Advertisement

ಡಿಸ್ನಿಲ್ಯಾಂಡ್‌ಗೆ ಸ್ಥಳೀಯರ ಒಕ್ಕಲೆಬ್ಬಿಸಲ್ಲ

12:27 PM Apr 11, 2019 | Team Udayavani |

ಶ್ರೀರಂಗಪಟ್ಟಣ: ಮುಚ್ಚುವ ಸ್ಥಿತಿಯಲ್ಲಿದ್ದ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಕಾರ್ಖಾನೆಗೆ ಮರುಜೀವ ಕೊಟ್ಟು ಹೊಸ ಕಾರ್ಖಾನೆಗೆ ಶಂಕು ಸ್ಥಾಪನೆ ಮಾಡಿದ್ದು, ಈಗಾಗಲೇ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

Advertisement

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ಪರ ಕೆಆರ್‌ಎಸ್‌ನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ,  ಮತದಾರರನ್ನುದ್ಧೇಶಿಸಿ ಮಾತನಾಡಿದ ಅವರು, ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ 47 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲು ಮುಂದಾಗಿದ್ದೇನೆ.

ಜಿಲ್ಲೆಯ ಅಭಿವೃದ್ಧಿಗೆ 400 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಚುನಾವಣೆ ಮುಗಿದ ಬಳಿಕ ಕೃಷಿಯಲ್ಲಿ ಸಮಗ್ರ ಬದಲಾವಣೆ ಕೈಗೊಂಡು, ರೈತರ ರಕ್ಷಣೆಗ ಹಲವಾರು ಯೋಜನೆ ಜಾರಿ ಮಾಡಲು ಉದ್ದೇಶಿಸಿದ್ದೇನೆ ಎಂದರು.

ಡಿಸ್ನಿಲ್ಯಾಂಡ್‌ಗೆ ಒಕ್ಕಲೆಬ್ಬಿಸಲ್ಲ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್‌ ಯೋಜನೆಗೆ ಯಾವುದೇ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಹೊರಗೆ ಕಳುಹಿಸುವ ಪ್ರಶ್ನೆ ಇಲ್ಲ. ಈ ಯೋಜನೆಯಿಂದ 50 ಸಾವಿರ ಜನರಿಗೆ ಉದ್ಯೋಗ
ಕಲ್ಪಿಸಬಹುದಾಗಿದೆ. ಯಾರ ಮಾತನ್ನೂ ಕೇಳಬೇಡಿ. ನಾನು ಬದುಕಿರುವವರೆಗೂ ಒಂದೇ ಒಂದು ಕುಟುಂಬವನ್ನು ಹೊರಗೆ ಹಾಕಲು ಬಿಡುವುದಿಲ್ಲ ಎಂದು ಕೆಆರ್‌ಎಸ್‌ ನಿವಾಸಿಗಳಿಗೆ ಭರವಸೆ ನೀಡಿದರು. ಜಿಲ್ಲಾ ಸಚಿವ ಪುಟ್ಟರಾಜು ಮಾತನಾಡಿ, ಜಿಲ್ಲೆಯ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಹೆಚ್ಚು ಒತ್ತು ನೀಡಿದ್ದಾರೆ. ಮೈಷುಗರ್‌ ಕಾರ್ಖಾನೆಗೆ ಮರುಜೀವ ನೀಡಿರುವುದಲ್ಲದೆ, ಮೇ ತಿಂಗಳಲ್ಲಿ ಪಾಂಡವಪುರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಭರವಸೆ ನೀಡಿದ್ದಾರೆ. ಮುಂದೆ ಜಿಲ್ಲೆಯ ಅಭಿವೃದ್ಧಿಗೆ ನಿಖೀಲ್‌ ಕುಮಾರ ಸ್ವಾಮಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಸಿಎಂ ಗೋಪೂಜೆ: ತಾಲೂಕಿನ ಕೆಆರ್‌ಎಸ್‌ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಗೋಪೂಜೆ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಬಳಿಕ ಹುಲಿಕೆರೆ, ಕುಪ್ಪೆದಡ ಸರ್ಕಲ್‌, ಬೆಳಗೊಳ, ಹೊಸ ಆನಂದೂರು, ಪಂಪ್‌ಹೌಸ್‌, ಮಂಟಿ, ಪಿ.ಹೊಸಹಳ್ಳಿ, ಪಾಲಹಳ್ಳಿ, ಶ್ರೀರಂಗಪಟ್ಟಣ, ಕಿರಂಗೂರು, ಬಾಬುರಾಯನ ಕೊಪ್ಪಲು, ಶ್ರೀನಿವಾಸ ಅಗ್ರಹಾರ ಮಾರ್ಗವಾಗಿ ಮಹದೇವಪುರ, ಮಂಡ್ಯ ಕೊಪ್ಪಲು, ಅರಕೆರೆ, ಕೊತ್ತತ್ತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಖೀಲ್‌ ಪರ ಚುನಾವಣಾ ಪ್ರಚಾರ ನಡೆಸಿದರು.

Advertisement

ಬೃಹತ್‌ ಗಾತ್ರದ ಹೂವಿನಹಾರ: ಮುಖ್ಯಮಂತ್ರಿ ಕುಮಾರಸ್ವಾಮಿಗೆ ವಿವಿಧ ಗ್ರಾಮಗಳಲ್ಲಿ ಅವರ ಬೆಂಬಲಿಗರು ಸ್ವಾಗತ ಕೋರಿ, ಬೃಹತ್‌ಗಾತ್ರದ ಹೂವಿನ ಹಾರ, ಒಣದ್ರಾಕ್ಷಿಹಾರ, ಸೇಬಿನ ಹಾರಗಳನ್ನು ಹಾಕಿದರು. ತಾಲೂಕಿನ ಪಾಲಹಳ್ಳಿ ಮತ್ತು ಬೆಳಗೊಳ ಗ್ರಾಮದಲ್ಲಿ ಎತ್ತಿನಗಾಡಿ ಹಾಗೂ ಕುದುರೆ ಸವಾರಿ ಮೂಲಕ ಸ್ವಾಗತಿಸಿದರು. ಮುಖ್ಯಮಂತ್ರಿಗಳು ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ, ಸ್ಥಳೀಯ ನಾಯಕರು ತೆರೆದ ವಾಹನದಲ್ಲಿ ರೋಡ್‌ ಶೋ ಮೂಲಕ ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next