ಸುಬ್ರಹ್ಮಣ್ಯ: ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಎರಡು ಪ್ರಮುಖ ಪುಣ್ಯ ನದಿಗಳ ಸ್ವಚ್ಛತೆ ಕಾರ್ಯವನ್ನು ಯುವ ಬ್ರಿಗೇಡ್ ಕುಮಾರ ಸಂಸ್ಕಾರ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದು ನದಿ ಸ್ವಚ್ಛತೆ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಯವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಸಾರಥ್ಯದಲ್ಲಿ 200ಕ್ಕೂ ಅಧಿಕ ಮಂದಿ ಯುವ ಬ್ರಿಗೇಡ್ ಕಾರ್ಯಕರ್ತರು ನದಿ ಸ್ವಚ್ಛತೆ ಕಾರ್ಯ ಆರಂಭಿಸಿದರು. ಆರಂಭದಲ್ಲಿ ದೇವಸ್ಥಾನ ಸಮೀಪದ ದರ್ಪಣ ತೀರ್ಥ ನದಿಯಲ್ಲಿ ಸ್ವಚ್ಛತೆ ಆರಂಭಗೊಂಡಿತು. ಕಾರ್ಯಕರ್ತರು ನದಿಯಲ್ಲಿನ ತ್ಯಾಜ್ಯವನ್ನು ಹೊರತೆಗೆದರು. ಈ ವೇಳೆ ಸುಮಾರು 5ರಿಂದ 6 ಟನ್‌ಗಳಷ್ಟು ತ್ಯಾಜ್ಯ ದೊರಕಿದೆ. ಬಳಿಕ ಕುಮಾರಧಾರಾ ನದಿಯ ಸ್ನಾನಘಟ್ಟ ಹಾಗೂ ಅದರ ಮೇಲ್ಭಾಗದಲ್ಲಿ ನದಿ ಸ್ವಚ್ಛಗೊಳಿಸಲಾಯಿತು. ಯಾತ್ರಾರ್ಥಿಗಳು ಪುಣ್ಯ ಸ್ನಾನದ ವೇಳೆ ನೀರಿನಲ್ಲಿ ಎಸೆದಿದ್ದ ಬಟ್ಟೆ, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳನ್ನು ನದಿ ನೀರಿನಿಂದ ಹೊರತೆಗೆಯಾಯಿತು.
ಬೆಳಗ್ಗೆ ಆರಂಭಗೊಂಡ ತ್ಯಾಜ್ಯ ಹೆಕ್ಕುವ ಕಾರ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಹಾಗೂ ರಾಜ್ಯ ಯುವ ಬ್ರಿಗೇಡ್ ಸ್ವಯಂ ಸೇವಕರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಯುವ ಬ್ರಿಗೇಡ್ ಜತೆ ಸ್ವಚ್ಛತೆ ಕಾರ್ಯದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ಮಹಿಳಾ ಕಾರ್ಯಕರ್ತರು ಕೈ ಜೋಡಿಸಿದರು. ನಮ್ಮ ಸುಬ್ರಹ್ಮಣ್ಯ ಯುವ ಘಟಕದ ಸದಸ್ಯರು ಇವರಿಗೆ ಪೂರ್ಣ ಸಹಕಾರ ನೀಡಿದರು.
ಸ್ವಚ್ಛತೆಯಲ್ಲಿ ತೊಡಗಿದ ಯುವ ಬ್ರಿಗೇಡ್ ಸ್ವಯಂ ಸೇವಕರಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಸ್ಥಳಿಯ ಗ್ರಾ.ಪಂ. ಸಂಪೂರ್ಣ ಸಹಕಾರ ನೀಡಿದೆ. ಪಿಡಿಒ ಮುತ್ತಪ್ಪ ಹಾಗೂ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ. ದಿನವಿಡೀ ತಂಡದ ಜತೆಗಿದ್ದು, ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಿದರು. ಸಂಗ್ರಹಿಸಿದ ಟನ್‌ಗಟ್ಟಲೆ ತ್ಯಾಜ್ಯವನ್ನು ಪಂಚಾಯತಿನ ತ್ಯಾಜ್ಯ ಸಂಗ್ರಹ ಘಟಕಕ್ಕೆ ಒಯ್ದು ಶೇಖರಿಸಿಡಲಾಯಿತು.
ಕ್ಷೇತ್ರದಲ್ಲಿ ಪುಣ್ಯ ನದಿಗಳ ಸ್ಚಚ್ಛತೆ ಕಾರ್ಯಕ್ರಮವು ರವಿವಾರವೂ ನಡೆ ಯಲಿದೆ. ಎರಡನೆ ದಿನ ನಡೆಯುವ ಸ್ವಚ್ಛತೆ ಕಾರ್ಯದಲ್ಲಿ ಸಾವಿರಕ್ಕೂ ಅಧಿಕ ಸ್ವಯಂ ಸೇವಕರು, ಕಾರ್ಯಕರ್ತರು ಪಾಲ್ಗೊಳ್ಳಲಿ ದ್ದಾರೆ, ಯುವ ಬ್ರಿಗೇಡ್ ಇದುವರೆಗೆ ಕಾವೇರಿ, ಭೀಮ, ಧರ್ಮಸ್ಥಳದ ನೇತ್ರಾವತಿ ಸಹಿತ ಏಳು ಪ್ರಮುಖ ನದಿ ಹಾಗೂ 150ಕ್ಕೂ ಹೆಚ್ಚು ಕಲ್ಯಾಣಿಗಳ ಸ್ವಚ್ಛತೆತೆ ಕಾರ್ಯ ನಡೆಸಿದೆ. ಜತೆಗೆ ನದಿಗಳ ಸ್ವಚ್ಛತೆ ಕುರಿತು ಜನತೆಯಲ್ಲಿ ಜಾಗೃತಿ ಕೂಡ ನಡೆಸಲಾಗಿದೆ ಎಂದು ಯುವಬ್ರಿಗೇಡ್ ತಂಡದ ಮನೀಶ್ ಗೂನಡ್ಕ ಮಾಹಿತಿ ನೀಡಿದರು.