ಹರಾರೆ: ಮೊಸಳೆ ಎಂದರೆ ಸಾಕು ಜನ ಹೌಹಾರುತ್ತಾರೆ. ಅಂಥದ್ದರಲ್ಲಿ ಮೊಸಳೆ ಬಾಯಿಗೆ ಗೆಳತಿ ಸಿಲುಕಿದ್ದಾಳೆ ಎಂದರೆ? ದಿಕ್ಕೇ ತೋಚದಿರಬಹುದು. ಆದರೆ ಆಕೆ ಹಾಗಲ್ಲ, ಧೈರ್ಯಗೆಡದೆ ಮೊಸಳೆಗೇ ಬಡಿದು, ಗೆಳತಿಯನ್ನು ರಕ್ಷಿಸಿ ದಿಟ್ಟತನ ಮೆರೆದಿದ್ದಾಳೆ.
ಈ ಘಟನೆ ನಡೆದಿರುವುದು ಜಿಂಬಾಬ್ವೆಯ ಸಿಂಡ್ರೆಲಾ ಎಂಬ ಗ್ರಾಮದಲ್ಲಿ. ಲಾಟೋತಾ ಮುವಾನಿ (9) ಮತ್ತು ಆಕೆಯ ಗೆಳತಿಯರಾದ ರೆಬೆಕ್ಕಾ ಮುಂಕೋಬ್ವೆ (11) ಮತ್ತು ಇತರರು, ಈಜಲು ತೆರಳಿದ್ದರು. ಸ್ವಲ್ಪ ಹೊತ್ತಿಗೆ ಲಾಟೋತಾ ಮುವಾನಿ ಭಾರೀ ಬೊಬ್ಬೆ ಹಾಕಿದ್ದು, ಆಕೆಯನ್ನು ಕಪ್ಪಾದ ಆಕೃತಿಯೊಂದು ನೀರಿನೊಳಕ್ಕೆ ಎಳೆಯುತ್ತಿತ್ತು.
ಕೂಡಲೇ ರೆಬೆಕ್ಕಾ, ಅದು ಮೊಸಳೆ ಎಂದರಿತು ನೀರಿನಲ್ಲೇ ಮುಂದೆ ಹೋಗಿ ಮೊಸಳೆ ಮೇಲೆ ಹತ್ತಿದ್ದೂ ಅಲ್ಲದೆ ಅದರ ಕಣ್ಣಿಗೆ ಹೊಡೆದಿದ್ದಾಳೆ. ಮೊಸಳೆ ಗೆಳತಿಯನ್ನು ಬಿಡುವವರೆಗೂ ಆಕೆ ಕಣ್ಣಿನ ಭಾಗಕ್ಕೆ ಹೊಡೆದಿದ್ದು, ಇದರಿಂದ ದಿಕ್ಕೇ ತೋಚದ ಮೊಸಳೆ ಬಿಟ್ಟು ಹೋಗಿದೆ.
ಮೊಸಳೆ ಆಕೆಯನ್ನು ಬಿಟ್ಟಕೂಡಲೇ ರೆಬೆಕ್ಕಾ ಆಕೆಯನ್ನು ದಡಕ್ಕೆ ಕರೆತಂದಿದ್ದಾಳೆ. ಲಾಟೋತ ಕಾಲಿಗೆ ಮತ್ತು ಕೈಗೆ ಮೊಸಳೆ ಕಚ್ಚಿದ್ದರಿಂದ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ನೇಹಿತೆಯರಲ್ಲಿ ನಾನೇ ದೊಡ್ಡವಳಾಗಿದ್ದರಿಂದ ಲಾಟೋತಳ ರಕ್ಷಣೆಗೆ ನಾನೇ ಹೋಗಿದ್ದೆ ಎಂದು ರೆಬೆಕ್ಕಾ ಹೇಳಿಕೊಂಡಿದ್ದಾಳೆ. ಲಾಟೋತಳನ್ನು ರಕ್ಷಿಸಿದ್ದಕ್ಕಾಗಿ ಲಾಟೋತ ತಂದೆ ಆಕೆಗೆ ಧನ್ಯವಾದ ಹೇಳಿದ್ದಾರಂತೆ.