Advertisement

ದೇವರೇ…ಇಂದಾದರೂ ಆರ್‌ಸಿಬಿ ಗೆಲ್ಲಲಿ…

08:59 AM Apr 14, 2019 | Team Udayavani |

ಮೊಹಾಲಿ: ಒಂದಲ್ಲ ಎರಡಲ್ಲ ಸತತ ಆರು ಸೋಲು ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು)ಯ ನಿದ್ದೆಗೆಡಿಸಿದೆ. ಎತ್ತ ನೋಡಿದರತ್ತ ಆರ್‌ಸಿಬಿಯ ಸೋಲಿನದ್ದೇ ಮಾತು. ಈ ನಡುವೆಯೇ ಲೀಗ್‌ ಹಂತದ 7ನೇ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗಿದೆ.

Advertisement

ಮೊಹಾಲಿಯಲ್ಲಿ ಶನಿವಾರ ನಡೆ ಯಲಿರುವ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಆತಿಥೇಯ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಮುಂದಿನ ದಾರಿ ಜೀವಂತವಾಗಿರಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಇಲ್ಲೂ ಸೋಲು ಕಂಡರೆ ಕೊಹ್ಲಿ ಪಡೆ ಬಹು ತೇಕ ಕೂಟದಿಂದ ಹೊರಬೀಳಲಿದೆ. ಹೀಗಾಗಿ ಅಭಿಮಾನಿಗಳೆಲ್ಲ ದೇವರೇ… ಇಂದಾದರೂ ಆರ್‌ಸಿಬಿ ಗೆಲ್ಲಲಿ ಎನ್ನುವ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಗೆಲುವಿನ ಟ್ರ್ಯಾಕ್‌ಗೆ ಮರಳುವುದೇ ಹಳಿ ತಪ್ಪಿರುವ ಕೊಹ್ಲಿಯ ಆರ್‌ಸಿಬಿ ತಂಡ ದಿಗ್ಗಜ ಕ್ರಿಕೆಟಿಗರನ್ನು ಹೊಂದಿದ್ದರೂ ಗೆಲ್ಲುತ್ತಿಲ್ಲ. ನಿರಂತರ ಸೋಲು ತಂಡದ ಬಲವನ್ನೇ ಅಡಗಿಸಿದೆ. ಕಳೆದ ರವಿವಾರ ದಿಲ್ಲಿಯ ವಿರುದ್ಧ ಆರ್‌ಸಿಬಿ ತನ್ನ 6ನೇ ಸೋಲು ಅನುಭವಿಸಿತ್ತು.

ಸದ್ಯ ಕೊಹ್ಲಿ ಪಡೆಗೆ ಅವಕಾಶ ಇದೆ. ಮುಂದಿನ ಎಲ್ಲ 8 ಪಂದ್ಯಗಳನ್ನು ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಪ್ಲೇಆಫ್ಗೇರುವ ಅವಕಾಶ ಇದೆ. ಇದು ಕಷ್ಟದ ಹಾದಿ ನಿಜ. ಆದರೆ ಪ್ರಯತ್ನದ ಬಲವೊಂದಿದ್ದರೆ ಸಾಕು ಎಂತಹ ಬಂಡೆಗಲ್ಲಿನಂತಹ ಸವಾಲನ್ನೂ ಕೂಡ ಸುಲಭವಾಗಿಸುತ್ತದೆ ಎನ್ನುವ ಮಾತಿದೆ. ಅಂತೆಯೇ ಕೊಹ್ಲಿ ಪಡೆ ಸರಿಯಾಗಿ ಮನಸ್ಸು ಮಾಡಿದರೆ ಎದುರಾಳಿಯನ್ನು ಕೆಡಹುವ ಸಾಮರ್ಥ್ಯ ಹೊಂದಿದೆ. ಎಬಿ ಡಿ’ವಿಲಿಯರ್, ವಿರಾಟ್‌ ಕೊಹ್ಲಿ, ಗ್ರ್ಯಾನ್‌ಹೋಮ್‌, ಶಿಮ್ರಾನ್‌ ಹೆಟ್‌ಮೈರ್‌ರಂತಹ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ಡಿ’ವಿಲಿಯರ್, ಕೊಹ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ರನ್‌ ಮಳೆ ಸುರಿಸುತ್ತಿದ್ದಾರೆ. ಉಳಿದಂತೆ ಎಲ್ಲರೂ ಇನ್ನೂ ನಿದ್ರಾವಸ್ಥೆಯಿಂದ ಎಚ್ಚೆತ್ತುಕೊಂಡಂತಿಲ್ಲ. ಬೌಲಿಂಗ್‌ ವಿಭಾಗ ಸಂಪೂರ್ಣ ಹಳಿ ತಪ್ಪಿರುವುದು ಆರ್‌ಸಿಬಿ ಚಿಂತೆ ಹೆಚ್ಚಿಸಿದೆ.

ಗೇಲ್‌, ಕೆ.ಎಲ್‌. ರಾಹುಲ್‌ ಭಯ
ಮುಂಬೈ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾದ ಕೆ.ಎಲ್‌.ರಾಹುಲ್‌, ಕ್ರೀಸ್‌ ಗೇಲ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಆದರೆ ಇವರಿಬ್ಬರ ಸ್ಫೋಟಕ ಆಟದ ಹೊರ ತಾಗಿಯೂ ಮುಂಬೈ ವಿರುದ್ಧ ಪಂಜಾಬ್‌ ಸೋಲು ಅನುಭವಿಸಿತ್ತು. ಇದೀಗ ಮೊನಚಿಲ್ಲದ ಆರ್‌ಸಿಬಿ ಬೌಲರ್‌ಗಳಿಗೆ ಗೇಲ್‌, ರಾಹುಲ್‌ರನ್ನು ಕಟ್ಟಿ ಹಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಆರ್‌ಸಿಬಿ ಪಾಳಯಕ್ಕೆ ಡೇಲ್‌ ಸ್ಟೇನ್‌?
ಸತತ ಸೋಲು ಕಾಣುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ 12ನೇ ಆವೃತ್ತಿ ಐಪಿಎಲ್‌ ಕೂಟದಿಂದ ಹೊರಬೀಳುವ ಆತಂಕದಲ್ಲಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾದ ವೇಗಿ ಡೇಲ್‌ ಸ್ಟೇನ್‌ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

Advertisement

ಗಾಯಗೊಂಡು ಮನೆ ಸೇರಿರುವ ಆಸ್ಟ್ರೇಲಿಯದ ವೇಗದ ಬೌಲರ್‌ ನಥನ್‌ ಕೌಲ್ಟರ್‌ ನೀಲ್‌ ಬದಲಾಗಿ ಸ್ಟೇನ್‌ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಸ್ಟೇನ್‌ ಭಾರತೀಯ ವೀಸಾವನ್ನು ಪಡೆದಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್‌ ಅಭಿಮಾನಿಗಳು ಸ್ಟೇನ್‌ ಆರ್‌ಸಿಬಿ ಕೂಡಿಕೊಳ್ಳಲಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅಥವಾ ಸ್ವತಃ ಡೇಲ್‌ ಸ್ಟೇನ್‌ ಆಗಲಿ ಏನನ್ನೂ ಖಚಿತಪಡಿಸಿಲ್ಲ.

ಸದ್ಯ 6 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಎಲ್ಲದರಲ್ಲಿಯೂ ಸೋಲು ಅನುಭವಿಸಿದ್ದು ಕೂಟದಿಂದ ಹೊರ ಬೀಳುವ ಆತಂಕದಲ್ಲಿದೆ. ಸ್ಟೇನ್‌ ಒಟ್ಟಾರೆ 90 ಐಪಿಎಲ್‌ ಪಂದ್ಯ ಆಡಿದ್ದಾರೆ. ಒಟ್ಟಾರೆ 92 ವಿಕೆಟ್‌ ಕಬಳಿಸಿದ್ದಾರೆ. ಸದ್ಯ ರಾಷ್ಟ್ರೀಯ ತಂಡದ ಪರ ಆಡಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಡಿಸೆಂಬರ್‌ನಲ್ಲಿ ನಡೆದಿದ್ದ ಐಪಿಎಲ್‌ ಹರಾಜಿನಲ್ಲಿ ಸ್ಟೇನ್‌ ಅನ್‌ಸೋಲ್ಡ್‌ ಆಗಿದ್ದರು ಎನ್ನುವುದನ್ನು ಸ್ಮರಿಸ ಬಹುದು.

Advertisement

Udayavani is now on Telegram. Click here to join our channel and stay updated with the latest news.

Next