Advertisement

ಪಾಕ್‌ ಪ್ರೇರಿತ ಉಗ್ರರ ದಾಳಿ ಅಕ್ಷಮ್ಯ ಅಪರಾಧ

11:42 PM Apr 21, 2023 | Team Udayavani |

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಭದ್ರತೆಯ ಹೊಣೆಗಾರಿಕೆಯನ್ನು ಕೇಂದ್ರ ಸರಕಾರ ವಹಿಸಿಕೊಂಡ ಬಳಿಕ ಅಲ್ಲಿನ ಪರಿಸ್ಥಿತಿ ತಹಬದಿಗೆ ಬಂದಿದೆ. ಜಮ್ಮು-ಕಾಶ್ಮೀರದಲ್ಲಿನ ಉಗ್ರರ ಅಡಗುದಾಣಗಳನ್ನು ನಾಶಪಡಿಸಿದ್ದೇ ಅಲ್ಲದೆ ಉಗ್ರರ ಕೃತ್ಯಗಳಿಗೆ ಪರೋಕ್ಷ ನೆರವು ನೀಡುತ್ತಿದ್ದ ಸ್ಥಳೀಯರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಕೇಂದ್ರ ಸರಕಾರ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಭದ್ರತಾ ಪಡೆಗಳ ಕಟ್ಟುನಿಟ್ಟಿನ ನಿಗಾ, ವ್ಯಾಪಕ ಗಸ್ತು ಕಾರ್ಯದ ನಡುವೆಯೂ ರಾಜ್ಯದ ಅಲ್ಲಲ್ಲಿ ಅದರಲ್ಲೂ ಮುಖ್ಯವಾಗಿ ಪಾಕಿಸ್ಥಾನಕ್ಕೆ ತಾಗಿಕೊಂಡಿರುವ ಗಡಿ ಭಾಗಗಳಲ್ಲಿ ಉಗ್ರರು, ನಾಗರಿಕರು ಮತ್ತು ಭದ್ರತಾ ಕಾರ್ಯದಲ್ಲಿ ನಿರತರಾಗಿರುವ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿರುವ ಪ್ರಕರಣಗಳು ನಡೆಯುತ್ತಿರುವುದು ಒಂದಿಷ್ಟು ಆತಂಕಕ್ಕೀಡು ಮಾಡಿದೆ. ಗುರುವಾರದಂದು ಜಮ್ಮು-ಕಾಶ್ಮೀರದ ಪೂಂಛ ಜಿಲ್ಲೆಯಲ್ಲಿ ಸೇನಾ ಟ್ರಕ್‌ ಒಂದನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿರುವುದು ದೇಶದ ಜನತೆಯಲ್ಲಿ ದಿಗ್ಭ್ರಮೆ ಮೂಡಿಸಿದೆ.

Advertisement

ವಾರದ ಹಿಂದೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಇದರ ಬೆನ್ನಲ್ಲೇ ಉಗ್ರರು ಮತ್ತೆ ಬಾಲಬಿಚ್ಚಿರುವುದು ಜಮ್ಮು-ಕಾಶ್ಮೀರದಲ್ಲಿನ ಶಾಂತಿಯನ್ನು ಕದಡಲು ಪಾಕಿಸ್ಥಾನ ಪ್ರೇರಿತ ಉಗ್ರರು ಪ್ರಯತ್ನ ನಡೆಸುತ್ತಿರುವ ಅನುಮಾನಗಳು ದಟ್ಟವಾಗುತ್ತಿವೆ. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ರೈಫ‌ಲ್ಸ್‌ ಘಟಕದ ಯೋಧರನ್ನೇ ಗುರಿಯಾಗಿಸಿ ಉಗ್ರರು ಈ ದಾಳಿ ನಡೆಸಿದ್ದಾರೆ. ಭಾರೀ ಮಳೆ ಮತ್ತು ಮೋಡ ಕವಿದ ವಾತಾವರಣದ ಲಾಭ ಪಡೆದ ಉಗ್ರರು ಸೇನಾ ಟ್ರಕ್‌ನ್ನು ಗುರಿಯಾಗಿಸಿ ಗ್ರೆನೇಡ್‌ ದಾಳಿ ನಡೆಸಿದ್ದು ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬಂತೆ ಭಾಸವಾಗುತ್ತಿದೆ.

ದಾಳಿಕೋರ ಉಗ್ರರ ಪತ್ತೆಗಾಗಿ ಸಶಸ್ತ್ರ ಪಡೆಗಳು, ಎನ್‌ಐಎ ಘಟನ ಸ್ಥಳದ ಸುತ್ತಮುತ್ತ ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಕಾರ್ಯಾಚರಣೆಗಾಗಿ ಡ್ರೋನ್‌, ಶ್ವಾನದಳವನ್ನೂ ಬಳಸಿಕೊಳ್ಳಲಾಗಿದೆ. ದಾಳಿ ನಡೆದ ಸ್ಥಳವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ಉಗ್ರರ ಶೋಧಕಾರ್ಯದಲ್ಲಿ ನಿರತವಾಗಿದ್ದರೆ ತನಿಖಾ ತಂಡಗಳು ಉಗ್ರರು ದಾಳಿ ವೇಳೆ ಬಳಸಿದ ಶಸ್ತ್ರಾಸ್ತ್ರಗಳ ಬಗೆಗೆ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಕಾರ್ಯದಲ್ಲಿ ನಿರತವಾಗಿವೆ. ಜತೆಯಲ್ಲಿ ಗಡಿ ಜಿಲ್ಲೆಗಳಾದ ರಜೌರಿ ಮತ್ತು ಪೂಂಛನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು ಎಲ್‌ಒಸಿಯುದ್ದಕ್ಕೂ ಕಣ್ಗಾವಲನ್ನು ಹೆಚ್ಚಿಸಲಾಗಿದೆ. ಈ ದಾಳಿಯಲ್ಲಿ ಐವರು ಉಗ್ರರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಉಗ್ರರಿಗೆ ನಿಷೇಧಿತ ಉಗ್ರ ಸಂಘಟನೆಯಾಗಿರುವ ಲಷ್ಕರ್‌-ಇ-ತಯ್ಯಬಾದ ನಂಟು ಇರುವ ಸಾಧ್ಯತೆಯ ಬಗೆಗೂ ತನಿಖೆ ನಡೆಸಲಾಗುತ್ತಿದೆ.

ಮೇಯಲ್ಲಿ ಶ್ರೀನಗರಲ್ಲಿ ಜಿ 20 ಟೂರಿಸಂ ವರ್ಕಿಂಗ್‌ ಗ್ರೂಪ್‌ನ ಸಭೆ ನಿಗದಿಯಾಗಿದೆ. ಶ್ರೀನಗರದಲ್ಲಿ ಈ ಸಭೆ ಆಯೋಜಿಸಿರುವ ಸಂಬಂಧ ಪಾಕಿಸ್ಥಾನ ಈಗಾಗಲೇ ಅಪಸ್ವರ ಎತ್ತಿದೆ. ಜಮ್ಮು-ಕಾಶ್ಮೀರದಲ್ಲಿನ ಶಾಂತಿಯನ್ನು ಕದಡುವ ಮೂಲಕ ಶ್ರೀನಗರದಲ್ಲಿ ಸಭೆ ನಡೆಸುವುದು ಭದ್ರತಾ ದೃಷ್ಟಿಯಿಂದ ಸೂಕ್ತವಲ್ಲ ಎಂದು ಬಿಂಬಿಸಲು ಪಾಕಿಸ್ಥಾನ ಪ್ರೇರಿತ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂಬ ಗುಮಾನಿಯೂ ಇದೆ. ಈ ಎಲ್ಲ ಸಾಧ್ಯತೆಗಳ ಬಗೆಗೆ ಭದ್ರತಾ ಪಡೆಗಳು ಮತ್ತು ತನಿಖಾ ಸಂಸ್ಥೆಗಳು ಲಕ್ಷ್ಯ ಹರಿಸಿವೆ. ಜಮ್ಮು-ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾವಿಸಿ ಅದನ್ನೊಂದು ಜೀವಂತ ವಿವಾದವನ್ನಾಗಿಸುವ ಹುನ್ನಾರವನ್ನು ನಡೆಸುತ್ತಲೇ ಬಂದಿರುವ ಪಾಕಿಸ್ಥಾನ ತನ್ನ ಈ ಸಂಚಿನ ಭಾಗವಾಗಿಯೇ ಉಗ್ರರನ್ನು ಛೂ ಬಿಟ್ಟು ಈ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಉಗ್ರರನ್ನು ಸದೆ ಬಡಿಯುವ ಜತೆಯಲ್ಲಿ ಪಾಕಿಸ್ಥಾನದ ಈ ಷಡ್ಯಂತ್ರವನ್ನು ಬಯಲಿಗೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನವನ್ನು ಮತ್ತೂಮ್ಮೆ ಬೆತ್ತಲಾಗಿಸಬೇಕು. ಸಂಪೂರ್ಣ ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಜನರು ಉಣ್ಣಲು ಆಹಾರವಿಲ್ಲದೆ ಒದ್ದಾಡುತ್ತಿದ್ದರೂ ಅದು ಭಾರತದ ವಿರುದ್ಧ ಪರೋಕ್ಷ ಸಮರದಲ್ಲಿ ನಿರತವಾಗಿರುವುದು ಹಾಸ್ಯಾಸ್ಪದ ಮಾತ್ರವಲ್ಲದೆ ಅಕ್ಷಮ್ಯ ಅಪರಾಧವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next