ಟೌನ್ಸ್ ವಿಲ್ಲೆ: ಕಾಂಗರೂ ನೆಲದಲ್ಲಿ ಇದೇ ಮೊದಲ ಬಾರಿಗೆ ಏಕದಿನ ಪಂದ್ಯವೊಂದನ್ನು ಗೆದ್ದ ಜಿಂಬಾಬ್ವೆ ತಂಡ ದಾಖಲೆ ಬರೆದಿದೆ. ಸರಣಿ ಸೋತರೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೇವಲ 141 ರನ್ ಗಳಿಗೆ ಆಲೌಟ್ ಮಾಡಿದ ಜಿಂಬಾಬ್ವೆ ಸಂಚಲನ ಮೂಡಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಜಿಂಬಾಬ್ವೆಯ ಘಾತಕ ಬೌಲಿಂಗ್ ದಾಳಿಗೆ ಶರಣಾದ ಆಸೀಸ್ 31 ಓವರ್ ಗಳಲ್ಲಿ 141 ರನ್ ಗೆ ಆಲೌಟಾದರೆ, ಜಿಂಬಾಬ್ವೆ ತಂಡ ಏಳು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಪರ ವಾರ್ನರ್ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಬ್ಯಾಟಿಂಗ್ ನೆರವು ನೀಡಲಿಲ್ಲ. ತಂಡದ ಒಟ್ಟು ಮೊತ್ತದ ಶೇ.67ರಷ್ಟು ರನ್ ವಾರ್ನರ್ ಒಬ್ಬರೇ ಗಳಿಸಿದರು. 96 ಎಸೆತಗಳಲ್ಲಿ 94 ರನ್ ಗಳಿಸಿದ ವಾರ್ನರ್ ಶತಕ ವಂಚಿತರಾದರು. ಆಸೀಸ್ ಪರ ಎರಡಂಕಿ ಮೊತ್ತ ದಾಖಲಿಸಿದ್ದು ಗ್ಲೆನ್ ಮ್ಯಾಕ್ಸವೆಲ್ ಒಬ್ಬರೇ (19 ರನ್).
ಇದನ್ನೂ ಓದಿ:ಪ್ರಧಾನಿ ಮೋದಿ ರೋಡ್ ಶೋ: ಸನಿಹದಲ್ಲೇ ವೀಕ್ಷಿಸಿ ಜೈಕಾರ ಹಾಕಿದ ಜನತೆ
ಜಿಂಬಾಬ್ವೆ ಪರ ಘಾತಕ ದಾಳಿ ಸಂಘಟಿಸಿದ ರಿಯಾನ್ ಬುರ್ಲ್ ಕೇವಲ ಹತ್ತು ರನ್ ನೀಡಿ ಐದು ವಿಕೆಟ್ ಪಡೆದರು. ಉಳಿದಂತೆ ಇವಾನ್ಸ್ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡಕ್ಕೆ ನಾಯಕ ರೆಗಿಸ್ ಚಕಬಾವ 37 ರನ್ ಮತ್ತು ಮರುಮನಿ 35 ರನ್ ನೆರವು ನೀಡಿದರು. 39 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡ ಜಿಂಬಾಬ್ವೆ ಜಯ ಸಾಧಿಸಿತು. ಆಸೀಸ್ ಪರ ಹೇಜಲ್ ವುಡ್ ಮೂರು ವಿಕೆಟ್ ಪಡೆದರು.