ಕಲಬುರಗಿ: ಈ ಚುನಾವಣೆ ದೇಶದ ಬಡವರು, ಮಹಿಳೆಯರು, ಯುವಕರ ಭವಿಷ್ಯ ರೂಪಿಸುವ ಚುನಾವಣೆಯಾಗಿದೆ. ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ಬೇಧ-ಭಾವ ಮೂಡಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಈಶ್ವರ ಖಂಡ್ರೆ ಹೇಳಿದರು.
ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಸಿಗಲಿಲ್ಲ. ಆದ್ದರಿಂದ ನಮ್ಮವನು ಡಾ| ಉಮೇಶ ಜಾಧವ ಅವರನ್ನು ಹುಡುಕಿ ತೆಗೆದುಕೊಂಡು ಹೋಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರ ಠೇವಣಿ ಜಪ್ತಿ ಮಾಡಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ. ನಾನು ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದು ನನಗೆ ಮತ ನೀಡಿ ಆರ್ಶೀವಾದ ಮಾಡಿ ಎಂದರು.
ಯುವಜನ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ಮಾತನಾಡಿ, ಕಲಬುರಗಿ ಇತಿಹಾಸದಲ್ಲಿ ಯಾರೂ ಮಾಡದಂತ ಅಭಿವೃದ್ಧಿ ಕೆಲಸಗಳನ್ನು ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾರೆ. ಬೀದರ್ ಜಿಲ್ಲೆಗೂ ರೈಲು, ಹೆದ್ದಾರಿ ಕೊಡುಗೆಗಳನ್ನು ನೀಡಿದ್ದಾರೆ. ಕಾಂಗ್ರೆಸ್ ವ್ಯಕ್ತಿಯನ್ನೇ ತಂದು ಖರ್ಗೆ ಎದುರು ನಿಲ್ಲಿಸಿರುವ ಬಿಜೆಪಿಯವರನ್ನು ಸೋಲಿಸಿ ಎಂದು ಹೇಳಿದರು.
ಭೂ ಮತ್ತು ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಹೆಮ್ಮೆಯ ಪುತ್ರ. ದೇಶದ ಜನತೆ ಖರ್ಗೆ ಅವರ ಕಾರ್ಯವನ್ನು ನೋಡುತ್ತಿದೆ. ಹೈ.ಕ ಭಾಗಕ್ಕೆ 371ನೇ (ಜೆ) ಕಲಂ ಜಾರಿ, ರೈಲ್ವೆ, ಹೆದ್ದಾರಿಗಳಂತಹ ದೊಡ್ಡ ಯೋಜನೆಗಳನ್ನು ತಂದಿದ್ದರೆ ಅದು ಖರ್ಗೆ ಮಾತ್ರ. ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.
ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371 (ಜೆ) ಕಲಂ ಕೊಡುಗೆ ಕೊಟ್ಟಿದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಮತ್ತು ಧರ್ಮಸಿಂಗ್. ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ 4 ಬಾರಿ ಬಂದರೂ 4 ಪೈಸೆ ಕೊಟ್ಟಿಲ್ಲ. ಬಿಜೆಪಿಯಲ್ಲಿ ಬಾಬುರಾವ ಚಿಂಚನಸೂರ ಅಂಗಡಿ ಬಂದ್ ಆಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೋಲಿ ಸಮಾಜದ ಎಲ್ಲ ಮತಗಳು ಬರುತ್ತವೆ. ಈ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ
ಖರ್ಗೆ ಗೆಲುವು ಸಾಧಿಸುತ್ತಾರೆ. ಖರ್ಗೆ ಗೆಲ್ಲಿಸುವುದು, ಅಂಬೇಡ್ಕರ್ ಗೆಲ್ಲಿಸುವುದು ಒಂದೇ ಎಂದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಇದು ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವಲ್ಲ. ವಿಜಯೋತ್ಸವ ಸಮಾರಂಭವಾಗಿದೆ. ಇಂದು ಸ್ವಲ್ಪ ಬಿಸಿಲು ಕಡಿಮೆಯಾಗಿ ಪ್ರಕೃತಿ ಕೂಡ ಖರ್ಗೆ ಅವರ ಕಲ್ಪನೆಗೆ ಬಲ ತುಂಬಿದೆ. ಪ್ರತಿಯೊಬ್ಬ ಕಾರ್ಯಕರ್ತ ನಾನೇ ಚುನಾವಣೆಯಲ್ಲಿ ನಿಂತಿದ್ದೇನೆ ಎಂದು ತಿಳಿದುಕೊಂಡು ಕೆಲಸ ಮಾಡಬೇಕು. ಮತದಾರರು ಪ್ರಧಾನಿ ಮೋದಿಯ ಸುಳ್ಳಿನ ಬಲೆಗೆ ಬೀಳಬೇಡಿ ಎಂದರು.
ಮಾಜಿ ಉಪಸಭಾಪತಿ ಡೇವಿಡ್ ಸಿಮಿಯೋನ್, ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ, ಮಾಜಿ ಸಚಿವ ಬಾಬುರಾವ ಚವ್ಹಾಣ, ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ, ತಿಪ್ಪಣ್ಣಪ್ಪ ಕಮಕನೂರ ಇತರರು ಇದ್ದರು.