Advertisement

ಭಾರಿ ಝೋವಾ? 

03:50 AM Apr 14, 2017 | |

ಝೋವಾ ಮೊರಾನಿ ಬಾಲಿವುಡ್‌ ಅಂಗಳದಲ್ಲಿಯೇ ಆಡಿ ಬೆಳೆದ ಹುಡುಗಿ. ತಂದೆ ಖ್ಯಾತ ನಿರ್ಮಾಪಕ ಕರೀಂ ಮೊರಾನಿಯ ಮಗಳು ಈಕೆ. ಸಿನೆಯುಗ್‌ ಎಂಬ ಸಿನೆಮಾಗಳಿಗೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಆಯೋಜಿಸುವ ಈವೆಂಟ್‌ ಮೆನೇಜ್‌ಮೆಂಟ್‌ ಕಂಪೆನಿಯ ಮಾಲಕರೂ ಹೌದು. ಹೀಗಾಗಿ, ಬಾಲ್ಯದಿಂದಲೇ ಝೋವಾಳಿಗೆ ಸಿನೆಮಾದ ನಂಟಿತ್ತು. ಹೀಗಾಗಿ, ಸಿನೆಮಾದಲ್ಲಿ ಝೋವಾ ಸಖತ್‌ ಮಿಂಚಬೇಕಿತ್ತು. ಆದರೆ, ಹಾಗಾಗಲಿಲ್ಲ ಎನ್ನುವುದೇ ಝೋವಾಳ ದುರಂತ. ಚೆಲುವಿಗೆ ಏನೇನೂ ಕೊರತೆಯಿಲ್ಲ, ಪ್ರತಿಭೆಯೂ ತಕ್ಕಮಟ್ಟಿಗೆ ಇದೆ. ಇಲ್ಲದಿರುವುದು ಅದೃಷ್ಟ ಮಾತ್ರ. ತಂದೆಯೇ ನಿರ್ಮಾಪಕನಾಗಿದ್ದರೂ ಝೋವಾಳಿಗೆ ಬಾಲಿವುಡ್‌ನ‌ಲ್ಲಿ ತೀರಾ ಅಗತ್ಯವಿದ್ದ ಲಿಫ್ಟ್ ಸಿಗದಿರುವುದಕ್ಕೆ ಅವಳ ದುರದೃಷ್ಟವೇ ಕಾರಣ. 

Advertisement

ಝೋವಾ ಬಾಲಿವುಡ್‌ಗೆ ಆರಂಗೇಟ್ರಂ ಮಾಡಿದ್ದು ಶಾರೂಖ್‌ ನಿರ್ಮಿಸಿದ ಅಲ್ವೇಸ್‌ ಕಭಿ ಕಭಿ ಎಂಬ ಚಿತ್ರದಲ್ಲಿ. ಅಲಿ ಫ‌ಜಲ್‌, ಜಿಸೆಲಿ ಮೊಂಟೇರಿಯೊ , ಸತ್ಯಚಿತ್‌ ದುಬೆ ಎಂದೆಲ್ಲ ಪೂರ್ತಿಯಾಗಿ ಹೊಸಬರೇ ತುಂಬಿದ್ದ ಈ ಚಿತ್ರ ಹೇಳಹೆಸರಿಲ್ಲದಂತೆ ನೆಲಕಚ್ಚಿದ್ದೇ ಝೋವಾಳ ಹಿನ್ನಡೆಗೆ ಕಾರಣವಾಯಿತು. ಅನಂತರ ಕುನ್ಹಾಲ್‌ ಖೇಮು ಎದುರು ಭಾಗ್‌ ಜಾನಿಯಲ್ಲಿ ನಟಿಸಿದರೂ ಇಬ್ಬರು ನಾಯಕಿಯರಿದ್ದ ಈ ಚಿತ್ರದಿಂದ ಝೋವಾಳಿಗೆ ಹೇಳಿಕೊಳ್ಳುವಂತಹ ಪ್ರಯೋಜನ ಆಗಲಿಲ್ಲ. ಈ ನಡುವೆ ಶ್ಯಾಮ್‌ ಬೆನಗಲ್‌ ಚಿತ್ರಕ್ಕೆ ಆಯ್ಕೆಯಾಗಿದ್ದಾಳೆ ಎಂಬ ಸುದ್ದಿ ತೇಲಿಬಂದಷ್ಟೇ ವೇಗದಲ್ಲಿ ಮಾಯವಾಯಿತು. 

ಹೀಗಾಗಿ, ಝೋವಾ ಅನಿವಾರ್ಯವಾಗಿ ಬೇರೆ ಕೆಲಸ ಹುಡುಕಬೇಕಾಯಿತು. ಸ್ವಲ್ಪ ಕಾಲ ಮೋಡೆಲಿಂಗ್‌ ಮಾಡಿದ ಝೋವಾ ಬಳಿಕ ರಂಗಭೂಮಿಯತ್ತ ನಡೆದಳು. ಇಲ್ಲಿಂದ ಅವಳ ಎರಡನೇ ಇನ್ನಿಂಗ್ಸ್‌ ಶುರುವಾಯಿತು. ನಾಟಕಗಳಲ್ಲಿ ನಟಿಸುತ್ತಾ ತನ್ನೊಳಗಿರುವ ನಟಿಯನ್ನು ಮಾಗಿಸುತ್ತಾ ಬಂದ ಝೋವಾಳಿಗೆ ಕಡೆಗೆ ಗುಲ್ಜಾರ್‌ ನಾಟಕ ತಂಡವನ್ನು ಸೇರುವ ಅವಕಾಶ ಸಿಕ್ಕಿತು. ಅದನ್ನು ಸರಿಯಾಗಿ ಉಪಯೋಗಿಸಿಕೊಂಡ ಝೋವಾ ಈಗ ಮುಂಬಯಿಯ ರಂಗಭೂಮಿ ವಲಯದಲ್ಲಿ ಪ್ರಸಿದ್ಧ ನಟಿ. ಎಲ್ಲರೂ ರಂಗಭೂಮಿಯಿಂದ ಸಿನೆಮಾಕ್ಕೆ ಬಂದು ಪ್ರಸಿದ್ಧರಾದರೆ ಝೋವಾಳದ್ದು ಮಾತ್ರ ಉಲ್ಟಾ ಕತೆ. ಹಾಗೆಂದು ಝೋವಾ ಸಿನೆಮಾ ಕನಸಿಗೆ ಎಳ್ಳುನೀರು ಬಿಟ್ಟಿಲ್ಲ. ನನ್ನ ಅಂತಿಮ ಗಮ್ಯ ಏನಿದ್ದರೂ ಸಿನೆಮಾ, ಅದರಲ್ಲೂ ಬಾಲಿವುಡ್‌. ಆದರೆ ಹಿಂದಿನಂತೆ ಸ್ಕ್ರಿಪ್ಟ್ ನೋಡದೆ ಸಿಕ್ಕಿದ ಪಾತ್ರಗಳಲ್ಲಿ ನಟಿಸುವ ತಪ್ಪು ಮಾಡುವುದಿಲ್ಲ ಎನ್ನುತ್ತಾಳೆ ಝೋವಾ. ಅದಕ್ಕೆ ತಕ್ಕಂತೆ ಕೆಲವು ಖ್ಯಾತ ನಿರ್ದೇಶಕರ ಸ್ಕ್ರಿಪ್ಟ್ಗಳನ್ನು ಅವಳು ಓದುತ್ತಿದ್ದಾಳಂತೆ. ಇನ್ನು ಒಂದೆರಡು ವರ್ಷದಲ್ಲಿ ಬಾಲಿವುಡ್‌ಗೆ ರೀಎಂಟ್ರಿ ಕೊಡುವುದು ಖಚಿತ ಎನ್ನುತ್ತಿದ್ದಾಳೆ ಝೋವಾ.

Advertisement

Udayavani is now on Telegram. Click here to join our channel and stay updated with the latest news.

Next