ವಿಧಾನಸಭೆ: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಜೀನಾಮೆ ಸಲ್ಲಿಸಲು ಬಂದ 10 ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂಬ ಬಗ್ಗೆ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಪ್ರಸ್ತಾಪಿಸಿದ ವಿಚಾರದ ಬಗ್ಗೆ ಸದನದಲ್ಲಿ ತೀವ್ರ ಚರ್ಚೆ ನಡೆಯಿತು.
ರಾಜ್ಯದಲ್ಲಿ ಗೃಹ ಇಲಾಖೆ ವತಿಯಿಂದ ಶಿಷ್ಟಾಚಾರ ಪಾಲನೆ ಬಗ್ಗೆ ಸ್ಪಷ್ಟತೆ ಬೇಕು. ಮುಂಬೈನಿಂದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದ 10 ಅತೃಪ್ತ ಶಾಸಕರು ವಿಧಾನಸೌಧಕ್ಕೆ ಬರಲು ಹಾಗೂ ಬಳಿಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಹಿಂದಿರುಗುವಾಗ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದು ಯಾರು ಹಾಗೂ ಯಾವ ಕಾರಣಕ್ಕೆ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ನೀಡಿದ ಉತ್ತರ ಸ್ಪಷ್ಟವಾಗಿಲ್ಲ. ಕಾರಣ ಸ್ಪೀಕರ್ ರಮೇಶ್ ಕುಮಾರ್, ಶಾಸಕರಿಗೆ ಜೀರೋ ಟ್ರಾಫಿಕ್ ನೀಡಲಾಗಿತ್ತೇ? ಆದೇಶ ನೀಡಿದವರು ಯಾರು? ಎಂಬುದನ್ನಷ್ಟೇ ಹೇಳಿ ಎಂದು ಸೂಚಿಸಿದರು. ಇದಕ್ಕೆ ಎಂ.ಬಿ.ಪಾಟೀಲ್, ಜೀರೋ ಟ್ರಾಫಿಕ್ ವ್ಯವಸ್ಥೆ ನೀಡಿಲ್ಲ. ಈ ಬಗ್ಗೆ ಯಾರೂ ಆದೇಶ ನೀಡಿಲ್ಲ ಎಂದು ಹೇಳಿ ಕುಳಿತರು.
ಇದಕ್ಕೆ ಕೋಪಗೊಂಡ ಸ್ಪೀಕರ್, ನಿಮ್ಮ ಉತ್ತರ ನಿಮ್ಮ ಮನಸಾಕ್ಷಿಗೆ ಒಪ್ಪುವುದೇ ಯೋಚಿಸಿ. ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ನೀಡಲಾಗಿತ್ತು ಎಂಬುದು ಜಗಜ್ಜಾಹೀರಾಗಿದೆ. ಹಾಗಾದರೆ ಯಾರಿಗೆ ಬೇಕಾದರೂ ಜೀರೋ ಟ್ರಾಫಿಕ್ ವ್ಯವಸ್ಥೆ ನೀಡಬಹುದೆ? ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಆದ್ಯ ಗಣ್ಯರಿಗಷ್ಟೇ ಇರುವ ಸೌಲಭ್ಯವನ್ನು ಯಾರಿಗಾದರೂ ನೀಡಬಹುದೆ? ಹಾಗಾಗಿ ದೇಶಭಕ್ತರು, ಇತರ ಪ್ರಮುಖರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ನೀಡುವುದು ಬೇಡ. ಇತರ ಕೆಲಸ ಮಾಡಿದವರಿಗೆ ನೀಡಲಿ ಎಂದು ಹೇಳಿದರು.
ಇದಕ್ಕೆ ದನಿಗೂಡಿದ ಕಾಂಗ್ರೆಸ್‌ನ ಎಚ್.ಕೆ.ಪಾಟೀಲ್, ಸತ್ಯವನ್ನು ಮರೆಮಾಚಿ ಸದನಕ್ಕೆ ಈ ರೀತಿ ಹೇಳುವುದು ಸರಿಯಲ್ಲ ಎಂದು ಹೇಳಿದರು. ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ಈ ರೀತಿಯ ಉತ್ತರ ನೀಡಿದರೆ ನಾನು ಸದನದಲ್ಲಿ ಇರಬೇಕೆ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಎಂ.ಬಿ.ಪಾಟೀಲ್, ಈ ಬಗ್ಗೆ ಪರಿಶೀಲನೆ ನಡೆಸಿ, ಮಾಹಿತಿ ನೀಡುವುದಾಗಿ ತಿಳಿಸಿದರು.
ಬಳಿಕ ಸ್ಪೀಕರ್ ಅವರನ್ನು ಕೊಠಡಿಯಲ್ಲಿ ಭೇಟಿಯಾದ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯಕ್ತ ಅಲೋಕ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು. ನಂತರ ಈ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಸ್ಪೀಕರ್, ರಾಜೀನಾಮೆ ಸಲ್ಲಿಸಲು ಬಂದ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ನೀಡಿರಲಿಲ್ಲ. ಈ ಬಗ್ಗೆ ರಾಜ್ಯಪಾಲರು ಸಹ ಯಾವುದೇ ಆದೇಶ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿ ಚರ್ಚೆಗೆ ತೆರೆ ಎಳೆದರು.