Advertisement

ಬದುಕು ಬದಲಾಯಿಸಿದ ಘಟನೆ; ಈಕೆ ದೇಶದ ಮೊದಲ ಮಂಗಳಮುಖಿ ಫೋಟೊ ಜರ್ನಲಿಸ್ಟ್

03:58 PM Sep 27, 2021 | Team Udayavani |

ಕನಸು ದೊಡ್ಡದಿರಬೇಕು. ಜತೆಗೆ ಸಾಧಿಸುವ ಛಲ, ಪ್ರಯತ್ನವಿರಬೇಕು. ಆಗ ಯಾವ ಕನಸನ್ನೂ ನನಸಾಗಿಸಬಹುದು. ಯಾವುದೇ ಅಡೆ ತಡೆಗಳನ್ನು ಮೆಟ್ಟಿ ನಿಲ್ಲಬಹುದು. ಇದಕ್ಕೆ ಉದಾಹರಣೆ ಜೋಯಾ ಥಾಮಸ್‌ ಲೋಬೋ. ಇವರು ದೇಶದ ಮೊದಲ ಮಂಗಳಮುಖಿ ಫೋಟೋ ಜರ್ನಲಿಸ್ಟ್‌.

Advertisement

ಈಕೆ ತನ್ನ ಜೀವನದ ಹಲವಾರು ವರ್ಷಗಳನ್ನು ಮುಂಬಯಿಯ ಗಲ್ಲಿಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಕಳೆದಿದ್ದಾಳೆ. ಗಲ್ಲಿಗಳಲ್ಲಿ ಭಿಕ್ಷೆ ಬೇಡುತ್ತಾ ಅಲ್ಲಿನವರಿಂದ ತಿರಸ್ಕಾರಕ್ಕೆ ಒಳಗಾಗುತ್ತಾ ಬದುಕುತ್ತಿದ್ದ ಜೋಯಾ ಮುಂದೊಂದು ದಿನ ಉತ್ತಮ ಛಾಯಾಚಿತ್ರಗ್ರಾಹಕಳಾಗುತ್ತಾಳೆ ಎಂದೂ ಯಾರೂ ಊಹಿಸಿರಲಿಲ್ಲ. ಜೋಯಾಳೂ ಕೂಡ..

ಬದುಕು ಬದಲಾಯಿಸಿದ ಘಟನೆ
2018ರಲ್ಲಿ ಯೂಟ್ಯೂಬ್‌ನಲ್ಲಿ ಹಿಜ್ರಾ ಶಾಪ್‌ ಕಿ ವರ್ಧನ್‌ ಚಿತ್ರವನ್ನು ನೋಡುತ್ತಿದ್ದಾಗ ಅದರಲ್ಲಿದ್ದ ತಪ್ಪುಗಳನ್ನು ಗುರುತಿಸಿ ಕಾಮೆಂಟ್‌ ಮಾಡುತ್ತಾಳೆ. ಇದು ಅವಳನ್ನು ಮುಂದೆ ಸಿಕ್ವೆಲ್‌ ಸಿನೆಮಾದಲ್ಲಿ ಅವಕಾಶ ದೊರಕುವುದಕ್ಕೆ ಕಾರಣವಾಗುತ್ತದೆ. ಆ ಸಿನೆಮಾಕ್ಕೆ ಅವಾರ್ಡ್‌ ದೊರೆಯುತ್ತದೆ. ಆ ಸಿನೆಮಾಕ್ಕೆ ಯೂಟ್ಯೂಬ್‌ನಲ್ಲಿ 4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ದೊರೆಯುತ್ತದೆ. ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಜೋಯಾಳ ಮಾತಿನಿಂದ ಅಲ್ಲಿನ ಮಾಧ್ಯಮಗಳು ಅವಳನ್ನು ಗುರುತಿಸಿದವು. ಆ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಜೋಯಾಳಿಗೆ ಉದ್ಯೋಗ ದೊರಕುತ್ತದೆ.

ಮೀಡಿಯಾ ಕಾರ್ಡ್‌ ಏನೋ ದೊರಕಿತು. ಆದರೆ ಏನೂ ಮಾಡಬೇಕುನ್ನುವುದರ ಅರಿವು ಆಕೆಗಿರಲಿಲ್ಲ. ಆದ್ದರಿಂದ ಜೋಯಾ ಮತ್ತೆ ಭಿಕ್ಷೆ ಬೇಡಲು ಆರಂಭಿಸುತ್ತಾಳೆ. ಭಿಕ್ಷೆ ಬೇಡಿ ಸಂಪಾದಿಸಿದ 30 ಸಾವಿರ ರೂ. ನಲ್ಲಿ ಆಕೆ ಸೆಕೆಂಡ್‌ ಹ್ಯಾಂಡ್‌ ಕೆಮರಾ ಕೊಂಡುಕೊಳ್ಳುತ್ತಾಳೆ. 2019ರಲ್ಲಿ ಪಿಂಕ್‌ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ಅಲ್ಲಿ ಯುರೋಪಿಯನ್‌ ಪ್ರೆಸ್‌ ಏಜೆನ್ಸಿಯ ದಿವ್ಯಕಾಂತ್‌ ಅವರನ್ನು ಭೇಟಿಯಾಗುತ್ತಾಳೆ. ಅವರು ಫೋಟೋ ಜರ್ನಲಿಸಂ ಕುರಿತು ಮಾಹಿತಿ ನೀಡುತ್ತಾರೆ.

2020ರಲ್ಲಿ ಜೋಯಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಾಂದ್ರಾ ನಿಲ್ದಾಣದಲ್ಲಿ ಸಾವಿರಾರು ಜನ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣುತ್ತಾಳೆ. ತತ್‌ಕ್ಷಣ ರೂಮಿಗೆ ತೆರಳಿ ಕೆಮರಾ ತೆಗೆದುಕೊಂಡು ಬಂದು ಡಾಕ್ಯುಮೆಂಟರಿ, ಫೋಟೋ ತೆಗೆಯುತ್ತಾಳೆ. ಅದು ಜೋಯಾಳಿಗೆ ಸಾಕಷ್ಟು ಹೆಸರನ್ನು ತಂದು ಕೊಡುತ್ತದೆ. ಅನಂತರ ಕೊರೊನಾ ವೈರಸ್‌, ವ್ಯಾಕ್ಸಿನ್‌ ಕುರಿತು ಡಾಕ್ಯುಮೆಂಟರಿ ತಯಾರಿಸುತ್ತಾಳೆ. ಇದರೊಂದಿಗೆ ವೈಲ್ಡ್‌ಲೈಫ್ ಫೋಟೋಗ್ರಫಿ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. “ಪತ್ರಿಕೋದ್ಯಮವು ನನ್ನ ಜೀವನದ ದಾರಿಯನ್ನು ಬದಲಾಯಿಸಿತು. ಅದು ಕೆಲಸಕ್ಕೆ ದಾರಿ ಮಾಡಿಕೊಟ್ಟಿರುವುದು ಮಾತ್ರವಲ್ಲ ಒಬ್ಬ ವ್ಯಕ್ತಿಯಾಗಿಯೂ ನನ್ನನ್ನು ಬದಲಿಸಿದೆ’ ಎನ್ನುತ್ತಾರೆ ಜೋಯಾ ಲೋಬೋ.

Advertisement

ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next