Advertisement
ನಗರದ ಉಪ ವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಅತಿಯಾದ ಮಳೆಯಿಂದ ಆದ ಹಾನಿಯ ಕುರಿತು ಕರೆಯಲಾಗಿದ್ದ ವಿವಿಧ ಅಧಿಕಾರಿಗಳ ಜೊತೆಗಿನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ನಷ್ಟದ ಅಂದಾಜು ತಯಾರು ಮಾಡಿ ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು. ಮಳೆ ಪ್ರಮಾಣ ಕಡಿಮೆಯಾದ ನಂತರ ಇನ್ನೊಂದು ಸುತ್ತಿನಲ್ಲಿ ಸಮಗ್ರ ಹಾನಿ ಅಧ್ಯಯನ ನಡೆಸುವಂತೆ ಸೂಚನೆ ನೀಡಿದರು.
Related Articles
Advertisement
ಆ. 15ರವರೆಗೂ ಇದೇ ರೀತಿ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಯಾವುದೇ ಇಲಾಖೆಯ ಅಧಿಕಾರಿಗಳು ರಜೆ ಹಾಕುವಂತಿಲ್ಲ. ರಜೆ ಹಾಕಿ ಹೋದವರು ಪುನಃ ಕರ್ತವ್ಯಕ್ಕೆ ಹಾಜರಾಗಬೇಕು. ಹಾನಿ ಸಂಭವಿಸಿದಾಗ ನೀವು ಸೂಕ್ತ ನಿಗಾ ವಹಿಸದೆ ಹೋದಲ್ಲಿ ನಿಮ್ಮನ್ನು ಮೊದಲು ಅಮಾನತ್ತು ಮಾಡುವ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಸಬೂಬು ಹೇಳಬೇಡಿ. ಅಗತ್ಯ ಸಂದರ್ಭ ಬಂದರೆ ಗೋಶಾಲೆ, ಗಂಜಿಕೇಂದ್ರ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಸಂಬಂಧ ತಕ್ಷಣ ಅಂದಾಜು ನಷ್ಟದ ಪಟ್ಟಿ ಮಾಡಿ ಸಲ್ಲಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಬೀಸನಗದ್ದೆಯಲ್ಲಿ ದೋಣಿ ವ್ಯವಸ್ಥೆ ಮಾಡಲಾಗಿದ್ದು, ತಾಲೂಕಿನ ಕೆಲವು ಕಡೆಗಳಲ್ಲಿ ನೆರೆ ಪರಿಸ್ಥಿತಿ ಇರುವುದರಿಂದ ಶನಿವಾರ ಎನ್‌ಡಿಆರ್‌ಎಫ್ ತಂಡ ಬರಲಿದೆ. ಅವರ ಜೊತೆ ಸ್ಥಳೀಯ ಅಗ್ನಿಶಾಮಕ ದಳವೂ ಸೇರಿಕೊಂಡು ಸಂಕಷ್ಟದಲ್ಲಿರುವವರನ್ನು ಪಾರು ಮಾಡಬೇಕು. ರಕ್ಷಣಾ ಸಾಮಗ್ರಿಗಳು ಅಗತ್ಯವಿದ್ದಲ್ಲಿ ನನ್ನ ಗಮನಕ್ಕೆ ತಂದರೆ ತಕ್ಷಣ ಪೂರೈಸುವುದಾಗಿ ಭರವಸೆ ನೀಡಿದರು.
ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್, ಎಎಸ್‌ಪಿ ಯತೀಶ್ ಎನ್., ಪೌರಾಯುಕ್ತ ಎಸ್. ರಾಜು, ತಹಶೀಲ್ದಾರ್ ಚಂದ್ರಶೇಖರ್ ಮತ್ತಿತರರು ಇದ್ದರು.
ದರೋಡೆಗೆ ಬಂದವರೆಂಬ ಅನುಮಾನ!: ಇತ್ತೀಚೆಗೆ ಒಬ್ಬರು, ನಮ್ಮನ್ನು ತೆರವುಗೊಳಿಸಲು ಬಂದವರೆಂದು ಮನೆಯಿಂದ ಕಳುಹಿಸಿ ದರೋಡೆ ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನೆರೆ ಪರಿಹಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ತಮ್ಮ ಗುರುತಿನ ಕಾರ್ಡ್ ಹೊಂದಿರಬೇಕು ಎಂದು ಎಸಿ ದರ್ಶನ್ ತಾಕೀತು ಮಾಡಿದರು. ತಕ್ಷಣ ಮಧ್ಯ ಪ್ರವೇಶಿಸಿ ಶಾಸಕ ಹಾಲಪ್ಪ, ಗ್ರಾಮೀಣ ಭಾಗದಲ್ಲಿ ಕಂದಾಯ ಇಲಾಖೆಯ ವಿಎ, ಆರ್‌ಐ ಪರಿಚಿತರಾಗಿರುತ್ತಾರೆ. ಅಲ್ಲಿ ಸಮಸ್ಯೆಯಾಗುವುದಿಲ್ಲ. ಆದರೆ ನಗರ ಪ್ರದೇಶದಲ್ಲಿ ಅಧಿಕಾರಿಗಳ ಗುರುತಿನ ಕಾರ್ಡ್ ಅನಿವಾರ್ಯವಾಗಬಹುದು ಎಂದರು.
ಹೊಸನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದಿರುವ ಬಗ್ಗೆ ನಿಮಗೆ ಕರೆ ಮಾಡಿ ನಾನು ಎಸಿ ಎಂದು ಹೇಳಿದರೂ ನಮಗೆ ಸಂಬಂಧವಿಲ್ಲ ಎಂದು ಫೋನ್ ಕಟ್ ಮಾಡುತ್ತೀರಿ ಎಂದು ಎಸಿ ದರ್ಶನ್ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಎಚ್ ಅಧಿಕಾರಿ ಪೀರ್‌ಪಾಶಾ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದರೆ ಅದನ್ನು ತೆರವುಗೊಳಿಸುವ ಜವಾಬ್ದಾರಿ ಅರಣ್ಯ ಇಲಾಖೆಯವರದ್ದು ಎಂದರು.