‌ ತಂಡ ಮತ್ತು ಸಿಡಿಆರ್‌ ವರದಿ ಮೂಲಕ. ಸೋಂಕು ಹರಡಿದ ಇಂಡೆಕ್ಸ್‌ ಕೇಸ್‌ಗಳಾದ ರೋಗಿ ಸಂಖ್ಯೆ
533 ಮತ್ತು 556 ಪರಸ್ಪರ ಸಂಬಂಧಿ ಕರಾಗಿದ್ದು, ರೋಗಿ ಸಂಖ್ಯೆ 533ರ ಪ್ರಾಥಮಿಕ ಸಂಪರ್ಕದಲ್ಲಿದ್ದ ರೋಗಿ ಸಂಖ್ಯೆ 616 ಮತ್ತು 617 ಇವರು ಈರುಳ್ಳಿ ಲಾರಿಗಳ ಮೂಲಕ ಕೋವಿಡ್‌ ಇರುವ ಬಳ್ಳಾರಿ, ಬಾಗಲಕೋಟೆ, ಹಾಸನ ಜಿಲ್ಲೆಗಳಲ್ಲಿ ತಿರುಗಾಡಿ ಬಂದಿದ್ದಾರೆ. ಬಹುತೇಕರಲ್ಲಿ ಕೋವಿಡ್‌ ಲಕ್ಷಣಗಳಿಲ್ಲದವರಾಗಿರುವುದರಿಂದ ಬೇರೆಯವರಿಗೆ ಸೋಂಕು ಹಚ್ಚಿರುವ ಶಂಕೆ ಇದೆ. ಲಾಕ್‌ ಡೌನ್‌ ವೇಳೆ ಅಗತ್ಯ ವಸ್ತುಗಳ, ತರಕಾರಿಗಳ ಗಾಡಿಗಳ ಓಡಾಟದಿಂದ ಸೋಂಕು ಇಲ್ಲಿ ಹರಡಿದ್ದಾರೆಂಬ ನಿಲುವಿಗೆ ಬರಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಾಘವನ್‌ ಕೋವಿಡ್‌ ಪ್ರಕರಣಗಳ ಬಗ್ಗೆ ಹಾಗೂ ಜಿಲ್ಲಾ ಸರ್ಜನ್‌ ಡಾ| ನಾಗರಾಜ್‌, ಜಿಲ್ಲಾಸ್ಪತ್ರೆ ಕೋವಿಡ್‌ ಆಸ್ಪತ್ರೆಯಲ್ಲಿನ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಹರಿಹರ ಶಾಸಕ ಎಸ್‌.ರಾಮಪ್ಪ, ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿದರು. ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ, ಜಿಪಂ ಅಧ್ಯಕ್ಷೆ ಯಶೋದಮ್ಮ, ಮೇಯರ್‌ ಬಿ.ಜಿ. ಅಜಯಕುಮಾರ್‌, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ, ಕೋವಿಡ್‌ ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next