ಈ ಶಾಪ್‌ಗೆ ಬಂದು, ಕಲ್ಲಂಗಡಿ ಜ್ಯೂಸ್ ಕೇಳಿದರೆ, ಪ್ಲಾಸ್ಟಿಕ್ ಕಪ್‌ನಲ್ಲಿ ಹಣ್ಣಿನ ರಸ ನೀಡುವುದಿಲ್ಲ. ಬದಲಿಗೆ, ಇಡೀ ಕಲ್ಲಂಗಡಿಯೇ ಕಪ್ ಆಗಿ ಗ್ರಾಹಕರ ಕೈಯಲ್ಲಿರುತ್ತದೆ. ಕಲ್ಲಂಗಡಿಯ ತಿರುಳನ್ನೇ ಕಪ್ ಮಾಡಿ, ಅದರಲ್ಲಿ ಹಣ್ಣಿನ ರಸವನ್ನು ಸರ್ವ್ ಮಾಡುವ ಶಾಪ್ ಇದು. ಇನ್ನು ಐಸ್‌ಕ್ರೀಮ್ ಆರ್ಡರ್ ಮಾಡಿದರೆ, ತೆಂಗಿನ ಚಿಪ್‌ನಲ್ಲಿ ತಂಪನೆಯ ಐಸ್‌ಕ್ರೀಮ್ ಅನ್ನು ಕೈಗಿಡುವ ಕೆಫೆ ಇದು.
ಇದೇ “ಈಟ್ ರಾಜಾ’ ಜ್ಯೂಸ್ ಕೆಪೆಯ ಸ್ಪೆಷಾಲಿಟಿ. ಸಾಮಾನ್ಯವಾಗಿ ಜ್ಯೂಸ್ ಅಂಗಡಿಗೆ ಹೋದರೆ, ಪ್ಲಾಸ್ಟಿಕ್ ಕಪ್‌ನಲ್ಲಿ ಹಣ್ಣಿನ ರಸ ಹಾಕಿಕೊಡುತ್ತಾರೆ. ಅದನ್ನು ಹೀರಲು ಬಳಸುವ ಸ್ಟ್ರಾ ಕೂಡ ಪ್ಲಾಸ್ಟಿಕ್‌ನದ್ದೇ ಆಗಿರುತ್ತದೆ. ಆದರೆ, ಮಲ್ಲೇಶ್ವರಂನ ಈ ಕೆಫೆಯಲ್ಲಿ ಪ್ಲಾಸ್ಟಿಕ್ ಎಂಬ ಭೂತಕ್ಕೆ ಪ್ರವೇಶವೇ ಇಲ್ಲ. “ಶೂನ್ಯ ತ್ಯಾಜ್ಯ ಜ್ಯೂಸ್ ಅಂಗಡಿ’ ಅಂತಲೇ ಫೇಮಸ್ಸಾಗಿರುವ ಇಲ್ಲಿ, ಯಾವ ಪದಾರ್ಥವೂ ವ್ಯರ್ಥವಾಗುವುದಿಲ್ಲ.
ಆರ್‌ಜೆ ಆಗಿದ್ದ ರಾಜಾ ಅವರು ತಮ್ಮ ತಂದೆಯ ಜ್ಯೂಸ್ ಅಂಗಡಿಗೆ ನವನವೀನ ಟಚ್ ತಂದುಕೊಟ್ಟ ಬಗೆಯಿದು. ಸುಮಾರು 2 ವರ್ಷದಿಂದ ಇಲ್ಲಿ ಪ್ಲಾಸ್ಟಿಕ್ ಬಳಕೆಯಾಗಿಲ್ಲ. ಕಲ್ಲಂಗಡಿ ತಿರುಳಿನ ಕಪ್, ಬಿದಿರಿನ ಸ್ಟ್ರಾ, ಭತ್ತದ ಸಸಿಯ ಸ್ಟ್ರಾ, ಹಾಳೆತಟ್ಟೆ ಮತ್ತು ತೆಂಗಿನಚಿಪ್ಪಿನಿಂದ ತಯಾರಿಸಿದ ಬಟ್ಟಲನ್ನು ಇಲ್ಲಿ ಉಪಯೋಗಿಸುತ್ತಾರೆ. ಈ ಜ್ಯೂಸ್ ಕೆಫೆಯ ವಿಶೇಷತೆ ಇಷ್ಟಕ್ಕೇ ಮುಗಿಯುವುದಿಲ್ಲ. ಇಲ್ಲಿನ ಯಾವ ಪದಾರ್ಥಕ್ಕೂ ಕೆಮಿಕಲ್ ಬಳಕೆಯಾಗುವುದಿಲ್ಲ.
ಐಸ್‌ಕ್ರೀಮ್ ಅನ್ನೂ ಇಲ್ಲಿಯೇ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಹಣ್ಣಿನ ಅಂಗಡಿಯಲ್ಲಿ, ದಿನದ ಅಂತ್ಯದಲ್ಲಿ ಡ್ರಮ್‌ಗಟ್ಟಲೆ ಕಸ ಉತ್ಪಾದನೆಯಾಗುತ್ತದೆ. ಯಾವುದೇ ರೀತಿಯ ಕಸ ಉತ್ಪಾದನೆ ಆಗದಂತೆ, ಜ್ಯೂಸ್ ಅಂಗಡಿ ನಿರ್ವಹಿಸುತ್ತಾರೆ ರಾಜಾ ಅವರು. ಕಾಲೇಜಿನ ದಿನಗಳಲ್ಲೇ ಪ್ಲಾಸ್ಟಿಕ್ ವಿರೋಧಿಯಾಗಿದ್ದ ಇವರು, ಇಲ್ಲಿಗೆ ಬರುವ ಪ್ರತಿ ಗ್ರಾಹಕರಿಗೂ ಪರಿಸರ ಜಾಗೃತಿಯ ಸಲಹೆ ನೀಡುತ್ತಾರೆ.
ಆರಂಭದಲ್ಲಿ ಈ ವಿಶಿಷ್ಟ ನೀತಿಗಳನ್ನು ಅಳವಡಿಸಿದಾಗ, ಕೆಲವರು ವ್ಯಂಗ್ಯವಾಡಿದರಂತೆ. ಮತ್ತೆ ಕೆಲವರು, ಸ್ಟ್ರಾ ಇಲ್ಲದ ಕಾರಣಕ್ಕಾಗಿ ವಾಪಸು ಹೋಗಿದ್ದೂ ಉಂಟು. ಆದರೆ, ಪ್ಲಾಸ್ಟಿಕ್ ಮುಕ್ತ ಅಂಗಡಿಯ ಅವರ ನೀತಿಗೆ, ಇಂದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಕ್ಕಾ ದೇಸೀ ಶೈಲಿಯಲ್ಲಿ ತಯಾರಾಗುವ ಜ್ಯೂಸ್‌ಗೂ ಜಾಸ್ತಿ ಬೆಲೆ ನಿಗದಿ ಆಗಿಲ್ಲ. ಕೇವಲ 20 ರೂ.ನಿಂದ 60 ರೂ.ವರೆಗೂ ಇಲ್ಲಿ ಹಣ್ಣಿನ ರಸ ಸಿಗುತ್ತದೆ.
ನನ್ನ ಅಂಗಡಿಯಲ್ಲಿ ನಾನು ಕೇವಲ ಜ್ಯೂಸ್ ಅನ್ನು ಮಾರುತ್ತಿಲ್ಲ. ಇಲ್ಲಿಗೆ ಬಂದವರಿಗೆ ಪರಿಸರ ಪಾಠದ ಅನುಭವ ಸಿಗುತ್ತದೆ.
-ರಾಜಾ
ವಿಳಾಸ: ಈಟ್ ರಾಜಾ, 14ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ
* ರವಿಕುಮಾರ ಮಠಪತಿ