Advertisement

ಗಾರ್ಡನ್‌ ನಿರ್ವಹಣೆ ಉತ್ತಮ ಆದಾಯದ ವೃತ್ತಿ

01:15 PM Mar 27, 2019 | Naveen |
ಮನೆ, ಅಪಾರ್ಟ್‌ಮೆಂಟ್‌ ಹೀಗೆ ನಾವು ಎಲ್ಲಿಯೇ ವಾಸಿಸಲಿ ಮನೆಯ ಮುಂದೆ, ಟಾರಸಿ ಮೇಲೋ ಒಂದು ಚೆಂದದ ಗಾರ್ಡನ್‌ ಇರಲೇಬೇಕು. ಅದರಲ್ಲಿ ಕಾಣಸಿಗುವ ಬಣ್ಣ ಬಣ್ಣದ ಹೂಗಳು ಮನೆಯ ಅಂದವನ್ನು ಹೆಚ್ಚಿಸುವುದರ ಜತೆಗೆ ದೇವರಪೂಜೆಗೆ, ಮಹಿಳೆಯರಿಗೆ ಮುಡಿಯಲು ಸಿಗುತ್ತದೆ ಎಂಬುದು ಎಲ್ಲರೂ ಯೋಚಿಸುವ ಸಂಗತಿ. ಮನೆ ಸಮೀಪ ಜಾಗ ಇದ್ದವರು ಗುಂಟೆಗಟ್ಟಲೆ ಜಾಗದಲ್ಲಿ ಗಾರ್ಡನ್‌ ನಿರ್ಮಿಸಿಕೊಂಡಿದ್ದರೆ, ಹಲವರು ಚಿಕ್ಕ ಜಾಗದಲ್ಲಿಯೇ ನಿರ್ಮಿಸಿ ಸಂತೃಪ್ತಿ ಪಡುತ್ತಾರೆ.
ಹೀಗೆ ಆರಂಭವಾದ ಈ ಗಾರ್ಡನ್‌ಗಳು ಇಂದು ಹಲವು ಬಗೆಯ ಉದ್ಯೋಗಗಳನ್ನು ಸೃಷ್ಟಿಸಿದೆ. ಇದನ್ನೇ ನಂಬಿಕೊಂಡು ಇಂದು ಹಲವರು ಬದುಕುತ್ತಿದ್ದಾರೆ ಎಂಬುದನ್ನು ನಾವು ನಂಬಲೇಬೇಕು. ಇಂದು ಗಾರ್ಡನ್‌ಗಳಲ್ಲಿ ಕೇವಲ ಹೂವಿನ ಗಿಡಗಳು ಮಾತ್ರವಲ್ಲದೆ ಬಗೆ ಬಗೆಯ ಹುಲ್ಲುಗಳು, ಆಕರ್ಷಕ ವಿನ್ಯಾಸ ಹೊಂದಿರುವ ಎಲೆಗಳನ್ನು ಹೊಂದಿರುವ ಸಸ್ಯಗಳು ಕಾಣಸಿಗುತ್ತಿವೆ. ಇವುಗಳ ಲಾಲನೆ-ಪಾಲನೆ, ಮಾರಾಟ ಒಂದು ಉದ್ಯಮವಾಗಿ ಬೆಳೆದಿದ್ದು, ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ.
ಉದ್ಯೋಗವಕಾಶಗಳು
ಗಾರ್ಡನ್‌ ಮೇನ್‌ ಟೆನೆನ್ಸ್‌ ವರ್ಕರ್‌, ಗಾರ್ಡನ್‌ ಮೇನ್‌ಟೆನೆನ್ಸ್‌ ಹೆಲ್ಪರ್‌, ಸ್ಪ್ರೇಯರ್ ಅಪ್ಲಿಕೇಟರ್, ಟ್ರೀ ಟ್ರಿಮ್ಮರ್ ಹೀಗೆ ಹತ್ತು ಹಲವು ಬಗೆಯ ಉದ್ಯೋಗಾವಕಾಶಗಳು ಇದರಲ್ಲಿವೆ.
ಆದಾಯ
ಗಾರ್ಡನ್‌ಗಳ ವಿಸ್ತೀರ್ಣ, ಕೆಲಸದ ಅವಧಿ ಮುಂತಾದವುಗಳನ್ನು ಅವಲಂಬಿಸಿ ಇಲ್ಲಿ ಸಂಬಳ (ಆದಾಯ) ನಿರ್ಧಾರವಾಗುತ್ತದೆ. ಗಾರ್ಡ್‌ನ್‌ಗಳ ನಿರ್ವಹಣೆಕಾರರಿಗೆ ಭಾರತದಲ್ಲಿ ಸಾಮಾನ್ಯವಾಗಿ 15-20 ಸಾವಿರ ಸಂಬಳವಿದ್ದರೆ, ಹೊರ ದೇಶಗಳಲ್ಲಿ 25,610 ಡಾಲರ್‌ ಸಂಬಳವಿದೆ.
ಯುಎಸ್‌ ಬ್ಯೂರೋ ಆಫ್ ಲೇಬರ್‌ ಸ್ಟಾಟಿಸ್ಟಿಕ್ಸ್‌ ಪ್ರಕಾರ 2014-2024ರ ಅವಧಿಯಲ್ಲಿ ಗಾರ್ಡನ್‌ ನಿರ್ವಹಣೆ ಕೆಲಸಗಾರರ ಸಂಖ್ಯೆ ಶೇ. 6ರಷ್ಟು ಏರಿಕೆಯನ್ನು ಕಂಡಿದೆ. ಪೂರ್ಣಕಾಲಿಕ ಉದ್ಯೋಗದಲ್ಲಿರುವವರೂ ಇದನ್ನು ಅರೆಕಾಲಿಕ ವೃತ್ತಿಯಾಗಿ ಮಾಡಬಹುದು.
ಶಿಕ್ಷಣ
ಸಾಮಾನ್ಯವಾಗಿ ಈ ಕೆಲಸಗಳನ್ನು ಮಾಡುವವರಿಗೆ ಯಾವುದೇ ಔಪಚಾರಿಕ ಶಿಕ್ಷಣದ ಆವಶ್ಯಕತೆ ಇಲ್ಲ. ಹೊರ ದೇಶಗಳಲ್ಲಿ ಈ ಕೆಲಸಗಾರರಿಗೆ ಬಹುಬೇಡಿಕೆ ಇದ್ದು, ಅಲ್ಲಿ ಔಪಚಾರಿಕ ಶಿಕ್ಷಣ ಬೇಕಾಗುತ್ತದೆ. ವಿಷಯಕ್ಕೆ ಸಂಬಂಧಿಸಿ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಕೆಲ ಶಿಕ್ಷಣ ಸಂಸ್ಥೆಗಳು ನಡೆಸುತ್ತಿವೆ. ದೈಹಿಕ ಸದೃಢತೆ, ಮನೆ ಹೊರಗಡೆ ಕೆಲಸ ಮಾಡುವ ಸಾಮರ್ಥ್ಯ ಮತ್ತು ಗುಂಪಿನಲ್ಲಿ ಕೆಲಸಮಾಡುವ ಹೊಂದಾಣಿಕೆ ಇಲ್ಲಿ ಅವಶ್ಯ.
ಪ್ರೀತಿ ಭಟ್‌ ಗುಣವಂತೆ
Advertisement

Udayavani is now on Telegram. Click here to join our channel and stay updated with the latest news.

Next