Advertisement

ಕಾನ್ಫರೆನ್ಸ್‌ ಕಾಲ್‌, ಕಲಿಕೆಗೊಂದು ಹೊಸ ದಾರಿ

01:20 PM Apr 03, 2019 | Naveen |

ಆಧುನಿಕ ತಂತ್ರಜ್ಞಾನಗಳು ಕೇವಲ ನಮ್ಮ ಕೆಲಸವನ್ನಷ್ಟೇ ಸುಲಭಗೊಳಿಸಿಲ್ಲ. ಬದಲಾಗಿ ಕಲಿಕೆಯ ವಿಧಾನವನ್ನೂ ಸರಳಗೊಳಿಸಿವೆ. ಸಾಕಷ್ಟು ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ಕಂಡುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಪರಿಚಯಿಸುತ್ತಲೇ ಇವೆ. ಈ ನಿಟ್ಟಿನಲ್ಲಿ ಈಗ ಹೊಸ ಸೇರ್ಪಡೆ ಕಾನ್ಫರೆನ್ಸ್‌ ಕಾಲಿಂಗ್‌. ಶಿಕ್ಷಕರು ತರಗತಿಯ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಕಾನ್ಫರೆನ್ಸ್‌ ಕಾಲ್‌ ಮೂಲಕ ಕರೆ ಮಾಡಿ ಅವರ ಪಠ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಮ್ಮಿಂದಾಗುವ ಪ್ರಯತ್ನವನ್ನು ಮಾಡುತ್ತಾರೆ. ಇಲ್ಲಿ ಒಟ್ಟು
10 ವಿದ್ಯಾರ್ಥಿಗಳು ಸೇರಿಕೊಂಡು ಶಿಕ್ಷಕರಿಗೆ ಪ್ರಶ್ನೆ ಮಾಡುತ್ತಾರೆ. ಅವರು ಸೂಕ್ತವಾದ
ಉತ್ತರವನ್ನು ನೀಡುತ್ತಾರೆ. ಇದನ್ನು ರೆಕಾರ್ಡ್‌ ಮಾಡಿ ಇಟ್ಟು ಅಗತ್ಯವಿದ್ದಾಗ ಕೇಳಿಕೊಂಡು ಪುನರಾವರ್ತನೆ ಮಾಡಲು ಸಹಾಯ ಮಾಡುತ್ತದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೆರವಾಗುತ್ತದೆ.

Advertisement

ಒಂದು ಕಾಲವಿತ್ತು. ಕೇವಲ ಕ್ಲಾಸ್‌ರೂಂನಲ್ಲಿ ಶಿಕ್ಷಕರು ಮಾಡಿದ ಪಾಠವನ್ನೇ ಮನೆಯಲ್ಲಿ ಉರು ಹೊಡೆಯಬೇಕಿತ್ತು. ಅದೂ ಮನೆಯಲ್ಲಿ ಓದಿದರಾಯಿತು; ಇಲ್ಲವಾದರೆ ಇಲ್ಲ. ಆದರೀಗ ಕಾಲ ಬದಲಾಗಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಲಿಕಾ ವಿಧಾನದಲ್ಲಿ ಬದಲಾವಣೆ ಮಾಡುವುದರೊಂದಿಗೆ ಆಧುನಿಕ ಶಿಕ್ಷಣ ಪದ್ಧತಿ ವ್ಯವಸ್ಥೆಗೆ ತೆರೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎಂದೇ ಹೇಳಬಹುದು.

ಮಕ್ಕಳ ಕೈಗೆ ಮೊಬೈಲ್‌ ಕೊಟ್ಟರೆ ಹಾಳಾಗುತ್ತಾರೆ ಎಂಬುದು ಪ್ರತಿ ಮನೆಯಲ್ಲಿ ಕೇಳಿ ಬರುವ ಅಪವಾದ. ಆದರೆ ಅದೇ ಮೊಬೈಲ್‌ನಿಂದ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂಬುದು ಹೊಸದು. ಮೊಬೈನಲ್ಲಿ ಚಾಟಿಂಗ್‌, ಗೇಮ್ಸ್‌ ಆಡುವುದೆಲ್ಲ ಮಾಡಿದರೆ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದೇ ಮೊಬೈಲ್‌ನಿಂದ ಕಲಿಕೆಗೆ ಪ್ರೇರೇಪಿಸಬಹುದು ಎಂಬುದನ್ನು ಈಗಾಗಲೇ ಶಿಕ್ಷಕ ವೃಂದದವರು ತೋರಿಸಿಕೊಟ್ಟಿದ್ದಾರೆ. ಅದೆಂದರೆ, ಕಾನ್ಫರೆನ್ಸ್‌ ಕಾಲ್‌ ಮುಖಾಂತರ ಬೋಧನಾ ಪದ್ಧತಿ.

ಏನಿದು ಕಾನ್ಫರೆನ್ಸ್‌ ಕರೆ?
ನಗರ ಪ್ರದೇಶಗಳಲ್ಲಿನ ಪ್ರತಿಷ್ಠಿತ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳಿಗೆಂದೇ ವಾಟ್ಸಪ್‌ ಗ್ರೂಪ್‌ ಗಳನ್ನು ಮಾಡಿಕೊಂಡು ವಾಟ್ಸಪ್‌ ಮುಖಾಂತರ ಬೋಧನೆ ಮಾಡುತ್ತಿರುವುದು ಹಳೆಯ ಸುದ್ದಿ. ಅದರೊಂದಿಗೆ, ನಗರ ಪ್ರದೇಶದವರೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಹೊಸ ತಂತ್ರಜ್ಞಾನಾಧಾರಿತ ಶಿಕ್ಷಣ ಸಿಗುವಂತಾಗಬೇಕೆಂದು ಶಿಕ್ಷಕರು ಮಾಡಿದ ಹೊಸ ಪ್ರಯತ್ನ ಈಗ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗುತ್ತದೆ. ಸುಮಾರು 10 ವಿದ್ಯಾರ್ಥಿಗಳಿಗೆ ಕರೆ ಮಾಡಿ ಅವರ ಮೊಬೈಲ್‌ ಸಂಖ್ಯೆಗಳನ್ನು ಕಾನ್ಫರೆನ್ಸ್‌ಗೆ ಹಾಕಿ ಆ ಮೂಲಕ
ಬೋಧನೆ ಮಾಡುವಂಥದ್ದು ಕಾನ್ಫರೆನ್ಸ್‌ ಕರೆ. ನಾಲ್ಕಾರು ಮಂದಿ ಒಟ್ಟಿಗೆ ಸೇರಿಕೊಂಡು ಮಾತನಾಡಲು ಮಾತ್ರ ಸೀಮಿತವಾಗಿದ್ದ ಕಾನ್ಫರೆನ್ಸ್‌ ಕರೆ ಸೌಲಭ್ಯ ಈಗ ಶಿಕ್ಷಣದಲ್ಲಿಯೂ ಬಳಕೆಯಾಗುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಏರಿಕೆಗೆ ಅತ್ಯುತ್ತಮ ವಿಧಾನವಾಗಿದೆ.

ಅವಧಿ ಕಡಿಮೆಗೊಳಿಸಲ್ಲ
ಶಾಲಾ ಅವಧಿ ನಿಗದಿಪಡಿಸಿದಂತೆಯೇ ಇರುತ್ತದೆ. ಕಾನ್ಫರೆನ್ಸ್‌ ಕರೆ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಾಲಾ ಅವಧಿಯನ್ನು ಬಳಸಿಕೊಳ್ಳಲಾಗುವುದಿಲ್ಲ. ಸಂಜೆ ಮಕ್ಕಳು ಮನೆಗೆ ತೆರಳಿದ ಅನಂತರ ನಿರ್ದಿಷ್ಟ ಸಮಯವೊಂದನ್ನು ನಿಗದಿಪಡಿಸಿ ಶಿಕ್ಷಕರು ಕಾನ್ಫರೆನ್ಸ್‌ ಕರೆ ಮಾಡಿ ವಿದ್ಯಾರ್ಥಿಗಳಿಗೆ ಮೊಬೈಲ್‌ ಮೂಲಕ ಬೋಧನೆ ಆರಂಭಿಸುತ್ತಾರೆ.

Advertisement

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುರಿ
ವಿಶೇಷವಾಗಿ ಕಾನ್ಫರೆನ್ಸ್‌ ಕರೆ ಮಾಡಿ ಬೋಧಿಸುವ ಉದ್ದೇಶ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಪರೀಕ್ಷೆಗೆ ತಯಾರು ಮಾಡುವುದಕ್ಕಾಗಿ. ಇದರಿಂದ ಕ್ಲಾಸ್‌
ರೂಂ ಶಿಕ್ಷಣದೊಂದಿಗೆ ಮನೆಯಲ್ಲಿ ಮೊಬೈಲ್‌ ಮೂಲಕ ಶಿಕ್ಷಣವೂ ದೊರಕಿ ಅವರು ಕಲಿಕೆಯಲ್ಲಿ ಮುಂಚೂಣಿಗೆ ಬರಲು ಸುಲಭವಾಗಬಹುದು ಎನ್ನುವುದು ಶಿಕ್ಷಕರ ಪ್ರಯತ್ನ. ಕಾನ್ಫರೆನ್ಸ್‌ ಕರೆ ಮಾಡಿ ಬೋಧನೆ ಮಾಡುವುದರಿಂದ ಮಕ್ಕಳಿಗೆ ಆಯಾ ದಿನದ ತರಗತಿ ಪಾಠದೊಂದಿಗೆ ಇನ್ನೊಮ್ಮೆ ಪಾಠ ಮನನ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಗೊಂದಲಗಳನ್ನು ನಿವಾರಿಸಿಕೊಳ್ಳಲೂ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ವಿಧಾನ
ಎನ್ನುತ್ತಾರೆ ಶಿಕ್ಷಕಿ ವಾರಿಜಾ ಬೆಳ್ಳಾರೆ.

ವಿದ್ಯಾರ್ಥಿಗಳಿಗೆ ಲಾಭ
ತರಗತಿಯಲ್ಲಾದರೆ, ಕಡಿಮೆ ಎಂದರೂ 40- 50 ಮಕ್ಕಳಿರುತ್ತಾರೆ. ಇಂತಹ ವೇಳೆ ಕೆಲವೊಮ್ಮೆ ಪಾಠ ಅರ್ಥವಾಗದಿದ್ದರೆ ಕೇಳುವುದು ವಿದ್ಯಾರ್ಥಿಗಳಿಗೆ ಮುಜುಗರ ತರುವ ವಿಷಯವಾಗಿರುತ್ತದೆ. ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಂದ ಅವಮಾನ ಎದುರಿಸಬೇಕಾದ ಪ್ರಸಂಗ ಬರುತ್ತದೆ ಎಂಬ ಕಾರಣಕ್ಕಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಸಂಶಯ ನಿವಾರಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಕಾನ್ಫರೆನ್ಸ್‌ ಕಾಲ್‌ನಲ್ಲಿ ಗರಿಷ್ಠ 10 ಮಂದಿ ವಿದ್ಯಾರ್ಥಿಗಳಷ್ಟೇ ಇರುವುದರಿಂದ ಇಂತಹ ಮುಜುಗರಗಳು ಉಂಟಾಗುವುದಿಲ್ಲ. ಯಾವುದೇ ಅವಮಾನಗಳ ಫಜೀತಿ ಇಲ್ಲದೆ, ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಬಗೆ ಹರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next