ಬೆಂಗಳೂರು: ಪ್ರೀತಿಗೆ ನಿರಾಕರಿಸಿದ ಪ್ರೇಯಸಿಯ ಖಾಸಗಿ ಫೋಟೋ ಮತ್ತು ಮೊಬೈಲ್ ನಂಬರ್‌ನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿ ಹಾಕಿದ್ದ ಮಾಜಿ ಪ್ರಿಯಕರನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಕುರುಬರಹಳ್ಳಿಯ ನಿವಾಸಿ ರೋಹಿತ್ ಕುಮಾರ್ (23) ಬಂಧಿತ. ಕೆಲ ತಿಂಗಳ ಹಿಂದೆ ಆರೋಪಿ ಯಶವಂತಪುರ ನಿವಾಸಿ 27 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವೇಳೆ ಆಕೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದಿದ್ದ.
ಇತ್ತೀಚೆಗೆ ಸಣ್ಣ-ಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಬೇರೆಯಾಗಿದ್ದರು. ಫೆ.27ರಂದು ಬೆಳಗ್ಗೆ 9 ಗಂಟೆಗೆ ಆರೋಪಿ ರೋಹಿತ್ ಕುಮಾರ್, ಸಂತ್ರಸ್ತೆ ಕೊಠಡಿಗೆ ಹೋಗಿ ಆಕೆ ಜತೆ ಜಗಳ ಮಾಡಿದ್ದಾನೆ. ಸಂತ್ರಸ್ತೆಯ ಖಾಸಗಿ ಫೋಟೊಗಳನ್ನು ಆಕೆಯ ಪೋಷಕರಿಗೂ ಕಳುಹಿಸಿದ್ದ.
ಅಲ್ಲದೆ, ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಲೊಕಾಂಟೋ ವೆಬ್‌ಸೈಟ್‌ಗೆ ಆಕೆಯ ಖಾಸಗಿ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಮೊಬೈಲ್ ನಂಬರ್ ಕೂಡ ನಮೂದಿಸಿದ್ದ. ಹೀಗಾಗಿ ಕೆಲ ದಿನಗಳಿಂದ ಸಂತ್ರಸ್ತೆ ಮೊಬೈಲ್‌ಗೆ ಅಪರಿಚಿತರು ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದರು.
ಈ ಬಗ್ಗೆ ಪರಿಶೀಲಿಸಿದಾಗ ಆರೋಪಿಯು ಅಶ್ಲೀಲ ವೆಬ್‌ಸೈಟ್‌ನಲ್ಲಿ ಸಂತ್ರಸ್ತೆಯ ಖಾಸಗಿ ಕ್ಷಣದ ಫೋಟೋ ಮತ್ತು ಮೊಬೈಲ್ ನಂಬರ್ ಹಾಕಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.