ಬಾಗಲಕೋಟೆ: ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ನಮ್ಮ ರೈತರು ಹೊಸ ಕೃಷಿ ವಿಜ್ಞಾನ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೊಸ ತಂತ್ರಜ್ಞಾನವೊಂದು ಬಂದಿದೆ.
ಇಡೀ ದೇಶದ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕವೂ ಮುಂಚೂಣಿ ಪಟ್ಟಿಯಲ್ಲಿರುವುದರಿಂದ ನಮ್ಮ ರಾಜ್ಯವೂ ದೇಶವನ್ನು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಪರ್ಯಾಪ್ತತೆ ದೊರಕಿಸಿಕೊಡಲು ಮುಖ್ಯ ಪಾತ್ರ ವಹಿಸಬಹುದು. ಈ ವಾಸ್ತವ ಮನಗಂಡು ಬಾಗಲಕೋಟೆ ಕೃಷಿ ಇಲಾಖೆಯು ಜಿಲ್ಲೆಯ ರೈತರ ತೊಗರಿ ಬೆಳೆಯ ಉತ್ಪತ್ತಿಯಲ್ಲಿ ಗಣನೀಯ ಅಭಿವೃದ್ಧಿ ಕಾಣಬಹುದಾದ ತಂತ್ರಜ್ಞಾನ ರೈತರಿಗೆ ಪರಿಚಯಿಸಲು ಮುಂದಾಗಿದೆ.
ಜಿಲ್ಲೆಯ ಕೃಷಿ ಇಲಾಖೆ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಡಿಎಂಎಸಿ (ಹನಿಯಿಂದ ಮಾರುಕಟ್ಟೆಗೆ ಕೃಷಿ ಮಾರ್ಗ) ಎಂಬ ಯೋಜನೆಯಡಿ ತೊಗರಿ ಬೆಳೆ ಕುಡಿ ಚಿವುಟುವ ಯಂತ್ರ ಪರಿಚಯಿಸಲಾಗಿದ್ದು, ಸುಮಾರು 30ಕ್ಕಿಂತ ಹೆಚ್ಚು ರೈತರು ಈಗಾಗಲೇ ಇದರ ಉಪಯೋಗ ಪಡೆದಿದ್ದಾರೆ.
ಇದನ್ನೂ ಓದಿ:ಟೀ ಸ್ಟಾಲ್‌ಗೆ ಸುಧಾಮೂರ್ತಿ ಅಮ್ಮ ಎಂದು ಹೆಸರು : ಮಾಲೀಕನಿಗೆ ಕರೆ ಮಾಡಿದ ಸುಧಾಮೂರ್ತಿ
ಕುಡಿ ಚಿವುಟುವುದು ಅಥವಾ ನಿಪ್ಪಿಂಗ್ ಎಂದು ಕರೆಯಲ್ಪಡುವ ಈ ಕ್ರಿಯೆ ದ್ವಿದಳ ಧಾನ್ಯಗಳು, ಹಾಗೂ ಇತರ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ 40 ರಿಂದ 50 ದಿನಗಳಲ್ಲಿ ಬೆಳೆಯ ಮೇಲ್ಭಾಗದ ಕುಡಿಯನ್ನು 5-8 ಸೆಂ.ಮೀದಷ್ಟು ಚಿವುಟುವುದಾಗಿದೆ. ಕುಡಿ ಚಿವುಟುವುದರಿಂದ ಈ ಬೆಳೆಗಳು ಎತ್ತರಕ್ಕೆ ಬೆಳೆಯುವುದು ಕುಂಠಿತವಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆಯಲು ಸಹಕಾರಿಯಾಗುತ್ತದೆ. ಇದರಿಂದ ಕಾಯಿಗಳ ಸಂಖ್ಯೆ ಹೆಚ್ಚಾಗಿ, ಇಳುವರಿ ಹೆಚ್ಚಾಗುತ್ತದೆ. ಮಾತ್ರವಲ್ಲದೇ ಬೆಳೆ ಎತ್ತರಕ್ಕೆ ಬೆಳೆಯುವು ಹತೋಟಿಗೆ ಬರುವುದರಿಂದ ಔಷಧಿ ಸಿಂಪಡಿಸಲು ಅನುಕೂಲವಾಗುತ್ತದೆ.
ಇದರೊಂದಿಗೆ, ದ್ವಿದಳ ಧಾನ್ಯಗಳು ತಮ್ಮ ಬೇರು ಗಂಟುಗಳಲ್ಲಿ ರೈಜೋಬಿಯಂ ಬ್ಯಾಕ್ಟೀರಿಯಾ ಮೂಲಕ ಸಂಗ್ರಹಿಸಿಡುವ ಸಸಾರಜನಕವನ್ನು ಕುಡಿ ಚಿವುಟಿದ ನಂತರವಿರುವ ಎಲೆಗಳಿಗಷ್ಟೇ ಪೂರೈಕೆ ಮಾಡುವುದರಿಂದ ಹೂ, ಮೊಗ್ಗು, ಕಾಯಿ ಬಿಡುವುದನ್ನು ಇದು ಉತ್ತೇಜಿಸುತ್ತದೆ. ಇದರಿಂದ, ರೈತರ ಇಳುವರಿ ಗಣನೀಯವಾಗಿ ಹೆಚ್ಚಾಗುತ್ತದೆ. ಕುಡಿ ಚಿವುಟುವುದರೊಂದಿಗೆ ಬೆಳೆಗೆ ಅತ್ಯವಶ್ಯಕವಿರುವ ಸೂಕ್ಷ್ಮ ಪೋಷಕಾಂಶ ಸಿಂಪಡಿಸುವುದರಿಂದ, ಪ್ರತಿ ಹೆಕ್ಟೇರ್‌ಗೆ ಶೇ.40 ರಿಂದ 50 ಹೆಚ್ಚಿನ ಉತ್ಪಾದನೆ ಕಾಣಬಹುದು ಎಂದು ಡಿಎಂಎಸಿ ಯೋಜನೆ ಮುಖ್ಯಸ್ಥ ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಧಿವೇಶನಕ್ಕೆ ಮೊದಲೇ ಸಂಪುಟ ವಿಸ್ತರಣೆ ಬಯಕೆ: ಸಿಎಂ ಯಡಿಯೂರಪ್ಪ
ಡಿಎಂಎಸಿ ಯೋಜನೆ ಸಹಯೋಗದೊಂದಿಗೆ ಹಾಗೂ ಪ್ರಗತಿಪರ ರೈತರ ಮುಂದಾಳತ್ವದೊಂದಿಗೆ ಅಮರಾವತಿಯಲ್ಲಿ ಪ್ರಾರಂಭವಾಗಿರುವ ಅಮೃತ ರೈತ ಉತ್ಪಾದಕ ಕಂಪನಿ ಮೂಲಕ ರೈತರಿಗೆ ಅನುಕೂಲವಾಗಲು ಕುಡಿ ಚಿವುಟುವ ಯಂತ್ರ ಅತ್ಯಲ್ಪ ಬಾಡಿಗೆಗೆ ದೊರಕಿಸಿಕೊಡಲಾಗುತ್ತಿದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕೆಂ ದು ಡಿಎಂಎಸಿ ಯೋಜನೆ ವ್ಯವಸ್ಥಾಪಕ ಶಿವಪ್ರಕಾಶ್ ತಿಳಿಸಿದ್ದಾರೆ.
ಕುಡಿ ಚಿವುಟುವುದರ ಪ್ರಾಮುಖ್ಯತೆ ಹಾಗೂ ಕುಡಿ ಚಿವುಟುವ ಯಂತ್ರದ ಬಳಕೆ ಬಗ್ಗೆಯೂ ರೈತರಲ್ಲಿ ಅರಿವು ಮೂಡಿಸಲು ಡಿಎಂಎಸಿ ತಂಡವು ದೂರವಾಣಿ ಮೂಲಕ ಧ್ವನಿ ಸಂದೇಶ, ಪ್ರಾತ್ಯಕ್ಷಿಕೆ ಮುಂತಾದ ಜಾಗ್ರತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.