Advertisement

Health: ಝೀಕಾ: ಸದ್ಯ ಭಯ ಬೇಡ- ರ್‍ಯಾಂಡಮ್‌ ಪರೀಕ್ಷೆ: ಸೊಳ್ಳೆಯಲ್ಲಿ ಮಾತ್ರ ವೈರಸ್‌ ದೃಢ!

09:05 PM Nov 02, 2023 | Team Udayavani |

ಬೆಂಗಳೂರು: ರಾಜ್ಯದ ಎಲ್ಲಿಯೂ ಮನುಷ್ಯರಲ್ಲಿ ಝೀಕಾ ವೈರಸ್‌ ಸೋಂಕು ದೃಢಪಟ್ಟಿಲ್ಲ. ಆದರೆ ಸೊಳ್ಳೆಗಳಲ್ಲಿ ಇದು ವರದಿಯಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿ ಸೊಳ್ಳೆಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಝೀಕಾ ವೈರಸ್‌ ಇರುವುದು ದೃಢಪಟ್ಟಿದೆ. ಹೀಗಾಗಿ ತಲಕಾಯಲಬೆಟ್ಟ ಗ್ರಾಮ ಸಹಿತ ಸುತ್ತಮುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, 40 ಮಂದಿ ಮೇಲೆ ನಿಗಾ ಇರಿಸಲಾಗಿದೆ. ಲಕ್ಷಣಗಳಿರುವವರ ಮಾದರಿ ಪರೀಕ್ಷೆ ಮಾಡಲಾಗಿದ್ದು, ಇನ್ನು 3 ದಿನಗಳಲ್ಲಿ ಸ್ಪಷ್ಟವಾದ ವರದಿ ಸಿಗಲಿದೆ. ಇಲಾಖೆಯಿಂದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಇದೇ ವೇಳೆ ಗುರುವಾರ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ಮಾರ್ಗಸೂಚಿ ಹೊರಡಿಸಿದೆ.

ಸೊಳ್ಳೆ ಮಾದರಿ ಪರೀಕ್ಷೆ!
ಸರ್ವೇಕ್ಷಣ ಕಣ್ಗಾವಲು ಪಡೆಯು ಡೆಂಗ್ಯೂ, ಮಲೇರಿಯಾ ಮತ್ತಿತರ ರೋಗಗಳಿಗೆ ಸಂಬಂಧಿಸಿ ಕಾಲಕಾಲಕ್ಕೆ ಸೊಳ್ಳೆಗಳನ್ನು ಪರೀಕ್ಷೆಗೆ ಒಳಪಡಿಸುತ್ತದೆ. ರಾಜ್ಯದ 68 ಕಡೆಗಳಿಂದ ಸಂಗ್ರಹಿಸಲಾದ ಸೊಳ್ಳೆಗಳ ಮಾದರಿಯನ್ನು ಪುಣೆ ಲ್ಯಾಬ್‌ಗ ಕಳುಹಿಸಲಾಗಿತ್ತು. ಈ ವೇಳೆ ಚಿಕ್ಕಬಳ್ಳಾಪುರದ ಸೊಳ್ಳೆಯಲ್ಲಿ ಝೀಕಾ ವೈರಸ್‌ ಇರುವುದು ದೃಢವಾಗಿದೆ.

ಮಾರ್ಗಸೂಚಿಯಲ್ಲಿ ಏನಿದೆ?
– ವೈರಸ್‌ ಪತ್ತೆಯಾದ ಪ್ರದೇಶದಲ್ಲಿ ಗರ್ಭಿಣಿಯರನ್ನು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು.
– ವೈರಸ್‌ ದೃಢಪಟ್ಟ ವ್ಯಕ್ತಿಯ ಮನೆ ಸದಸ್ಯರ ಮಾದರಿಯನ್ನು ಕೂಡ ಪರೀಕ್ಷೆಗೆ ಒಳಪಡಿಸಬೇಕು.
– ವೈರಸ್‌ ಪತ್ತೆಯಾದ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಂಟೋನ್ಮೆಂಟ್‌ ವಲಯ ಆಗಿ ಘೋಷಿಸಬೇಕು.
– ಪ್ರತಿನಿತ್ಯ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರ ಮೂಲಕ ಲಾರ್ವಾ ಹಾಗೂ ಫೀವರ್‌ ಸರ್ವೇ ಮಾಡಬೇಕು.
– ಒಳಾಂಗಣ ಹಾಗೂ ಹೊರಾಂಗಣ ಪ್ರದೇಶವನ್ನು ಕಡ್ಡಾಯವಾಗಿ ಸ್ಯಾನಿಟೈಸ್‌ಗೊಳಿಸಬೇಕು.
– ವೈರಸ್‌ಗೆ ಕಾರಣವಾಗುವ ಸೊಳ್ಳೆ ಉತ್ಪಾದನ ಕೇಂದ್ರಗಳನ್ನು ಗುರುತಿಸಿ, ನಾಶ ಮಾಡಬೇಕು

ಗರ್ಭಿಣಿಯರು ಎಚ್ಚರಿಕೆ ವಹಿಸಿ!
ನಿಫಾ ಗಂಭೀರ ವೈರಾಣುವಾಗಿದೆ. ಝೀಕಾ ಮನುಷ್ಯರಿಗೆ ಅಷ್ಟು ಕಾಡುವುದಿಲ್ಲ. ಆದರೆ ಗರ್ಭಿಣಿಯರಿಗೆ ಝೀಕಾ ವೈರಸ್‌ ಮಾರಕ. ಸೌಮ್ಯ ಲಕ್ಷಣಗಳಿಂದ ಪ್ರಾರಂಭವಾಗುವ ಜ್ವರವು ಜೀವ ತೆಗೆಯುವ ರೋಗವಾಗಿ ಬದಲಾಗುತ್ತದೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ವೈರಸ್‌ ವರದಿಯಾಗಿರುವ ಪ್ರದೇಶದ ಗರ್ಭಿಣಿಯರ ರಕ್ತದ ಮಾದರಿ, ಮೂತ್ರವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜತೆಗೆ ತಜ್ಞ ವೈದ್ಯರ ಸಹಾಯದಿಂದ ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಅಲ್ಟ್ರಾ ಸೌಂಡ್‌ ಸ್ಕ್ಯಾನ್‌ ಮೂಲಕ ತಪಾಸಣೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next