Advertisement

ನಾಲ್ಕು ನಿಮಿಷಗಳಲ್ಲಿ ಪೇಪರ್‌ ಕಟ್ಟಿಂಗ್‌ ಚಿತ್ರ ರಚಿಸಿದ ಚಂದನ್‌

11:22 AM Mar 28, 2019 | Naveen |
ಮಹಾನಗರ : ಪೇಪರ್‌ ಕಟ್ಟಿಂಗ್‌ ಯುವ ಕಲಾವಿದ ಬಿಜೈ ನಿವಾಸಿ ಚಂದನ್‌ ಸುರೇಶ್‌ ಅವರು ಇಂಡಿಯಾ ಬುಕ್‌ ಆಫ್‌ ರೇಕಾರ್ಡ್‌ನಲ್ಲಿ ಟಾಪ್‌ 100ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.
ಮೂಲತಃ ತುಮಕೂರಿನವರಾದ ಉದ್ಯಮಿ ಟಿ.ಆರ್‌. ಸುರೇಶ್‌, ಜಿ.ಆರ್‌. ಸವಿತಾ ದಂಪತಿ ಪುತ್ರ ಚಂದನ್‌ ಸುರೇಶ್‌ ಅವರು ಹತ್ತು ವರ್ಷಗಳಿಂದ ನಗರದ ಬಿಜೈಯಲ್ಲಿ ನೆಲೆಸಿದ್ದಾರೆ. ಬೆಸೆಂಟ್‌ ಸಂಧ್ಯಾ ಕಾಲೇಜಿನಲ್ಲಿ ಪದವಿ ಮಾಡುತ್ತಿರುವ ಇವರು ಬೆಳಗ್ಗಿನ ಜಾವ ಯುಪಿಎಸ್ಸಿ ಪರೀಕ್ಷೆಗೆ ಕೋಚಿಂಗ್‌ಗೆ ಹೋಗುತ್ತಾರೆ. ಈ ನಡುವೆ ತನ್ನೊಳಗಿರುವ ಕಲೆಯನ್ನು ಪ್ರದರ್ಶಿಸಲು ಸಿಗುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಇದೀಗ ಐದು ದೇಶದ 13,000 ಸ್ಪರ್ಧಿಗಳು ಭಾಗವಹಿಸಿದ್ದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ನಾಲ್ಕು ನಿಮಿಷಗಳಲ್ಲಿ ಪೇಪರ್‌ ಕಟ್ಟಿಂಗ್‌ ಚಿತ್ರ ರಚಿಸಿ 100ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ಚಂದನ್‌ ಅವರು ಯಾವುದೇ ಬಣ್ಣಗಳನ್ನು ಬಳಸಿ ಚಿತ್ರ ರಚಿಸುವುದಿಲ್ಲ. ಕಪ್ಪು ಬಣ್ಣದ ಪೇಪರ್‌ ಮೇಲೆ ಬಿಳಿ ಹಾಳೆಯನ್ನಿಟ್ಟು ಬ್ಲೇಡ್‌ ಸಹಾಯದಿಂದ ಕತ್ತರಿಸುವ ಮೂಲಕ ಸುಂದರವಾದ ಚಿತ್ರಗಳನ್ನು ರಚಿಸುತ್ತಾರೆ. ದೇಶದ ಎರಡನೇ, ರಾಜ್ಯದ ಮೊದಲ ಪೇಪರ್‌ ಕಟ್ಟಿಂಗ್‌ ಅಥವಾ ಸ್ಟೆನ್ಸಿಲ್‌ ಆರ್ಟ್‌ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾರ್‌ಸ್ಟ್ರೀಟ್‌ನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಹೈಸ್ಕೂಲ್‌ ಮುಗಿಸಿದ್ದ ಚಂದನ್‌ ಅವರು ಶಿಕ್ಷಕ ಗೋಪಾಡ್ಕರ್‌ ಅವರಿಂದ ಪ್ರಾರಂಭಿಕ ತರಬೇತಿ ಪಡೆದಿದ್ದರು. ಬಳಿಕ ಸ್ವ ಆಸಕ್ತಿಯಿಂದ ಕಲೆಯನ್ನು ಬೆಳೆಸುತ್ತಾ ಒಂದು ವರ್ಷದಲ್ಲಿ 600ಕ್ಕೂ ಅಧಿಕ ಚಿತ್ರಗಳನ್ನು ಪೇಪರ್‌ ಕಟ್ಟಿಂಗ್‌ ಮೂಲಕ ರಚಿಸಿದ್ದಾರೆ. ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ನಾಲ್ಕು ನಿಮಿಷಗಳಲ್ಲಿ ಪೇಪರ್‌ ಕಟ್ಟಿಂಗ್‌ ಚಿತ್ರ ಬಿಡಿಸಿ ಎಲ್ಲರಿಂದ ಶಭಾಷ್‌ ಅನಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯಿಂದ ಪ್ರಶಂಸೆ
ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿ ಅವರ ಮುಂಭಾಗದಲ್ಲಿ ತನ್ನ ಕಲೆ ಪ್ರದರ್ಶಿಸಿದ್ದ ಚಂದನ್‌ ಅವರಿಗೆ ಮೋದಿ ಅವರಿಂದ ಪ್ರಶಂಸನ ಪತ್ರ ಲಭಿಸಿದೆ. ಕಳೆದ ವರ್ಷ ಸಚಿನ್‌ ತೆಂಡುಲ್ಕರ್‌ ಅವರ ಹುಟ್ಟುಹಬ್ಬಕ್ಕೆ ಮೊದಲ ಚಿತ್ರವಾಗಿ ಸಚಿನ್‌ ಅವರ ಚಿತ್ರವನ್ನು ಬಿಡಿಸಿ ಟ್ವೀಟ್‌ ಮಾಡಿದ್ದರು. ವಿವಿಧ ಗಣ್ಯರಿಂದ ಮೆಚ್ಚುಗೆ ಗಳಿಸಿದ್ದಾರೆ.
ಏನಿದು ಪೇಪರ್‌ ಕಟ್ಟಿಂಗ್‌ ಆರ್ಟ್‌
ಪೇಪರ್‌ ಶೀಟ್‌ಗಳನ್ನು ಕತ್ತರಿಸಿ ಚಿತ್ರ ರಚಿಸುವುದರಿಂದ ಇದಕ್ಕೆ ಪೇಪರ್‌ ಕಟ್ಟಿಂಗ್‌ ಆರ್ಟ್‌ ಎಂದು ಹೆಸರು ಬಂದಿದೆ. ಹೆಚ್ಚಾಗಿ ಕಪ್ಪು ಮತ್ತು ಬಳಿ ಬಣ್ಣದಲ್ಲಿ ಪೇಪರ್‌ ಕಟ್ಟಿಂಗ್‌ ಆರ್ಟ್‌ ಕಾಣಸಿಗುತ್ತದೆ. ಈಗ ಪ್ರಚಲಿತದಲ್ಲಿರುವ ತಂತ್ರಜ್ಞಾನ ಆಧಾರಿತ ಸ್ಟಿಕ್ಕರ್‌ ಕಟ್ಟಿಂಗ್‌ನ ಇನ್ನೊಂದು ರೂಪವೇ ಪೇಪರ್‌ ಕಟ್ಟಿಂಗ್‌ ಆರ್ಟ್‌ ಎನ್ನಬಹುದು. ಮೊದಲಿಗೆ ಬಿಳಿಯ ಕಾಗದಲ್ಲಿ ವ್ಯಕ್ತಿಯ ಚಿತ್ರವನ್ನು ರಚಿಸಿ ಅದನ್ನು ಕಪ್ಪು ಪೇಪರ್‌ ಮೇಲೆ ಚಾಕಚಕ್ಯತೆಯಿಂದ ಬ್ಲೇಡ್‌ನಿಂದ ಕತ್ತರಿಸಿದರೆ ಸುಂದರವಾಗ ಸ್ಟೆನ್ಸಿಲ್‌ ಆರ್ಟ್‌ ಕಾಣಲು ಸಿಗುತ್ತದೆ. ಆರಂಭದಲ್ಲಿ ಬಿಳಿ ಕಾಗದಲ್ಲಿ ಸ್ಕೆಚ್‌ ಮಾಡಿ ಚಿತ್ರ ರಚಿಸಬಹುದಾಗಿದ್ದು, ಕಲೆಯಲ್ಲಿ ಹಿಡಿತ ಸಾಧಿಸಿದರೆ ಸ್ಕೆಚ್‌ ಇಲ್ಲದೇ ಕೇವಲ ಬ್ಲೇಡ್‌ನ‌ಲ್ಲಿ ಕತ್ತರಿಸಿ ರಚಿಸಬಹುದಾಗಿದೆ.
ಗಿನ್ನಿಸ್‌ ದಾಖಲೆ ಮಾಡುವ ಗುರಿ
ಚಿತ್ರಕಲೆಯಲ್ಲೇ ವಿಭಿನ್ನತೆಯನ್ನು ತೋರಿಸುವ ನಿಟ್ಟಿನಲ್ಲಿ ಪೇಪರ್‌ ಕಟ್ಟಿಂಗ್‌ ಆರ್ಟ್‌ ಕಲಿತುಕೊಂಡೆ. ಅದರಲ್ಲೇ ವೇಗವಾಗಿ ಚಿತ್ರವನ್ನು ಬಿಡಿಸುವುದನ್ನು ಅಭ್ಯಾಸಿಸಿದೆ. ಇದೀಗ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದೇನೆ. ಮುಂದಿನ ಗುರಿ ಗಿನ್ನಿಸ್‌ ವರ್ಲ್ಡ್ ರೆಕಾರ್ಡ್‌ ನಲ್ಲಿ ಸ್ಥಾನಗಳಿಸುವುದಾಗಿದೆ.
ಚಂದನ್‌ ಸುರೇಶ್‌
ಪೇಪರ್‌ ಕಟ್ಟಿಂಗ್‌ ಆರ್ಟ್‌ ಕಲಾವಿದ 
ವಿಶೇಷ ವರದಿ
Advertisement

Udayavani is now on Telegram. Click here to join our channel and stay updated with the latest news.

Next