ವಾಡಿ: ಈ ಭಾಗದ ಜೀವನದಿ ಭೀಮಾ ಸದ್ಯ ದಡ ಸೋಸಿ ಧುಮ್ಮಿಕ್ಕಿ ಹರಿಯುತ್ತಿದ್ದು, ಚಿತ್ತಾಪುರ ತಾಲೂಕಿನ ನದಿ ದಂಡೆ ಗ್ರಾಮಗಳಿಗೀಗ ನೆರೆಹಾವಳಿ ಭೀತಿ ಶುರುವಾಗಿದೆ. ನೀರಿಗಾಗಿ ತತ್ತರಿಸಿದ್ದ ಜನರೀಗ ಅದೇ ನೀರಿನ ಭಯದಿಂದ ನಿದ್ರೆಗೆಟ್ಟು ಕುಳಿತಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಡದೇ ಸುರಿಯುತ್ತಿರುವ ರಣಮಳೆಯಿಂದ ಕರ್ನಾಟಕದ ಜಲಾಶಯಗಳು ಭರ್ತಿಯಾಗಿದ್ದು, ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಉತ್ತರ ಕರ್ನಾಟಕದ ಜಿಲ್ಲೆಗಳು ನೆರೆಹಾವಳಿಯಿಂದ ತತ್ತರಿಸಿ ಹೋಗಿದ್ದರೆ, ಹೈದ್ರಾಬಾದ ಕರ್ನಾಟಕದ ಜನರ ಎದೆಯಲ್ಲಿ ನದಿಯೊಂದು ಓಡುವ ಮೂಲಕ ನೆಮ್ಮದಿಗೆ ಭಂಗ ತಂದೊಡ್ಡಿದೆ.
ಚಿತ್ತಾಪುರ ತಾಲೂಕಿನ ಕುಂದನೂರು, ಚಾಮನೂರು, ಕಡಬೂರು, ಮಾರಡಗಿ, ಕೊಲ್ಲೂರು, ಸನ್ನತಿ ಹಾಗೂ ಕನಗನಹಳ್ಳಿ ಗ್ರಾಮಗಳನ್ನು ಸ್ಪರ್ಷಿಸಿ ಹರಿಯುತ್ತಿರುವ ಭೀಮಾನದಿ, ಗ್ರಾಮವನ್ನು ಹೊಕ್ಕು ಜನರ ಬದುಕಿಗೆ ಧಕ್ಕೆ ತರುವ ಅಪಾಯ ಎದುರಾಗಿದೆ. ಒಡಲು ಹಿಗ್ಗಿಸಿಕೊಂಡು ಹರಿಯುತ್ತಿರುವ ಭೀಮೆ ಹಿನ್ನೀರು, ಭಣಗುಡುತ್ತಿರುವ ಕಾಗಿಣಾ ನದಿ ಪ್ರವೇಶ ಪಡೆದಿದೆ. ಹಿನ್ನೀರು ಇಂಗಳಗಿ ಗ್ರಾಮದ ವರೆಗೂ ನಿಂತಿರುವುದು ಕಂಡುಬಂದಿದೆ. ಕೊಲ್ಲೂರಿನ ಕೆನಾಲ್ ನಾಲೆ ಮೂಲಕ ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಬೌದ್ಧ ನೆಲೆಗೆ ಧಕ್ಕೆ: ಸನ್ನತಿ ಭೀಮಾ ಬ್ಯಾರೇಜ್‌ಗೆ ಇರುವ ಎಲ್ಲಾ 40 ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದ್ದು, ಕನಗನಹಳ್ಳಿ ಗ್ರಾಮದ ನದಿ ದಂಡೆಯಲ್ಲಿ ಪತ್ತೆಯಾಗಿರುವ 3ನೇ ಶತಮಾನಕ್ಕೆ ಸೇರಿದ ಸಾಮ್ರಾಟ್ ಅಶೋಕನ ಕಾಲದ ಐತಿಹಾಸಿಕ ಬೌದ್ಧ ನೆಲೆಗೆ ನೆರೆ ಧಕ್ಕೆಯಾಗುವ ಸಾಧ್ಯತೆಯಿದೆ. ನೆಲದಡಿ ಹೂತ ಸ್ಥಿತಿಯಲ್ಲಿ ದೊರೆತಿರುವ ಬುದ್ಧವಿಹಾರ, ಸಾವಿರಾರು ಬುದ್ಧನ ಮೂರ್ತಿಗಳು, ಪಾಲಿ ಭಾಷೆಯಲ್ಲಿರುವ ಶಿಲಾಶಾಸನ, ಅಶೋಕನ ಮೂರ್ತಿ, ಬೌದ್ಧ ಧರ್ಮದ ಇತಿಹಾಸ ಹೇಳುವ ಅನೇಕ ಶಿಲ್ಪಕಲಾಕೃತಿಗಳನ್ನು ಒಂದೆಡೆ ಸಂಗ್ರಹ ಮಾಡಿಡಲಾಗಿದ್ದು, ಜಲ ಸಂಕಟದಿಂದ ಅವುಗಳನ್ನು ರಕ್ಷಣೆ ಮಾಡಬೇಕಾದ ಅಗತ್ಯವಿದೆ.
ಸದ್ಯ ಸನ್ನತಿ ಬೌದ್ಧ ನೆಲೆಯ ವಸ್ತು ಸಂಗ್ರಹಾಲಯದ ಕಟ್ಟಡಕ್ಕೆ ಭೀಮೆ ಸ್ಪರ್ಷ ಮಾಡಿದ್ದು, ಆತಂಕ ಮನೆಮಾಡಿದೆ. ನದಿ ದಡದಲ್ಲಿರುವ ಸನ್ನತಿ ಶಕ್ತಿದೇವತೆ ಚಂದ್ರಲಾ ಪರಮೇಶ್ವರಿ ದೇವಸ್ಥಾನಕ್ಕೆ ಸಧ್ಯ ಯಾವುದೇ ಧಕ್ಕೆಯಿಲ್ಲ. ನೀರು ನಿರಂತರವಾಗಿ ಹರಿದರೆ ಶಕ್ತಿದೇವತೆ ದೇಗುಲವೂ ಜಲಾವೃತಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕ್ಷಣ ಕ್ಷಣಕ್ಕೂ ಭೀಮೆಯ ಒಡಲಿನ ಜಲಧಾರೆ ಮಟ್ಟ ಏರಿಕೆಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಹೆದರಿಕೆ ಶುರುವಾಗಿದೆ. ಈ ಮಧ್ಯೆ ಜಿಲ್ಲಾಧಿಕಾರಿಗಳು, ಸೇಡಂ ಸಹಾಯಕ ಆಯುಕ್ತರು, ಚಿತ್ತಾಪುರ ತಹಶೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳು ನದಿ ದಂಡೆ ಗ್ರಾಮಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಜನರ ನೆರವಿಗೆ ಸಜ್ಜಾಗಿದ್ದಾರೆ.