Advertisement
ಚಾಮುಂಡಿಬೆಟ್ಟದ ಸಮೀಪದ ಮೃಗಾಲಯಕ್ಕೆ ಆಗಮಿಸಿದ್ದ ಚಿರತೆ ಮೃಗಾಲಯದ ಆವರಣದ ಮರವನ್ನೇರಿ ನಿದ್ರೆಗೆ ಜಾರಿತ್ತು. ಈ ನಡುವೆ ಗುರುವಾರ ಬೆಳಗ್ಗೆ 9 ಗಂಟೆ ವೇಳೆ ಎಂದಿನಂತೆ ಕೆಲಸದಲ್ಲಿ ತೊಡಗಿದ್ದ ಮೃಗಾಲಯದ ಪ್ರಾಣಿಪಾಲಕ ರಾಜಶೇಖರ್ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮರದ ಮೇಲೆ ಚಿರತೆ ಮಲಗಿರುವುದನ್ನು ಗಮನಿಸಿದ್ದರು.
Related Articles
Advertisement
ಹೊರಹೋದ ಪ್ರವಾಸಿಗರು: ಚಿರತೆ ಮೃಗಾಲಯಕ್ಕೆ ನುಗ್ಗಿರುವ ವಿಷಯ ಗೊತ್ತಾಗುವ ಹೊತ್ತಿಗೆ ನೂರಾರು ಪ್ರವಾಸಿಗರು ಮೃಗಾಲಯ ವೀಕ್ಷಣೆಗೆಂದು ಪ್ರವೇಶಿಸಿದ್ದರು. ಆದರೆ, ಮೃಗಾಲಯದಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು- ಸಿಬ್ಬಂದಿ ಪ್ರವಾಸಿಗರ ಮನವೊಲಿಸಿ, ಅವರನ್ನು ಹೊರ ಕಳುಹಿಸಿದರು. ಸತತ ಕಾರ್ಯಾಚರಣೆ ಬಳಿಕ ಚಿರತೆ ಸೆರೆಹಿಡಿದ ನಂತರ ಪ್ರವಾಸಿಗರಿಗೆ ಎಂದಿನಂತೆ ಮೃಗಾಲಯ ವೀಕ್ಷಣೆಗೆ ಅವಕಾಶ ನೀಡಲಾಯಿತು.
ಕಾರಂಜಿಕೆರೆ ಬಳಿಯ ಗೇಟ್‌ನಿಂದ ಚಿರತೆ ಒಳ ಬಂದಿರಬಹುದು… ಮೈಸೂರು: ಮೈಸೂರು ಮೃಗಾಲಯದಲ್ಲಿ ಮರ ಏರಿ ಮಲಗಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಗುರುವಾರ ಬೆಳಗ್ಗೆ ಮೃಗಾಲಯದ ಸಿಬ್ಬಂದಿ ಪ್ರಾಣಿಗಳಿಗೆ ಮೇವು ನೀಡುವ ವೇಳೆ ತಿರುಗಾಟದಲ್ಲಿದ್ದಾಗ ಮರದ ಮೇಲೆ ಚಿರತೆ ಮಲಗಿರುವುದು ಕಾಣಿಸಿದೆ. ಕೂಡಲೇ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಅರವಳಿಕೆ ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಡೆಗೂ ಅಂದಾಜು 3 ವರ್ಷ ವಯಸ್ಸಿನ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ನಿರ್ಬಂಧ: ಮೃಗಾಲಯ ವೀಕ್ಷಣೆಗೆ ಬೇರೆ ಬೇರೆ ರಾಜ್ಯಗಳಿಂದ ಬೆಳಗ್ಗೆಯೇ ನೂರಾರು ಪ್ರವಾಸಿಗರು ಆಗಮಿಸಿದ್ದರಾದರೂ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿತ್ತು. ಚಿರತೆ ಸೆರೆ ಹಿಡಿದ ನಂತರ ಎಂದಿನಂತೆ ಸಾರ್ವಜನಿಕ ಭೇಟಿಗೆ ಅವಕಾಶ ನೀಡಲಾಯಿತು. ಸಾರ್ವಜನಿಕರ ಪ್ರವೇಶಕ್ಕೂ ಮೊದಲೇ ಚಿರತೆ ಪತ್ತೆಯಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಯಿತು ಎಂದು ಮೃಗಾಲಯದ ಸಿಬ್ಬಂದಿ ನಿಟ್ಟುಸಿರು ಬಿಟ್ಟರು. ಮೊದಲಿಗೆ ಮೃಗಾಲಯದ ಚಿರತೆಯೇ ಬೋನಿನಿಂದ ಹೊರಬಂದು ಮರ ಏರಿ ಮಲಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮೃಗಾಲಯದ ಚಿರತೆಗಳೆಲ್ಲಾ ಬೋನಿನಲ್ಲೇ ಇರುವುದು ಖಚಿತವಾದ ನಂತರ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಯಿತು. ಮೃಗಾಲಯದ ಹಿಂಭಾಗದ ಕಾರಂಜಿಕೆರೆ ಬಳಿಯ ಗೇಟ್ ಮೂಲಕ ಈ ಚಿರತೆ ಒಳ ಬಂದಿರಬಹುದು ಎನ್ನಲಾಗುತ್ತಿದ್ದು, ಹೊರಗಿನ ಪ್ರಾಣಿಗಳು ಮೃಗಾಲಯದ ಒಳ ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.