ಮುಂಬಯಿ: ಆನ್ ಲೈನ್ ಆಹಾರ ವಿತರಣ ಸೇವೆಯನ್ನು ಒದಗಿಸುವ ಝೊಮ್ಯಾಟೋ, ಮ್ಯಾಜಿಕ್ ಪಿನ್, ಈಝಿ ಡೈನರ್, ನಿಯರ್ ಬಯ್ ಇತ್ಯಾದಿಗಳ ವಿರುದ್ಧ ದೇಶಾದ್ಯಂತ ಸುಮಾರು 1200 ರೆಸ್ಟೋರೆಂಟ್ ಗಳು #logout ಅಭಿಯಾನದಡಿಯಲ್ಲಿ ಈ ಕಂಪೆನಿಗಳ ಸೇವೆಗಳನ್ನು ಬಳಸಿಕೊಳ್ಳದಿರಲು ನಿರ್ಧರಿಸಿವೆ.
ಗ್ರಾಹಕರಿಗೆ ಆನ್ ಲೈನ್ ಬೇಡಿಕೆ ಮೂಲಕ ಆಹಾರ ಪೂರೈಕೆ ಸೇವೆ ನೀಡುವ ಈ ಎಲ್ಲಾ ಸಂಸ್ಥೆಗಳು ಮಿತಿಮೀರಿದ ಆಫರ್ ಗಳನ್ನು ನೀಡುತ್ತಿರುವ ವಿರುದ್ಧ ರೆಸ್ಟೋರೆಂಟ್ ಮಾಲಕರು ಗರಂ ಆಗಿದ್ದರು. ಇದೀಗ ಈ ಲಾಗ್ ಔಟ್ ಅಭಿಯಾನದ ಬಿಸಿ ಆಹಾರ ಪೂರೈಕೆ ಸೇವೆ ಒದಗಿಸುತ್ತಿರುವ ಝೊಮ್ಯಾಟೋವನ್ನು ತಟ್ಟಿದ್ದು, ಅದು ಈ ಲಾಗ್ ಔಟ್ ಅಭಿಯಾನವನ್ನು ಕೈಬಿಡುವಂತೆ ರೆಸ್ಟೋರೆಂಟ್ ಮಾಲಕರಿಗೆ ದುಂಬಾಲು ಬಿದ್ದಿದೆ. ಮತ್ತು ಈ ಸಮಸ್ಯೆಯನ್ನು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಂತೆ ಅದು ರೆಸ್ಟೋರೆಂಟ್ ಮಾಲಕರಿಗೆ ಮನವಿ ಮಾಡಿಕೊಂಡಿದೆ.
ಕಳೆದ ವಾರ ಪ್ರಾರಂಭಗೊಂಡ ಈ ಲಾಗ್ ಔಟ್ ಅಭಿಯಾನದಡಿಯಲ್ಲಿ ಝೊಮ್ಯಾಟೋ ಈಗಾಗಲೇ 65 ರೆಸ್ಟೋರೆಂಟ್ ಗಳನ್ನು ಕಳೆದುಕೊಂಡಿದೆ. ಇದು ತಾನು ಆರಂಭಿಸಿದ ‘ಗೋಲ್ಡ್’ ಸೇವೆಗಳಡಿಯಲ್ಲಿ ಬರುವ ರೆಸ್ಟೋರೆಂಟ್ ಗಳ ಒಂದು ಪ್ರತಿಶತದಷ್ಟಾಗಿದೆ.
ಇದೀಗ ತನ್ನ ತಪ್ಪನ್ನು ಅರಿತುಕೊಂಡಿರುವಂತೆ ಕಾಣುತ್ತಿರುವ ಝೊಮ್ಯಾಟೋ, ‘ಗ್ರಾಹಕರ ಹಿತದೃಷ್ಟಿಯಿಂದ ರೆಸ್ಟೋರೆಂಟ್ ಮಾಲಕರು ಈ ಲಾಗ್ ಔಟ್ ಅಭಿಯಾನವನ್ನು ಕೈಬಿಡಬೇಕು ಮತ್ತು ಈ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳು ನಡೆಯಲಿ. ನಾವೆಲ್ಲೋ ಒಂದು ಕಡೆ ತಪ್ಪು ಮಾಡಿದ್ದೇವೆ ಮತ್ತು ನಮ್ಮ ಯೋಜನೆ ನಾವು ಎಣಿಸದಂತೆ ಸಾಗಲಿಲ್ಲ ಅಂದುಕೊಳ್ಳುತ್ತೇವೆ’ ಎಂದು ಝೊಮ್ಯಾಟೋ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪೆಂದರ್ ಗೋಯಲ್ ಅವರು ಸರಣಿ ಟ್ವೀಟ್ ಗಳ ಮೂಲಕ ಹೆಳಿಕೊಂಡಿದ್ದಾರೆ.
ಮತ್ತು ಈ ಗೋಲ್ಡ್ ಸೇವೆಗಳಿಂದ ತನಗೆ ಮತ್ತು ರೆಸ್ಟೋರೆಂಟ್ ಗಳಿಗೆ ಲಾಭವಾಗುವಂತೆ ಮಾಡುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದೂ ಸಹ ಗೋಯಲ್ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ರೆಸ್ಟೋರೆಂಟ್ ಮತ್ತು ಝೊಮ್ಯಾಟೋ ನಡುವಿನ ಈ ಗೊಂದಲದ ಲಾಭವನ್ನು ಪಡೆದುಕೊಳ್ಳಲು ‘ಚೌಕಾಶಿದಾರರು’ ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶ ರೆಸ್ಟೋರೆಂಟ್ ಅಸೋಸಿಯೇಷನ್ ಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಝೊಮ್ಯಾಟೋ ಸಂಸ್ಥೆಯ ‘ಗೋಲ್ಡ್’ ಸೇವೆಯನ್ನು ಬಳಸುವ ಗ್ರಾಹಕರಿಗೆ ಆಹಾರ ಪದಾರ್ಥಗಳಲ್ಲಿ ಒಂದಕ್ಕೊಂದು ಉಚಿತವಿದ್ದರೆ ಪಾನೀಯಗಳಲ್ಲಿ ಎರಡಕ್ಕೆ ಎರಡು ಉಚಿತವಾಗಿರುತ್ತದೆ. ಇದು ಕ್ರಮವಾಗಿ 299 ರೂಪಾಯಿಗಳು ಮತ್ತು 1199 ರೂಪಾಯಿಗಳ ಪ್ರಾಯೋಗಿಕ ಮತ್ತು ವಾರ್ಷಿಕ ಪ್ಯಾಕ್ ಗ್ರಾಹಕರಿಗೆ ಈ ಆಫರ್ ಲಭ್ಯವಿದೆ. ಝೊಮ್ಯಾಟೋ ಪ್ರಾರಂಭಿಸಿದ ಈ ‘ಗೋಲ್ಡ್’ ಯೋಜನೆಯಡಿಯಲ್ಲಿ ಈಗಾಗಲೇ 1.25 ಮಿಲಿಯನ್ ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ.