Advertisement

ಜೋಯಿಡಾ: ಸೇತುವೆ ಕಾರ್ಯ ಪೂರ್ಣಗೊಂಡರೂ ಇಲ್ಲ ಬಸ್‌!

06:06 PM Mar 06, 2024 | Team Udayavani |

ಉದಯವಾಣಿ ಸಮಾಚಾರ
ಜೋಯಿಡಾ: ತಾಲೂಕಿನ ಅವರ್ಲಿ ಸೇತುವೆ ಹಾಳಾದ ಕಾರಣ ನಂದಿಗದ್ದಾ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಿಗೆ ಕಳೆದ 6 ತಿಂಗಳುಗಳಿಂದ ಬಸ್‌ ವ್ಯವಸ್ಥೆ ಇಲ್ಲದೆ ಇಲ್ಲಿನ ಸಾರ್ವಜನಿಕರು ಪರದಾಡಿದ್ದರು ಈಗ ಸೇತುವೆ ಕಾಮಗಾರಿ ಮುಗಿದಿದ್ದರೂ ಬಸ್‌
ಓಡಾಟ ಆರಂಭಗೊಳ್ಳದೆ ಸಂಚಾರದ ಸಮಸ್ಯೆ ಮುಂದುವರಿದಿದೆ.

Advertisement

ಅವರ್ಲಿ ಸೇತುವೆ ಕಾಮಗಾರಿ ಮುಗಿದಿದ್ದು ನೂತನ ಸೇತುವೆ ಮೆಲೆ ಎಲ್ಲಾ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಅಲ್ಲದೇ ಒಂದು
ವಾರದಿಂದ ಉಳವಿ-ಬೈಲಹೊಂಗಲ ಬಸ್‌ ಕೂಡಾ ಸಂಚರಿಸುತ್ತಿದೆ. ಆದರೆ ದಾಂಡೇಲಿ ಡಿಪೋದ ಗುಂದ-ತಮ್ಮಣ್ಣಗಿ ಬಸ್‌ ಹಾಗೂ ಉಳವಿ-ಗುಂದ-ಶಿರಸಿ ಬಸ್‌ ಯಾಕೆ ಸಂಚಾರ ಆರಂಭಿಸಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ.

ಎಲ್ಲಾ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತವಾಗಿರುವಾಗ ಈ ಭಾಗದ ಬಸ್‌ಗಳ ಸಂಚಾರ ಮಾತ್ರ ಸ್ಥಗಿತವಾಗಿರುವುದು ಯಾಕೆ
ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಭಾಗದ ಜನ ಸಾರಿಗೆ ಬಸ್‌ ಇಲ್ಲದೆ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗ ಸೇತುವೆ ಪೂರ್ಣಗೊಂಡ ನಂತರವೂ ಸಮಸ್ಯೆ ಮಾತ್ರ ಹಾಗೇ ಮುಂದುವರಿದಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿ ಜಾತ್ರೆಗೆ ನೂತನವಾಗಿ ನಿರ್ಮಿಸಿದ ಸೇತುವೆ ಮೇಲೆಯೇ ನೂರಾರು ಟ್ರಾಕ್ಟರ್‌ ಹಾಗೂ ಖಾಸಗಿ ವಾಹನಗಳು ಓಡಾಡಿದೆ. ಆದರೆ ಗುಂದ ಗ್ರಾಮದ ಬಸ್‌ ಸಂಚಾರಕ್ಕೆ ಮಾತ್ರ ಯಾಕೆ ಮೀನಮೇಷ ಎಂಬುದು ಜನರ ಪ್ರಶ್ನೆ. ಸರ್ಕಾರದ ಉಚಿತ ಬಸ್‌ ಯೋಜನೆ ಈ ಭಾಗದ ಮಹಿಳೆಯರಿಗೆ ಮರೀಚಿಕೆಯಾಗಿದೆ. ಅಲ್ಲದೆ ಬಡವರು ಆಸ್ಪತ್ರೆ,
ಕಚೇರಿ ಕೆಲಸಗಳಿಗೆ ತೆರಳಲು, ಸಂತೆ ಸೇರಿದಂತೆ ಇನ್ನೂ ಹಲವು ಕೆಲಸಗಳಿಗೆ ಗ್ರಾಮದಿಂದ ಬೇರೆಡೆ ತೆರಳಲು ಬಸ್‌ ಸಂಚಾರ ಇಲ್ಲದೇ ತೊಂದರೆ ಉಂಟಾಗಿದೆ. ಸರಿಯಾದ ಸಮಯಕ್ಕೆ ಬಸ್‌ ಇಲ್ಲದ ಕಾರಣ ಶಾಲಾ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.

ಸೇತುವೆ ಕೆಲಸ ಮುಗಿದು ಎಲ್ಲ ವಾಹನ ಸಂಚಾರ ಆರಂಭಗೊಂಡಿದ್ದರೂ ಸ್ಥಳೀಯ ಬಸ್‌ ಮಾತ್ರ ಸಂಚಾರ ಆರಂಭಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಧಿಕೃತವಾಗಿ ಪತ್ರ ಕೊಟ್ಟಲಿ ಆ ಕ್ಷಣವೇ ಗುಂದಕ್ಕೆ ಬಸ್‌ ಬಿಡಲಾಗುವುದು ಎಂದು ದಾಂಡೇಲಿ ಡಿಪೋ ಮ್ಯಾನೇಜರ್‌ ಹೇಳುತ್ತಾರೆ. ತಕ್ಷಣ ಬಸ್‌ ಸಂಚಾರ ಆರಂಭಿಸಲು ಅಧಿಕಾರಿಗಳು , ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.

Advertisement

ಸೇತುವೆ ಕೆಲಸ ಮುಗಿದಿದೆ. ಮಣ್ಣಿನ ರಸ್ತೆಗೆ ಕಾಂಕ್ರೀಟ್‌ ಹಾಕುವುದು ಬಾಕಿ ಉಳಿದಿದೆ. ಸದ್ಯದ ಮಟ್ಟಿಗೆ ಬಸ್‌ ಬಿಡಲು ಯಾವ ತೊಂದರೆ ಇಲ್ಲ. ಕಾಂಕ್ರೀಟ್‌ ಹಾಕುವಾಗ ಒಂದು ವಾರ ಮತ್ತೆ ಬಂದ್‌ ಮಾಡಲಾಗುವುದು. ಈಗ ಬಸ್‌ ಸಂಚಾರಕ್ಕೆ ಯಾವ ಸಮಸ್ಯೆಯೂ ಇಲ್ಲ ನಮ್ಮ ತಕರಾರು ಇಲ್ಲ.
ಶಿವಪ್ರಕಾಶ್‌ , ಎಇಇ ಲೋಕೋಪಯೋಗಿ ಇಲಾಖೆ ಜೋಯಿಡಾ.

ಬಸ್‌ ಇಲ್ಲದೆ ಈ ಭಾಗದ ಜನರಿಗೆ ಸಮಸ್ಯೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. ಗುಂದಕ್ಕೆ ಕೂಡಲೇ ಬಸ್‌ ಬಿಡುವಂತೆ
ದಾಂಡೇಲಿ ಡಿಪೋ ಮ್ಯಾನೇಜರ್‌ ಅವರಿಗೆ ಸೂಚಿಸಲಾಗುವುದು.
ಮಂಜುನಾಥ ಮೊನ್ನೋಳಿ ,
ತಹಶೀಲ್ದಾರರ ಜೋಯಿಡಾ

Advertisement

Udayavani is now on Telegram. Click here to join our channel and stay updated with the latest news.

Next