Advertisement

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

12:06 AM Nov 28, 2020 | sudhir |

ಬೆಂಗಳೂರು: ಲಷ್ಕರ್‌ ಎ ತಯ್ಯಬಾ (ಎಲ್‌ಇಟಿ) ಚಟುವಟಿಕೆಗಳ ಬಗೆಗಿನ ತನಿಖೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ,  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಸಬೀಲ್‌ ಅಹ್ಮದ್‌ನ ನ್ಯಾಯಾಂಗ ಬಂಧನ ಅವಧಿಯನ್ನು 180 ದಿನಗಳ ಕಾಲ ವಿಸ್ತರಿಸುವಂತೆ ವಿಶೇಷ ನ್ಯಾಯಾಲಯವನ್ನು ಕೋರಿದೆ.

Advertisement

2012ರಲ್ಲಿ ಬೆಳಕಿಗೆ ಬಂದಿದ್ದ ಎಲ್‌ಇಟಿ ಚಟುವಟಿಕೆಗಳು, ನೇಮಕಾತಿ ಹಾಗೂ ಹಲವು ಪ್ರಮುಖರ ಹತ್ಯೆಗೆ ಸಂಚು ರೂಪಿಸಿದ ಮಾಸ್ಟರ್‌ ಮೈಂಡ್‌ಗಳಲ್ಲಿ ಡಾ| ಸಬೀಲ್‌ ಅಹ್ಮದ್‌ ಅಲಿಯಾಸ್‌ ಮೋಟು ಡಾಕ್ಟರ್‌ ಒಬ್ಬನಾಗಿದ್ದ.

ತನಿಖೆ ವೇಳೆ ಸಂಚಿನ ಕುರಿತು ಸಬೀಲ್‌ ಪೂರ್ಣ ಮಾಹಿತಿ ನೀಡಿಲ್ಲ. ಆತನ ಬ್ಯಾಂಕ್‌ ವಹಿವಾಟು ಹಾಗೂ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಬೇಕಿದೆ. ಒಂದು ವೇಳೆ ಆತ ಜೈಲಿನಿಂದ ಹೊರಗಡೆ ಬಂದರೆ ತನಿಖೆಯ ಮೇಲೆ ಪ್ರಭಾವ ಬೀರಬಹುದು, ಸಾಕ್ಷ್ಯಗಳ ನಾಶಕ್ಕೆ ಯತ್ನಿಸಬಹುದು. ಅಲ್ಲದೆ ಪ್ರಕರಣದ ಹಲವು ಆರೋಪಿಗಳು ತಲೆಮರೆಸಿ
ಕೊಂಡಿದ್ದಾರೆ. ಅವರ ಬಂಧನಕ್ಕೂ ಕ್ರಮ ವಹಿಸಲಾಗಿದೆ ಎಂದು ಎನ್‌ಐಎ ವಿವರಿಸಿದೆ. ಈ ನಿಟ್ಟಿನಲ್ಲಿ ತನಿಖಾಧಿ ಕಾರಿಗಳ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಅಷ್ಟೇ ಅಲ್ಲದೆ, ಆರೋಪಿ ಸಬೀಲ್‌ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ನ.24ರಂದು ಆದೇಶ ನೀಡಿದೆ.

ಯಾರು ಡಾ| ಸಬೀಲ್‌?
ಬೆಂಗಳೂರಿನ ಬನಶಂಕರಿ ನಿವಾಸಿಯಾದ ಡಾ| ಸಬೀಲ್‌ ಯು.ಕೆ.ಯಲ್ಲಿ ಸಹೋದರನ‌ ಜತೆ ನೆಲೆಸಿದ್ದ. 2007ರಲ್ಲಿ ಆತನ ಸಹೋದರ “ಗ್ಲಾಸ್ಕೊ’ ಆತ್ಮಾಹುತಿ ಬಾಂಬ್‌ ಸ್ಫೋಟ ನಡೆಸಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಡಾ| ಸಬೀಲ್‌ನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಹೀಗಾಗಿ ನಗರಕ್ಕೆ ಬಂದು ನೆಲೆಸಿದ್ದ. ಆ ಬಳಿಕ 2010ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದ.

2012ರಲ್ಲಿ ಎಲ್‌ಇಟಿ ಚಟುವಟಿಕೆಗಳು ಹಾಗೂ ನೇಮಕಾತಿ ಪ್ರಕರಣದಲ್ಲಿ ಹಲವರ ಬಂಧನವಾದ ಬಳಿಕ 2015ರಲ್ಲಿ ಡಾ| ಸಬೀಲ್‌ ಪಾತ್ರದ ಬಗ್ಗೆ ತಿಳಿದು ಬಂದಿತ್ತು. ಸೌದಿ ಅರೇಬಿಯಾದಿಂದ ಸಬೀಲ್‌ ಗಡಿಪಾರಾಗಿ 2020ರ ಆಗಸ್ಟ್‌ 28ರಂದು ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಎನ್‌ಐಎ ಬಂಧಿಸಿತ್ತು.

Advertisement

ಪ್ರಕರಣ ಏನು?
2012ರ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿರುವ ಎನ್‌ಐಎ 25 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದ 14 ಮಂದಿ ಆರೋಪಿಗಳಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ಜೈಲು ಶಿಕ್ಷೆ ಪೂರ್ಣಗೊಳಿಸಿರುವ ಮೊಹಮ್ಮದ್‌ ಅಕ್ರಮ್‌, ಡಾ| ಇಮ್ರಾನ್‌ ಅಹ್ಮದ್‌ ಸೇರಿ ಹಲವರು ಈಗಾಗಲೇ ಬಿಡುಗಡೆಗೊಂಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಏಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next