ಶಿವಮೊಗ್ಗ/ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 7 ದಿನದ ಹಸುಗೂಸನ್ನು ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೋಮವಾರ ಬೆಳಗ್ಗೆ 8.15ಕ್ಕೆ ಕರೆದೊಯ್ಯಲಾಯಿತು.
ಹೃದಯ ಸಂಬಂ ಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಬೆಳಗ್ಗೆ 8.15ಕ್ಕೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಿಂದ ಜೀರೋ ಟ್ರಾಫಿಕ್ ಮೂಲಕ ಮಧ್ಯಾಹ್ನ 12.10ರ ಸುಮಾರಿಗೆ ಜಯದೇವ ಆಸ್ಪತ್ರೆಗೆ ತಲುಪಿಸಲಾಗಿದೆ. ಆ್ಯಂಬುಲೆನ್ಸ್ ಚಾಲಕ ಸದ್ದಾಂ ಹುಸೇನ್ ಕಂದಮ್ಮನ ಸಾಗಿಸಲು ನೆರವಾಗಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆಯ ಬೇಲಿಮಲ್ಲೂರು ಗ್ರಾಮದ ಸ್ವಾಮಿ ಮತ್ತು ಸುಧಾ ದಂಪತಿಯ ಮಗುವಿಗೆ ಇದೀಗ ಬೆಂಗಳೂ ರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜ.31ರಂದು ಹೆರಿಗೆ ನೋವು ಕಾಣಿಸಿಕೊಂಡಾಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿ ದಾಖಲಾಗಿದ್ದ ಸುಧಾ ಫೆ.4ರಂದು ಗಂಡು ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಿಂದ ವಾಪಸ್ ತೆರಳಿದ್ದರು.
ಆದರೆ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಕಾÂನಿಂಗ್ ವರದಿಯಲ್ಲಿ ಮಗುವಿನ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿದ್ದು, ಮಗು ವಿನ ಜೀವ ಉಳಿಸುವುದಕ್ಕಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ತೀರ್ಮಾನಿಸಿದ್ದರು. ಇದಕ್ಕಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಸ್ತ್ರಚಿಕಿತ್ಸೆ ಸದ್ಯ ಮಾಡಲ್ಲ: ಮಗುವಿನ ಆರೋಗ್ಯ ಕುರಿತು ಮಾತನಾಡಿದ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಮಗುವಿಗೆ ಕೇವಲ 7 ದಿನವಾಗಿದೆ. ಅಲ್ಲದೇ ಅವಧಿಪೂರ್ವದಲ್ಲೇ ಜನಿಸಿರುವುದರಿಂದ ಕೇವಲ 1,500 ಗ್ರಾಂ ತೂಕವಿದೆ. ಮಗುವಿಗೆ ಮೂರರಿಂದ ಆರು ತಿಂಗಳಾದಾಗ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಮಗುವನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.