ಹರಾರೆ : ಇಲ್ಲಿ ಸೋಮವಾರ ನಡೆದ ICC ಕ್ರಿಕೆಟ್ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡ ಯುಎಸ್ ಎ ತಂಡದ ಎದುರು ಏಕದಿನ ಕ್ರಿಕೆಟ್ ನಲ್ಲಿ ತನ್ನ ಅತ್ಯಧಿಕ ಸ್ಕೋರ್ ದಾಖಲಿಸಿದೆ.
ಯುಎಸ್ ಎ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜಿಂಬಾಬ್ವೆ ನಾಯಕ ಸೀನ್ ವಿಲಿಯಮ್ಸ್ ಅಮೋಘ ಆಟದ ನೆರವಿನಿಂದ ಬೃಹತ್ ಸ್ಕೋರ್ ಕಲೆ ಹಾಕಲು ಸಾಧ್ಯವಾಯಿತು. 50 ಓವರ್ ಗಳಲ್ಲಿ ಯುಎಸ್ ಎ ಬೌಲರ್ ಗಳನ್ನು ದಂಡಿಸಿದ ತಂಡ 6 ವಿಕೆಟ್ ನಷ್ಟಕ್ಕೆ 408 ರನ್ ಗಳಿಸಿತು. ಇದು ಜಿಂಬಾಬ್ವೆ ತಂಡದ ಅತ್ಯುತ್ತಮ ಮೊತ್ತವಾಗಿದೆ. 2009 ರಲ್ಲಿ ಜನವರಿ 29 ರಂದು ಕೀನ್ಯಾ ವಿರುದ್ಧ ದಾಖಲಿಸಿದ್ದ 351/7 ಜಿಂಬಾಬ್ವೆಯ ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿತ್ತು.
ಆರಂಭಿಕ ಆಟಗಾರ ಜಾಯ್ಲಾರ್ಡ್ ಗುಂಬಿ 78 ರನ್, ಇನ್ನೋಸೆಂಟ್ ಕೈಯಾ 32 ರನ್ ಗಳಿಸಿ ಔಟಾದರು. ಒನ್ ಡೌನ್ ಆಟಗಾರನಾಗಿ ಬಂದು ಸ್ಪೋಟಕ ಆಟವಾಡಿದ ನಾಯಕ ಸೀನ್ ವಿಲಿಯಮ್ಸ್ 101 ಎಸೆತಗಳಲ್ಲಿ ಬರೋಬ್ಬರಿ 174 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ಅವರ ಇನ್ನಿಂಗ್ಸ್ ನಲ್ಲಿ 21 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಗಳು ಒಳಗೊಂಡಿದ್ದವು.
ಸಿಕಂದರ್ ರಜಾ 48 ರನ್ ಗಳಿಸಿ ಔಟಾದರು. ಸ್ಪೋಟಕ ಆಟವಾಡಿದ ರಿಯಾನ್ ಬರ್ಲ್ 17 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ತಡಿವಾನಾಶೆ ಮರುಮಣಿನೋಟ್ ಔಟಾಗದೆ 18 ರನ್ ಗಳಿಸಿದರು.
ಯುಎಸ್ ಬೌಲರ್ ಅಭಿಷೇಕ್ ಪರಾಡ್ಕರ್ 3 ವಿಕೆಟ್ ಪಡೆದರು. ಜಸ್ದೀಪ್ ಸಿಂಗ್ 2, ನೋಸ್ತುಶ್ ಕೆಂಜಿಗೆ 1 ವಿಕೆಟ್ ಪಡೆದರು.