ಮೈಸೂರು: ಕೊರೊನಾ ಹಿನ್ನೆಲೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಗಾಗಿ ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರವೇಶ ಶುಲ್ಕ ಹೆಚ್ಚಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ನಿರ್ಧರಿಸಿದೆ.
ನಗರದ ಕೂರ್ಗಳ್ಳಿಯ ಮೃಗಾಲಯ ಪ್ರಾಧಿಕಾರದ ಆಡಳಿತ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಟಿಕೆಟ್ ದರವನ್ನು ಪರಿಷ್ಕರಿಸಿ ವಯಸ್ಕರಿಗೆ ಇದ್ದ 40 ರೂ.ನಿಂದ 50 ರೂ. ಹಾಗೂ ಮಕ್ಕಳಿಗೆ 20 ರೂ. ಇದ್ದ ಟಿಕೆಟ್ ದರವನ್ನು 25 ರೂ.ಗೆ ಹೆಚ್ಚಿಸಲಾಗಿದೆ. ಹಾಗೆಯೇಮೃಗಾಲಯ ಮತ್ತು ಕಾರಂಜಿ ಕೆರೆ ಎರಡೂ ಪ್ರದೇಶಗಳಿಗೆ ಭೇಟಿನೀಡಲು ವಯಸ್ಕರಿಗೆ 130 ರೂ.ಹಾಗೂ ಮಕ್ಕಳಿಗೆ 70 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಯಿತು.
ಜೊತೆಗೆ ಮೈಸೂರಿನ ಮೃಗಾಲಯಕ್ಕೆ ಆರ್‌ಬಿಐ ನೋಟು ಮುದ್ರಣಾಲಯ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದಿಂದ ಸಿಎಸ್‌ಆರ್ ನಿಧಿಯಿಂದ ಗೊರಿಲ್ಲಾ, ಒರಾಂಗುಟಾನ್, ಕ್ಲಾತ್ ಕರಡಿ ಮನೆನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆ ನೀಡಲಾಯಿತು. ಹಾಗೆಯೇ ಮೃಗಾಲಯದ ಎದುರು 2 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್‌ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರವೇ ಉದ್ಘಾಟಿಸಲು ದಿನಾಂಕವನ್ನು ನಿಗದಿಪಡಿಸಲಾಯಿತು.
ವೇತನ ಪರಿಷ್ಕರಣೆಗೆ ಕ್ರಮ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕಾರ್ಮಿಕರ ವೇತನವನ್ನು ಪರಿಷ್ಕರಿಸಲು ಸಭೆಯಲ್ಲಿ ಸೂಚಿಸಲಾಯಿತು. ಜೊತೆಗೆ ಹಂಪಿಯ ಮೃಗಾಲಯದಲ್ಲಿ ಜಿರಾಫೆ ಆವರಣವನ್ನು ನಿರ್ವಹಿಸಲು 25 ಲಕ್ಷ ರೂ. ಮೌಲ್ಯದಪಟ್ಟಿಗೆ ಅನುಮೋದನೆ ನೀಡಲಾಯಿತು. ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯದಿಂದ ಹಂಪಿಯ ಮೃಗಾಲಯಕ್ಕೆ ನೀರಾನೆ ಹಸ್ತಾಂತರಿಸುತ್ತಿದ್ದು, ನೀರಾನೆಯ ಆವರಣವನ್ನು ನಿರ್ಮಾಣ ಮಾಡಲು ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ ಹಂಚಿಕೆಯಾದ 62 ಲಕ್ಷ ರೂ.ಗಳಿಗೆ ತಾಂತ್ರಿಕ ಮಂಜೂರಾತಿಗೆ ಒಪ್ಪಿಗೆ ಸೂಚಿಸಲಾಯಿತು.
ಬಳಿಕ ಶಿವಮೊಗ್ಗ ಮೃಗಾಲಯದಲ್ಲಿ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ಪಂಚಾಯತ್ ರಾಜ್ ಇಲಾಖೆಯಿಂದ 4 ಕೋಟಿ ರೂ. ನೀಡುವಂತೆ ಇಲಾಖೆಯ ಸಚಿವ ಈಶ್ವರಪ್ಪ ಅವರಿಗೆ ಮನವಿಯನ್ನು ಕಳುಹಿಸಲಾಯಿತು.
ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಕುಮಾರ್ ಗೋಗಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಪ್ರಧಾನ ಕಾರ್ಯದರ್ಶಿ ಸಂಜಯ್ ಎಸ್. ಬಿಜೂರು, ಆರ್ಥಿಕ ಇಲಾಖೆ ಉಪ ಕಾರ್ಯದರ್ಶಿ ವತ್ಸಲ ಕುಮಾರಿ, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಮೇಯರ್ ಸುನಂದಾ ಫಾಲನೇತ್ರ, ಗೋಕುಲ್, ಜ್ಯೋತಿ ರೇಚಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.