ಹಾವೇರಿ: ಹಾವೇರಿ ಲೋಕಸಭೆ ಚುನಾವಣೆ ಕ್ಷೇತ್ರ ಅಖಾಡದಲ್ಲಿ ಸೆಣಸಾಡಿದ ಕಲಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಸರಿಯಾಗಿ ಒಂದು ತಿಂಗಳ ಬಳಿಕ ಮೇ 23ರಂದು ಮತದಾರರು ಬರೆದ ಭವಿಷ್ಯ ಬಹಿರಂಗಗೊಳ್ಳಲಿದೆ.
ಕ್ಷೇತ್ರದಲ್ಲಿ ಕಳೆದ 2014ರ ಚುನಾವಣೆಯಲ್ಲಿ ನಡೆದಂತೆ ಈ ಬಾರಿಯೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಶಿವಕುಮಾರ ಉದಾಸಿ 2009 ಹಾಗೂ 2014ರಲ್ಲಿ ಎರಡು ಬಾರಿ ಸತತ ಗೆಲುವು ಸಾಧಿಸಿದ್ದು ಈ ಬಾರಿ ಹ್ಯಾಟ್ರಿಕ್ ಗೆಲುವಿಗಾಗಿ ಸೆಣಸಾಟ ನಡೆಸಿದ್ದರು. ಇತ್ತ ಕಾಂಗ್ರೆಸ್ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದು ಅಭ್ಯರ್ಥಿಗೆ ಟಿಕೆಟ್ ನೀಡಿತ್ತು. ಅಭ್ಯರ್ಥಿ ಡಿ.ಆರ್. ಪಾಟೀಲ ಕಾಂಗ್ರೆಸ್ಸಿನ ಎಲ್ಲ ಶಕ್ತಿ ಬಳಸಿಕೊಂಡು ಬಿಜೆಪಿ ಹಣಿಯಲು ತಮ್ಮದೇಯಾದ ರಾಜಕೀಯ ತಂತ್ರಗಾರಿಕೆ ನಡೆಸಿದ್ದರು.
ಪಕ್ಷಗಳ ಬಲಾಬಲ: ಹಾವೇರಿ ಲೋಕಸಭೆ ಕ್ಷೇತ್ರ ಗದಗ ಹಾಗೂ ಹಾವೇರಿ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿದೆ. ಹಾನಗಲ್ಲ, ಹಾವೇರಿ, ಬ್ಯಾಡಗಿ, ರೋಣ, ಶಿರಹಟ್ಟಿ ಹೀಗೆ ಐದು ಕಡೆ ಬಿಜೆಪಿ ಶಾಸಕರಿದ್ದು ಗದಗ ಹಾಗೂ ಹಿರೇಕೆರೂರ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ರಾಣಿಬೆನ್ನೂರಿನಲ್ಲಿ ಪಕ್ಷೇತರ ಶಾಸಕ ಆರ್. ಶಂಕರ್ ಬೆಂಬಲಿಗರು ಬಿಜೆಪಿ ಬೆಂಬಲಿಸಿದ್ದರು. ಈ ಚುನಾವಣೆಯಲ್ಲಿ ಯಾವ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗೆ ಎಷ್ಟು ಬಲ ತುಂಬಿದ್ದಾರೆ ಎಂಬ ಕುತೂಹಲಕ್ಕೆ ಮೇ 23ರಂದು ತೆರೆಬೀಳಲಿದೆ.
ಪ್ರಚಾರಾಸ್ತ್ರ: ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಾರಿ ಸ್ಥಳೀಯ ವಿಚಾರಗಳಿಗಿಂತ ರಾಷ್ಟ್ರೀಯ ವಿಚಾರಗಳನ್ನೇ ತಮ್ಮ ಪ್ರಚಾರದ ಪ್ರಮುಖ ಅಸ್ತ್ರಗಳನ್ನಾಗಿಸಿಕೊಂಡಿದ್ದವು. ಮೋದಿ ಹಾಗೂ ರಾಹುಲ್ ಕುರಿತು ಟೀಕೆ, ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ತಮ್ಮ ಪಕ್ಷದ ಸರ್ಕಾರಗಳು ಮಾಡಿದ ಸಾಧನೆ, ರಾಜಕೀಯ ಪಕ್ಷಗಳ ಮೇಲಿರುವ ರಾಷ್ಟ್ರೀಯ ಆಪಾದನೆಗಳೇ ಈ ಬಾರಿ ಪ್ರಚಾರದಲ್ಲಿ ಅಗ್ರಸ್ಥಾನ ಪಡೆದಿದ್ದವು. ಸರ್ಜಿಕಲ್ ಸ್ಟ್ರೈಕ್ ಕೂಡ ಸದ್ದು ಮಾಡಿತ್ತು. ಈ ರೀತಿಯ ಪ್ರಚಾರಾಸ್ತ್ರಗಳು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಿರಬಹುದು ಎಂಬುದು ತಿಳಿಯಲು ಫಲಿತಾಂಶದ ದಿನದವರೆಗೂ ಕಾಯಲೇಬೇಕಾಗಿದೆ.
ಒಟ್ಟಾರೆ ಬಿಜೆಪಿಯ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ನ ಡಿ.ಆರ್. ಪಾಟೀಲ ಸೇರಿದಂತೆ ಎಂಟು ಅಭ್ಯರ್ಥಿಗಳ ಜನರ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು ಮೇ 23 ರಂದು ಫಲಿತಾಂಶ ಹೊರಬೀಳಲಿದೆ.
ರಣಕಣದಲ್ಲಿ ಕಲಿಗಳ ಆಯ್ಕೆ!
ಹಾವೇರಿ ಲೋಕಸಭೆ ಚುನಾವಣೆ ಕಣದಲ್ಲಿರುವ 10 ಅಭ್ಯರ್ಥಿಗಳಲ್ಲಿ ಕೂಲಿಕಾರ್ಮಿಕರೂ ಇದ್ದರೂ ಉದ್ಯಮಿಗಳೂ ಇದ್ದರು. ಪ್ರಾಥಮಿಕ ಶಿಕ್ಷಣ ಓದಿದವರೂ ಇದ್ದರು. ಪದವೀಧರರೂ ಇದ್ದರು. ಅಷ್ಟೇ ಅಲ್ಲ ಸಾವಿರಾರು ರೂ. ಆಸ್ತಿ ಹೊಂದಿದವರು, ಕೋಟ್ಯಂತರ ರೂ. ಆಸ್ತಿ ಒಡೆಯರೂ ಇದ್ದರು. ಮಧ್ಯ ವಯಸ್ಕರರು ಇದ್ದರು. 70 ವರ್ಷ ಮೀರಿದ ಹಿರಿಯರೂ ಇದ್ದರು. ಒಟ್ಟಾರೆ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹಿನ್ನೆಲೆ ಒಂದೊಂದು ರೀತಿಯಿದ್ದು, ಮತದಾರ ಪ್ರಭು ಅಭ್ಯರ್ಥಿಗಳಲ್ಲಿನ ಯಾವ ಅರ್ಹತೆ ಆಧರಿಸಿ ಮತಹಾಕಿದ್ದಾನೆ ಎಂಬ ಕೌತುಕವೂ ಹೆಚ್ಚಿದೆ.