Advertisement

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

04:24 PM May 17, 2022 | Team Udayavani |

ಬೆಂಗಳೂರು: ರಾಜ್ಯದ ಜಿ.ಪಂ ಹಾಗೂ ತಾ.ಪಂ. ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಮೇ 23ಕ್ಕೆ ಮುಂದೂಡಿದೆ.

Advertisement

ಜಿ.ಪಂ, ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚನೆ ಮಾಡಿರುವುದರಿಂದ ಚುನಾವಣೆ ನಡೆಸಲು ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಮೆಮೋ ಸಲ್ಲಿಸಿತ್ತು.

ಅದರಂತೆ, ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಹಾಗೂ ನ್ಯಾ. ಎಂ.ಜಿ. ಉಮಾ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ಅರ್ಜಿಯು ವಿಚಾರಣೆಗೆ ನಿಗದಿಯಾಗಿತ್ತು.

ಅರ್ಜಿ ವಿಚಾರಣೆಗೆ ಬಂದಾಗ, ತುರ್ತು ವಿಚಾರಣೆ ನಡೆಸುವ ಅವಶ್ಯಕತೆ ಏನಿದೆ ಎಂದು ನ್ಯಾಯಪೀಠ, ಚುನಾವಣಾ ಆಯೋಗದ ಪರ ವಕೀಲರನ್ನು ಪ್ರಶ್ನಿಸಿತು.

ಅದಕ್ಕೆ ಚುನಾವಣಾ ಆಯೋಗದ ಪರ ಹಾಜರಾದ ಹಿರಿಯ ವಕೀಲ ಕೆ.ಎನ್‌. ಫ‌ಣೀಂದ್ರ, ನಗರ ಸ್ಥಳೀಯ ಸಂಸ್ಥೆಗಳಿಗೆ ತ್ವರಿತವಾಗಿ ಚುನಾವಣೆ ನಡೆಸಬೇಕು ಎಂದು ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಮೇ 11ರಂದು ಆದೇಶ ನೀಡಿದೆ ಎಂದರು.

Advertisement

ಇದನ್ನೂ ಓದಿ:ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ದೇಶದ ಸರ್ವೋಚ್ಛ ನ್ಯಾಯಾಲಯವೇ ನಿರ್ದೇಶನ ನೀಡಿರುವಾಗ, ಹೈಕೋರ್ಟ್‌ನಲ್ಲಿ ಮೆಮೋ ಸಲ್ಲಿಸುವ ಅವಶ್ಯಕತೆ ಏನಿದೆ ಎಂದು ಆಯೋಗದ ಪರ ವಕೀಲರನ್ನು ಪ್ರಶ್ನಿಸಿತು.

ಆಗ, ಜಿ.ಪಂ., ತಾ.ಪಂ ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಯ ಅಧಿಕಾರವನ್ನು ಸರ್ಕಾರ ಆಯೋಗದಿಂದ ವಾಪಸ್‌ ಪಡೆದಿದೆ. ಆ ಸಂಬಂಧದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.

ಹಾಗಾಗಿ, ಈ ವಿಚಾರವಾಗಿ ಹೈಕೋರ್ಟ್‌ನಿಂದ ಸೂಕ್ತ ನಿರ್ದೇಶನ ಬೇಕಿದೆ ಎಂದು ಆಯೋಗದ ವಕೀಲರು ಮನವರಿಕೆ ಮಾಡಿಕೊಟ್ಟರು.

ವಾದ ಆಲಿಸಿದ ನ್ಯಾಯಪೀಠ, ಹಾಗಿದ್ದರೆ, ಅರ್ಜಿಯು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸುವ ಅವಶ್ಯಕತೆ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next