Advertisement

18ಕೆ ಜಿಪಂ ಅಧ್ಯಕ್ಷ ಕೇಶವರೆಡಿ ರಾಜೀನಾಮೆ?

02:59 PM Jan 15, 2018 | Team Udayavani |

ಚಿಕ್ಕಬಳ್ಳಾಪುರ: ಆಡಳಿತರೂಢ ಕಾಂಗ್ರೆಸ್‌ ಸದಸ್ಯರಿಂದ ಬಂಡಾಯ ಎದುರಿಸುತ್ತಿರುವ ಜಿಪಂ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ ರಾಜೀನಾಮೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಸಂಕ್ರಾಂತಿ ಹಬ್ಬ ಕಳೆದ ನಂತರ ಜ.16 ಅಥವಾ 18ಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆಂದು ಉನ್ನತ ಮೂಲಗಳ ತಿಳಿಸಿವೆ.

Advertisement

ಜಿಪಂ ಅಧ್ಯಕ್ಷರಾದ ಬಳಿಕ ಕೇಶವರೆಡ್ಡಿ ಸ್ವಪಕ್ಷೀಯ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಜಿಪಂ ಅಧಿಕಾರಿಗಳನ್ನು ಏನೇ ಕೇಳಿದರೂ ಅಧ್ಯಕ್ಷರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಕ್ಷೇತ್ರದಲ್ಲಿನ ಜನರ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಸ್ವಂದನೆ ಸಿಗುತ್ತಿಲ್ಲ. ಜಿಪಂ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಏನೇ ಕೇಳಿದರೂ ನೋಡೋಣ, ಮಾಡೋಣ ಎನ್ನುತ್ತಾರೆ. ಕಾಲಕಾಲಕ್ಕೆ ಸಾಮಾನ್ಯ ಸಭೆ ನಡೆಸುತ್ತಿಲ್ಲ. ಸ್ವ ಪಕ್ಷೀಯ ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆ ಸ್ವಂದಿಸದೇ ವಿರೋಧ ಪಕ್ಷದ ಸದಸ್ಯರಿಗೆ ಹೆಚ್ಚಿನ ಸಹಕಾರ, ಅನುದಾನ ಹಂಚಿಕೆ ಮಾಡುತ್ತಿದ್ದಾರೆಂದು ಆರೋಪಿ ಕಾಂಗ್ರೆಸ್‌ನ ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಚಿಂತಾಮಣಿ ಕ್ಷೇತ್ರದ 14 ಮಂದಿ ಸದಸ್ಯರು ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಹಾಗೂ ಚಿಂತಾಮಣಿ ಮಾಜಿ ಶಾಸಕ ಡಾ. ಸುಧಾಕರ್‌ ಮುಂದಾಳತ್ವದಲ್ಲಿ ಜಿಪಂ ಅಧ್ಯಕ್ಷ ಸ್ಥಾನದಿಂದ ಕೇಶವರೆಡ್ಡಿರನ್ನು ಬದಲಿಸುವಂತೆ ಬಂಡಾಯದ ಬಾವುಟ ಹಾರಿಸಿ ಹಲವು ಸಾಮಾನ್ಯ ಸಭೆಗಳನ್ನು ಸತತವಾಗಿ ಬಹಿಷ್ಕರಿಸಿದ್ದರು. 

ರಾಜೀನಾಮೆಗೆ ಸೂಚಿಸಿದ್ದರಂತೆ: ಜಿಪಂ ಅಧ್ಯಕ್ಷರ ಹಾಗೂ ಸದಸ್ಯರ ನಡುವಿನ ಭಿನ್ನಮತದ ವಿವಾದ ಪಕ್ಷದ ಹೈಕಮಾಂಡ್‌ವರೆಗೂ ಹೋಗಿ ಹಲವು ಸುತ್ತಿನ ಸಂಧಾನ ಸಭೆ ನಡೆಸಲಾಗಿತ್ತು. ಅತೃಪ್ತ ಸದಸ್ಯರು ಹೇಳುವ ಪ್ರಕಾರ ನವೆಂಬರ್‌ ಅಥವಾ ಡಿಸೆಂಬರ್‌ ಅಂತ್ಯಕ್ಕೆ ಕೇಶವರೆಡ್ಡಿಗೆ ರಾಜೀನಾಮೆ ನೀಡಲು ಪಕ್ಷದ ರಾಜ್ಯ ನಾಯಕರು ಸೂಚಿಸಿದ್ದರು. ಆದರೆ ರಾಜೀನಾಮೆ ಕೊಡದೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆಂದು ಆರೋಪಿಸಿ ನಂತರ ನಡೆದ ಎರಡು, ಮೂರು ಸಾಮಾನ್ಯ ಸಭೆಗಳನ್ನು ಅತೃಪ್ತ ಕೈ ಸದಸ್ಯರು ಬಹಿಷ್ಕರಿಸಿದ್ದರು.

ಅಲ್ಲದೇ ಕಳೆದ ಡಿ.7 ರಂದು ಜಿಪಂ ಅಧ್ಯಕ್ಷ ಕೇಶವರೆಡ್ಡಿ ಕರೆದಿದ್ದ ಸಮಾನ್ಯ ಸಭೆಯನ್ನು ಅತೃಪ್ತ ಕೈ ಸದಸ್ಯರು ಬಹಿಷ್ಕರಿಸುವ ಮೂಲಕ ಕೇಶವರೆಡ್ಡಿ ತಲೆದಂಡಕ್ಕೆ ಪಟ್ಟು ಹಿಡಿದಿದ್ದರು. ಆದರೆ, ಇದೀಗ ಪಕ್ಷದ ಬಂಡಾಯ ಸದಸ್ಯರ
ಒತ್ತಡಕ್ಕೆ ಮಣಿದಿರುವ ಪಕ್ಷದ ಹೈಕಮಾಂಡ್‌ ಜನವರಿ ಮೊದಲ ವಾರದಲ್ಲಿ ರಾಜೀನಾಮೆ ನೀಡಲು ಕೇಶವರೆಡ್ಡಿಗೆ ಸೂಚಿಸಿತ್ತು ಎನ್ನಲಾಗಿದೆ. ಆದರೆ, ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಶಾಸಕ ಡಾ.ಕೆ.ಸುಧಾಕರ್‌ ಹಾಗು ಕೇಶವರೆಡ್ಡಿ ನಡೆಸಿದ ಯತ್ನ ವಿಫ‌ಲವಾಗಿರುವುದರಿಂದ ಕೇಶವರೆಡ್ಡಿ ರಾಜೀನಾಮೆಗೆ ಹೈಕಮಾಂಡ್‌ ಖಡಕ್‌ ಆಗಿ ಸೂಚಿಸಿರುವುದರಿಂದ ಜ.16 ಅಥವಾ 18 ರಂದು ಕೇಶವರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, 16 ರಂದು ಅಮಾವಾಸ್ಯೆ ಇರುವುದರಿಂದ 18 ರ ಗುರುವಾರ ರಾಜೀನಾಮೆ ನೀಡುವುದು ಖಚಿತ ಎನ್ನಲಾಗುತ್ತಿದೆ.

ಒಟ್ಟಾರೆ ಹಲವು ತಿಂಗಳ ನಂತರ ಜಿಪಂನಲ್ಲಿ ಆಡಳಿತರೂಢ ಸದಸ್ಯರ ಹಾಗೂ ಅಧ್ಯಕ್ಷರ ನಡುವೆ ಭುಗಿಲೆದಿದ್ದ ಭಿನ್ನಮತ ಇದೀಗ ಕೇಶವರೆಡ್ಡಿ ರಾಜೀನಾಮೆ ನೀಡುವ ಹಂತಕ್ಕೆ ಬಂದು ತಲುಪಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ. ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕೇಶವರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದರಿಂದ ಕಾಂಗ್ರೆಸ್‌ ವಲಯದಲ್ಲಿ ಸಂಚಲನ ಮೂಡಿಸಿದೆ.

Advertisement

ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಚಾರ ಖಚಿತಪಡಿಸಿಕೊಳ್ಳಲು ಶಾಸಕ ಸುಧಾಕರ್‌ ಹಾಗೂ ಜಿಪಂ ಅಧ್ಯಕ್ಷ ಕೇಶವರೆಡ್ಡಿರನ್ನು ಹಲವು ಬಾರಿ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಶಾಸಕರ ಮೊಬೈಲ್‌ ಸ್ವಿಚ್‌ಆಫ್ ಆಗಿತ್ತು ಮೇ 7ರಂದು ಅಧ್ಯಕರಾಗಿದ್ದ ಕೇಶವರೆಡಿ ಪಿ.ಎನ್‌.ಕೇಶವರೆಡ್ಡಿ ಕಳೆದ 2016ರ ಮೇ 7ರಂದು ಜಿಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು.

ಒಟ್ಟು 28 ಸದಸ್ಯ ಬಲ ಹೊಂದಿರುವ ಜಿಪಂನಲ್ಲಿ ಕಾಂಗ್ರೆಸ್‌ 21 ಸದಸ್ಯರನ್ನು ಹೊಂದಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ತಂದೆ ಪಿ.ಎನ್‌.ಕೇಶವರೆಡ್ಡಿರನ್ನು ರಾಜಕೀಯ ತಂತ್ರಗಾರಿಕೆ ನಡೆಸಿ ಅಧ್ಯಕ್ಷ ಗಾದಿಲ್ಲಿ ಕೂರಿಸುವಲ್ಲಿ ಶಾಸಕ ಡಾ.ಕೆ.ಸುಧಾಕರ್‌ ಸಫ‌ಲ ಕಂಡಿದ್ದರು. ಈ ಹಿಂದೆ ಒಮ್ಮೆ ತಂದೆಯ ರಾಜೀನಾಮೆಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡಿದ್ದ ಶಾಸಕ ಡಾ.ಕೆ.ಸುಧಾಕರ್‌ ಕಳೆದ ಜು.6 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಟ್ವಿಟರ್‌ ಮೂಲಕ ಪ್ರಕಟಿಸಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದರು. ಆಗ ಕಾಂಗ್ರೆಸ್‌ ನಾಯಕರ ದಂಡು ಸುಧಾಕರ್‌ ಮನೆಗೆ  ದೌಡಾಯಿಸಿ ಸಮಾಧಾನಪಡಿಸಿದ್ದರು.
 
10 ಸಭೆಗಳಲ್ಲಿ 8 ಸಭೆಗೆ ಕೊರಂ ಕೊರತೆ!
ಕೇಶವರೆಡ್ಡಿ ಅಧ್ಯಕ್ಷರಾದ ಬಳಿಕ ಒಟ್ಟು 20 ತಿಂಗಳಲ್ಲಿ ನಡೆಯಬೇಕಿದ್ದ 10 ಸಾಮಾನ್ಯ ಸಭೆಗಳ ಪೈಕಿ ಬರೀ 3
ಸಾಮಾನ್ಯ ಸಭೆಗಳು ಮಾತ್ರ ಸುಸೂತ್ರವಾಗಿ ನಡೆದರೆ ಬಹುಮತದ ಕೊರತೆ ಜೊತೆಗೆ ಕಾಂಗ್ರೆಸ್‌ ನಾಯಕರ ಒಳ ಜಗಳದಿಂದ ಜಿಪಂ ಅಧ್ಯಕ್ಷರು ಕರೆದಿದ್ದ ಜಿಪಂನ ಸಾಮಾನ್ಯ ಸಭೆಗಳಿಗೆ ಸ್ವಪಕ್ಷಿಯ ಸದಸ್ಯರ ಬಹಿಷ್ಕಾರದಿಂದ   ಬಾರಿ ಜಿಪಂ ಸಾಮಾನ್ಯ ಸಭೆಗಳನ್ನು ಮುಂದೂಡಬೇಕಾಯಿತು. ಆದರೆ, ಐದು ವರ್ಷ ಅಧಿಕಾರ ಪೂರೈಸುವುದಕ್ಕೂ ಮೊದಲೇ ಕೇಶವರೆಡ್ಡಿ ವಿರುದ್ಧ ಕಾಂಗ್ರೆಸ್‌ 14 ಮಂದಿ ಅತೃಪ್ತ ಸದಸ್ಯರು ಬಂಡಾಯ ಬಾವುಟ ಹಾರಿಸಿರುವುದರಿಂದ ಅನಿರ್ವಾಯವಾಗಿ ಕೇಶವರೆಡ್ಡಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ.

„ ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next