ದಾವಣಗೆರೆ: ಲೋಕಸಭಾ ಸಾರ್ವತ್ರಿಕ 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ 2 ದಿನ ಬಾಕಿ ಇದ್ದರೂ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಸ್ಪಷ್ಟವಾಗದೇ ಕೈ ಪಾಳಯದಲ್ಲಿ ನೀರವ ವಾತಾವರಣ ಸೃಷ್ಟಿಯಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭಾ ಚುನಾವಣಾ ವೇಳಾ ಪಟ್ಟಿ ಘೋಷಣೆಗೂ ಮುನ್ನ ಇದ್ದ ಹುಮ್ಮಸ್ಸು ಈಗ ಕಾಣುತ್ತಿಲ್ಲ. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ತೋರಿದರೋ ಆಗಲೇ ಆ ಪಕ್ಷದ ಕಾರ್ಯಕರ್ತರು, ಮುಖಂಡರ ಉತ್ಸಾಹ ಕುಗ್ಗಿತ್ತು. ಜತೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಹೈಕಮಾಂಡ್ ನೀಡಿದ ಟಿಕೆಟ್ ನಿರಾಕರಿಸಿದ ಮೇಲಂತೂ ಕೈ ಪಾಳಯದಲ್ಲಿ ನಿರುತ್ಸಾಹ ಮನೆ ಮಾಡಿತು. ಈಗ ಪರ್ಯಾಯ ಅಭ್ಯರ್ಥಿ ಘೋಷಣೆಯೂ ವಿಳಂಬವಾಗುತ್ತಿರುವುದರಿಂದ ಕಾಂಗ್ರೆಸ್ ಪಡೆ ಒಂದು ರೀತಿ ಪರಿತಪಿಸುವಂತಾಗಿದೆ.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೋಮವಾರ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ ಎಂಬುದಾಗಿ ಹೇಳಿದ್ದರು. ಆದರೆ, ಮಂಗಳವಾರ ಕಳೆದರೂ ಅಭ್ಯರ್ಥಿ ಆಯ್ಕೆ ತೆರೆಮರೆ ಕಸರತ್ತು ಮುಗಿದಂತಿಲ್ಲ. ಈ ಮಧ್ಯೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಕೈ ಪಾಳಯದ ಮೂಲಗಳಿಂದ ತಿಳಿದು ಬಂದಿದೆ. ಅವರು ನಾಮಪತ್ರ ಸಲ್ಲಿಸಲು ಅಗತ್ಯ ಇರುವ ದಾಖಲೆಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪರ್ಯಾಯ ಅಭ್ಯರ್ಥಿ ಹುಡುಕಾಟದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಿಗೆ ಕರೆಯಿಸಿಕೊಂಡು ಚರ್ಚೆ ನಡೆಸಿದ್ದ ಜಿಲ್ಲಾ ಪಂಚಾಯಿತಿ ಪಕ್ಷೇತರ ಸದಸ್ಯ ತೇಜಸ್ವಿ ವಿ.ಪಟೇಲ್‌ಗೂ ಸಹ ನಾಮಪತ್ರ ಸಲ್ಲಿಸಲು ದಾಖಲೆ ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ದೂರವಾಣಿ ಮೂಲಕ ತಿಳಿಸಿದ್ದಾರಂತೆ. ಹಾಗಾಗಿ ಇಬ್ಬರೂ ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದಾರೆ.
ಇಬ್ಬರೂ ನಾಮಪತ್ರ ಸಲ್ಲಿಸಿದರೆ ಕೊನೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಿದ್ದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಈಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಅವರ ಜವಾಬ್ದಾರಿ ಹೆಚ್ಚಿದೆ. ಇನ್ನು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅಭ್ಯರ್ಥಿಯಾದಲ್ಲಿ ಮಲ್ಲಿಕಾರ್ಜುನರೇ ಹುರಿಯಾಳಾದಂತೆ.
ಇನ್ನು ತೇಜಸ್ವಿ ವಿ.ಪಟೇಲರಿಗೂ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿರುವುದು ಒಂದಿಷ್ಟು ಕುತೂಹಲ ಮೂಡಿಸಿದೆ. ಕೊನೆಗಳಿಗೆಯಲ್ಲಿ ಏನಾದರೂ ಯಡವಟ್ಟಾದಲ್ಲಿ ಮತ್ತೊಬ್ಬರು ನಾಮಪತ್ರ ಸಲ್ಲಿಸಲಿ ಎಂಬ ಮುಂಜಾಗ್ರತ ದೃಷ್ಟಿಯಿಂದಲೋ ಅಥವಾ ಹೈಕಮಾಂಡ್ ಸೂಚನೆಯೋ ಸ್ಪಷ್ಟವಾಗಿ ತಿಳಿದಿಲ್ಲ. ಆದ್ದರಿಂದ ಇಬ್ಬರೂ ನಾಮಪತ್ರ ಸಲ್ಲಿಕೆಗೆ ದಾಖಲೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಹುಶಃ ಉಭಯರೂ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಸಲು ಎರಡು ದಿನ ಕಾಲವಾಕಾಶ ಇರುವುದರಿಂದ ಕೊನೇ ಗಳಿಗೆಯಲ್ಲಿ ಮತ್ತೇನಾದರೂ ಬೆಳವಣಿಗೆಯಾದರೂ ಆಶ್ಚರ್ಯಪಡಬೇಕಿಲ್ಲ. ಅದು ಮೊದಲಿನಿಂದಲೂ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಧಾನವೇ ಹಾಗೆ. ಯಾವುದೇ ಬೆಳವಣಿಗೆಯಾಗದಿದ್ದಲ್ಲಿ ಎಚ್.ಬಿ.ಮಂಜಪ್ಪ ಇಲ್ಲವೇ ತೇಜಸ್ವಿ ವಿ. ಪಟೇಲ್ ಇಬ್ಬರಲ್ಲಿ ಒಬ್ಬರು ಮೈತ್ರಿ ಅಭ್ಯರ್ಥಿಯಾಗಿ ಈ ಚುನಾವಣೆ ಎದುರಿಸುವ ಸಾಧ್ಯತೆ ಇದೆ.
ಎನ್.ಆರ್.ನಟರಾಜ್