Advertisement

ಕಾನೂನು ಸಚಿವಾಲಯ ಅಂಚೆ ಕಚೇರಿಯಲ್ಲ!

11:49 PM Jun 03, 2019 | Team Udayavani |

ಹೊಸದಿಲ್ಲಿ: ಕಾನೂನು ಸಚಿವಾಲಯವು ಅಂಚೆ ಕಚೇರಿಯಲ್ಲ. ನ್ಯಾಯಾಂಗ ನೇಮಕಾತಿ ವಿಚಾರದಲ್ಲಿ ನಾವು ನಮ್ಮ ಪಾತ್ರ ನಿರ್ವಹಿಸುತ್ತೇವೆ. ಆದರೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಕಾಪಾಡಿಕೊಂಡೇ ಕೆಲಸ ಮಾಡುತ್ತೇವೆ ಎಂದು ಎರಡನೇ ಅವಧಿಗೆ ಕಾನೂನು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಅನಂತರ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

Advertisement

ನ್ಯಾಯಾಂಗ ನೇಮಕಾತಿ ತ್ವರಿತಗೊಳಿಸುವಲ್ಲಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಮತ್ತು ಕೊಲಿಜಿಯಂ ಜೊತೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ತ್ರಿವಳಿ ತಲಾಖ್‌ ಮಸೂದೆ ಯನ್ನು ಪುನಃ ಮಂಡನೆ ಮಾಡುತ್ತೇವೆ. ಇದು ನಮ್ಮ ಸರಕಾರದ ಗುರಿಯೂ ಹೌದು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕಳೆದ ಬಾರಿ ಈ ಮಸೂದೆಯನ್ನು ಮಂಡಿಸಿದ್ದರೂ ಕಾಂಗ್ರೆಸ್‌ ಸೇರಿದಂತೆ ಇತರ ವಿಪಕ್ಷಗಳ ವಿರೋಧ ದಿಂದಾಗಿ ರಾಜ್ಯಸಭೆಯಲ್ಲಿ ಅನುಮೋದನೆ ಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿತ್ತು.

ಇನ್ನು ಟೆಲಿಕಾಂ ಖಾತೆಯನ್ನೂ ಪ್ರಸಾದ್‌ ಹೊಂದಿದ್ದು, ಮುಂದಿನ 100 ದಿನಗಳಲ್ಲಿ 5ಜಿ ಪ್ರಯೋಗ ನಡೆಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ. ಅಲ್ಲದೆ, ಶೀಘ್ರದಲ್ಲೇ ತರಂಗಾಂತರಗಳ ಹರಾಜು ಪ್ರಕ್ರಿಯೆಯನ್ನೂ ನಡೆಸುತ್ತೇವೆ. ನಮ್ಮ ಬಳಿ ಸಾಕಷ್ಟು ತರಂಗಾಂತರಗಳಿವೆ. 5ಜಿ ಸೇವೆ ನೀಡುವುದಕ್ಕೆ ಅಗತ್ಯವಿರುವ ತರಂಗಾಂ ತರವೂ ಸೇರಿದಂತೆ 4.9 ಲಕ್ಷ ಕೋಟಿ ರೂ. ಮೌಲ್ಯದ 8744 ಮೆ.ಹ ತರಂಗಾಂತರವಿದೆ ಎಂದು ಪ್ರಸಾದ್‌ ಹೇಳಿದ್ದಾರೆ.

ಇರಾನಿ ಅಧಿಕಾರ ಸ್ವೀಕಾರ: ಇದೇ ವೇಳೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಸ್ಮತಿ ಇರಾನಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದೇ ನನ್ನ ಗುರಿ ಎಂದು ಸ್ಮತಿ ಹೇಳಿದ್ದಾರೆ.

ಸೈಕಲ್‌ನಲ್ಲೇ ಕಚೇರಿಗೆ ಬಂದ ಸಚಿವ
ಕೇಂದ್ರದ ಆರೋಗ್ಯ ಸಚಿವರಾಗಿ ಸೋಮವಾರ ಡಾ| ಹರ್ಷವರ್ಧನ್‌ ಅಧಿಕಾರ ಸ್ವೀಕರಿಸಿದ್ದು, ಆಯುಷ್ಮಾನ್‌ ಭಾರತ್‌ ಯೋಜನೆಯ ಸಮರ್ಪಕ ಅನುಷ್ಠಾನವೇ ನನ್ನ ಮೊದಲ ಗುರಿ ಎಂದು ಹೇಳಿಕೊಂಡಿದ್ದಾರೆ.  ಡಾ| ಹರ್ಷವರ್ಧನ್‌ ಅವರು ತಮ್ಮ ನಿವಾಸದಿಂದ ನಿರ್ಮಾಣ ಭವನ್‌ನಲ್ಲಿರುವ ಕಚೇರಿಗೆ ಸೈಕಲ್‌ ತುಳಿದು ಕೊಂಡೇ ಆಗಮಿಸಿದ್ದು ವಿಶೇಷವಾಗಿತ್ತು. ಜೂ. 3ನ್ನು ವಿಶ್ವಸಂಸ್ಥೆಯು ವಿಶ್ವ ಬೈಸಿಕಲ್‌ ದಿನ ಎಂದು ಘೋಷಿಸಿರುವ ಕಾರಣ, ಸೈಕಲ್‌ನಲ್ಲೇ ಆಗಮಿಸಿದ ಹರ್ಷವರ್ಧನ್‌, ಸುಸ್ಥಿರ ಅಭಿವೃದ್ಧಿ ಸಾಧಿಸಲು ಸೈಕ್ಲಿಂಗ್‌ನ ಕೊಡುಗೆಯೂ ಇದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next