ಹುಣಸೂರು: ಪಟ್ಟಣದ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಗೆ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ದಿಢೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪರಿಶೀಲನೆ ವೇಳೆ ವಾರ್ಡ್‌ಗಳು ಗಬ್ಬು ನಾರುತ್ತಿದ್ದವು. ಮಹಿಳೆಯರ ಶೌಚಗೃಹಗಳಿಗೆ ಬಾಗಿಲು ಇರಲಿಲ್ಲ. ಇಡೀ ಆಸ್ಪತ್ರೆಯ ವಾರ್ಡ್‌ಗಳ ಕಿಟಕಿಗಳಲ್ಲಿ ಹರಿದು ಚಿಂದಿಯಾದ ಸೊಳ್ಳೆ ಪರದೆಗಳು ನೇತಾಡುತ್ತಿದ್ದವು.
ಅಧ್ಯಕ್ಷರ ಭೇಟಿಯ ಅವಧಿಯಲ್ಲಿ ರೋಗಿಗಳು ಸ್ವತ್ಛತೆಯ ಕೊರತೆಯ ಬಗ್ಗೆ ದೂರು ನೀಡಿದರು. ನಗರದ ಗೃಹಿಣಿ ರೇವತಿ ಮಾತನಾಡಿ, ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ, ಇಡೀ ಆಸ್ಪತ್ರೆಯಲ್ಲಿ ಸ್ವತ್ಛತೆ ಕೊರತೆ ಕಾಡುತ್ತಿದೆ. ರಾತ್ರಿ ಸೊಳ್ಳೆಗಳ ಕಾಟದಿಂದ ರೋಗಿಗಳು ನರಳುವಂತಾಗಿದೆ. ಫ್ಯಾನ್‌ಗಳು ತಿರುಗುವುದಿಲ್ಲ ಎಂದು ದೂರಿದರೆ, ಕಾಂತರಾಜು, ಸರ್ ಇಲ್ಲಿನ ಕಿಟಕಿಗಳಿಗೆ ಸೊಳ್ಳೆ ಪರದೆ ಇಲ್ಲ, ಗಾಜು ಒಡೆದಿದೆ, ಶೌಚಾಲಯಕ್ಕೆ ಬಾಗಿಲ್ಲ ಎಂದು ಅವಲತ್ತುಕೊಂಡರು.
ಅಧ್ಯಕ್ಷರು, ದೂರವಾಣಿ ಮೂಲಕ ಆಡಳಿತಾಧಿಕಾರಿ ಡಾ.ಕೃಷ್ಣಹಾಂಡರನ್ನು ಸಂಪರ್ಕಿಸಿ, ಆಸ್ಪತ್ರೆಯಲ್ಲಿ ಕಿಟಕಿಗಳಿಗೆ ಸೊಳ್ಳೆ ಪರದೆ ಹಾಕಿಸುವಷ್ಟು ಕೂಡ ಶಕ್ತಿಯಿಲ್ಲವೇ? ಬೆಡ್‌ಗಳನ್ನು ಬದಲಾಯಿಸಿಲ್ಲ? ದಿನ ವಾರ್ಡ್‌ಗಳಿಗೆ ಭೇಟಿ ನೀಡುತ್ತೀರಾ? ಎಂದು ಪ್ರಶ್ನಿಸಿದಾಗ, ನೂತನವಾಗಿ ಆಸ್ಪತ್ರೆ ಕಟ್ಟಡ ಮಂಜೂರಾಗಿದ್ದು, 10 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಶಾಸಕರು ತಿಳಿಸಿದ್ದಾರೆ ಎಂದರು.
ವಾರದ ಗಡುವು: ಈ ಮಾತಿಗೆ ಆಕ್ರೋಶಗೊಂಡ ಅಧ್ಯಕ್ಷರು, ಸೊಳ್ಳೆ ಪರದೆ ಹಾಕಿಸಬೇಡಿ ಎಂದು ಶಾಸಕರು ಹೇಳಿದ್ದಾರೇನ್ರೀ? ವಿನಾಕಾರಣ ಶಾಸಕರನ್ನು ಎಳೆದುತಂದು ಅವರ ಮೇಲೆ ಆರೋಪ ಹೋರಿಸುತ್ತೀರಾ? ಇನ್ನೊಂದು ವಾರದೊಳಗೆ ಎಲ್ಲಾ ಕಿಟಿಕಿಗಳಿಗೂ ಪರದೆ ಹಾಕಿಸಿ, ನಾನು ಮತ್ತೆ ಭೇಟಿ ನೀಡುತ್ತೇನೆ ಎಂದು ಎಚ್ಚರಿಸಿದರು.
ಬಳಿಕ ಮಾತನಾಡಿದ ಸಾ.ರಾ.ನಂದೀಶ್, ಉಪವಿಭಾಗ ಕೇಂದ್ರವಾಗಿರುವ ಈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸ್ಟಾಫ್ ನರ್ಸ್‌ಗಳ ಕೊರತೆ ಇದೆ. ಅಲ್ಲದೇ ಆಡಳಿತಾಧಿಕಾರಿಯ ಬೇಜವಾಬ್ದಾರಿ ವರ್ತನೆ ಕಾಣುತ್ತಿದೆ. ವಿನಾಕಾರಣ ಶಾಸಕರನ್ನು ಎಳೆದು ತರುತ್ತಿದ್ದಾರೆ. ಹೀಗಾಗಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ.
ಆರೋಗ್ಯ ರಕ್ಷಣಾ ಸಮಿತಿಯವರು ಮೂಲಸೌಕರ್ಯಗಳ ಬೇಡಿಕೆ ಕುರಿತು ಜಿಪಂಗೆ ಮನವಿ ಸಲ್ಲಿಸಿದಲ್ಲಿ ಅವಶ್ಯವಿರುವ ಸೌಲಭ್ಯ ಒದಗಿಸಲು ಸಿದ್ಧ ಎಂದರು. ಈ ವೇಳೆ ವೈದ್ಯ ಡಾ.ಸಚ್ಚಿದಾನಂದಮೂರ್ತಿ, ಮುಖಂಡರಾದ ಶಿವಣ್ಣ, ಡಿ.ಕುಮಾರ್ ಇತರರಿದ್ದರು.