Advertisement

ಕೊಟ್ಟಿಗೆಯೇ, ಯಶಸ್ಸಿಗೆ ಇಟ್ಟಿಗೆ

07:06 PM Aug 04, 2019 | mahesh |

ರೈತ: ಬಸವರಾಜ ಮಹಾದೇವಪ್ಪ ಪಾಟೀಲ
ಸ್ಥಳ: ಮರೇಗುದ್ದಿ, ಜಮಖಂಡಿ
ಝೀರೋ ಬಜೆಟ್‌ ಫಾರ್ಮಿಂಗ್‌
since 2009

Advertisement

ಕೊಟ್ಟಿಗೆಯ ಗೊಬ್ಬರವನ್ನು ಸಾಮಾನ್ಯವಾಗಿ ರೈತರು ಜಮೀನಿನ ಫ‌ಲವತ್ತತೆ ಹೆಚ್ಚಿಸಲು ಬಳಸಿಕೊಳ್ಳುವುದು ಸಾಮಾನ್ಯ. ಆದರೆ, ಬಸವರಾಜ್‌ ಅವರು ನಿರ್ದಿಷ್ಟವಾಗಿ ಗೊಬ್ಬರವನ್ನು ಹಾಯಿಸುವ ವಿಧಾನದಿಂದ ಇಳುವರಿ ಹೆಚ್ಚಿಸಬಹುದೆಂಬುದನ್ನು ಕಂಡುಕೊಂಡಿದ್ದಾರೆ.

ದನ- ಕರುಗಳಿಲ್ಲದ ವ್ಯವಸಾಯ ಯಾವುದೇ ಪ್ರಯೋಜನಕ್ಕೆ ಬಾರದ್ದು ಎಂಬುದನ್ನು ಬಹಳ ಬೇಗ ಅರಿತವರು ಬಸವರಾಜ ಮಹಾದೇವಪ್ಪ ಪಾಟೀಲ. ನೈಸರ್ಗಿಕ ಕೃಷಿಗೆ ಮೂಲ ಆಧಾರವೇ ಜಾನುವಾರುಗಳ ಸಾಕಣೆ ಎನ್ನುವುದು ಅವರ ನಂಬಿಕೆ. ಅವರು ದನ-ಕರು, ಕೋಳಿ, ಮೊಲ ಮತ್ತು ಆಡುಗಳನ್ನು ಸಾಕಿದ್ದಾರೆ. ಇಂದು ಅವರ 6 ಎಕರೆ ಭೂಮಿ ಫ‌ಲವತ್ತಾಗಿದ್ದರೆ ಅದಕ್ಕೆ ಅವರ ಕೊಟ್ಟಿಗೆಯೇ ಕಾರಣ. ಅಲ್ಲಿ ದೊರೆಯುವ ಗಂಜಲ, ಹಿಕ್ಕೆ ಮತ್ತು ಸಗಣಿಯನ್ನು ಸಂಪೂರ್ಣವಾಗಿ ಕೃಷಿ ಭೂಮಿಗೆ ತಂದು ಹಾಕುತ್ತಾರೆ. ಜಾನುವಾರುಗಳಿಗೆ ಪ್ರತಿದಿನ ಕೊಡುವ ಪಶು ಆಹಾರವನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ತಮ್ಮ ಜಮೀನಿನಲ್ಲಿಯೇ ಬೆಳೆದ ಗೋವಿನ ಜೋಳ, ಸಜ್ಜೆ ಸೇರಿದಂತೆ ನವಧಾನ್ಯಗಳ ಮಿಶ್ರಣವನ್ನು ಬಳಕೆ ಮಾಡುತ್ತಾರೆ. ಇವರ ಮನೆಯಲ್ಲಿ ತಯಾರಾಗುವ ಎಮ್ಮೆಗಳ ಬೆಣ್ಣೆ-ತುಪ್ಪ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿದೆ.

ಆದಾಯದ ಹಿಂದಿನ ಗುಟ್ಟು
ಕೊಟ್ಟಿಗೆಯ ಗೊಬ್ಬರವನ್ನು ಸಾಮಾನ್ಯವಾಗಿ ರೈತರು ಜಮೀನಿನ ಫ‌ಲವತ್ತತೆ ಹೆಚ್ಚಿಸಲು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಬಸವರಾಜ್‌ ಅವರು ನಿರ್ದಿಷ್ಟವಾಗಿ ಗೊಬ್ಬರವನ್ನು ಹಾಯಿಸುವ ವಿಧಾನದಿಂದ ಇಳುವರಿ ಹೆಚ್ಚಿಸಬಹುದೆಂಬುದನ್ನು ಕಂಡುಕೊಂಡಿದ್ದಾರೆ. ಪ್ರತಿ ಬೆಳೆಗೆ ನೀರುಣಿಸುವಾಗ, ದನಗಳ ಸಗಣಿ ಮತ್ತು ಗಂಜಲವನ್ನು ಪ್ರತಿ ಸಾಲಿನಲ್ಲಿ ನೀರಿನೊಂದಿಗೆ ಸ್ವಲ್ಪ-ಸ್ವಲ್ಪ ಮಿಶ್ರಣ ಮಾಡಿ ಹರಿಬಿಡುವ ಇವರ ಜಾಣತನ ಮೆಚ್ಚುವಂಥದ್ದು. ಹೀಗೆ ಮಾಡುವುದರಿಂದ ಸಮಗ್ರ ಪೋಷಕಾಂಶಗಳು ಮತ್ತು ಸ್ನೇಹಿ ಬ್ಯಾಕ್ಟೀರಿಯಾಗಳು ಬೆಳೆಯ ಪ್ರತಿ ಸಸಿಗೆ ತಲುಪಿ ಭೂಮಿಯು ಫ‌ಲವತ್ತತೆ ಹೊಂದುವುದಲ್ಲದೆ ಫ‌ಸಲು ಸಹ ಚೆನ್ನಾಗಿ ಬರುತ್ತದೆ. ಇದುವೇ ಹೆಚ್ಚು ಆದಾಯ ಪಡೆಯುವುದರ ಹಿಂದಿನ ಗುಟ್ಟು.

ರೈತರಿಗೆ ಮಾರ್ಗದರ್ಶನ
ದಿನಾಲೂ ತೋಟದ ವೀಕ್ಷಣೆಗೆ ಬರುವ ಕೃಷಿಕರಿಗೆ ಬೇಸರವಿಲ್ಲದೆ ಪಾರಂಪರಿಕ ಕೃಷಿಯ ಮಾರ್ಗದರ್ಶನವನ್ನು ಮಾಡುವುದು ಇವರ ದಿನನಿತ್ಯದ ಕಾಯಕದ ಭಾಗವಾಗಿ ಹೋಗಿದೆ. ಇವರ ಮಾರ್ಗದರ್ಶನವನ್ನು, ಮಾರ್ಗಗಳನ್ನು ಹಲವಾರು ರೈತರು ಅಳವಡಿಸಿಕೊಂಡು ಅದರ ಲಾಭ ಪಡೆದಿದ್ದಾರೆ. ಜಮೀನಿನಲ್ಲಿ ಲಭ್ಯವಿರುವ ಕಡಿಮೆ ನೀರನ್ನು ನೇರವಾಗಿ ಬೆಳೆಗೆ ಹಾಯಿಸದೆ, ಕೃಷಿ ಹೊಂಡದಲ್ಲಿ ಶೇಖರಿಸಿ ನಂತರ ಬೆಳೆಗಳಿಗೆ ಉಪಯೋಗಿಸುವುದು ಇವರ ಇನ್ನೊಂದು ಮಾರ್ಗ. ಇದರಿಂದ, ಪ್ರತಿ ಬೆಳೆಗೂ ಸಮಪ್ರಮಾಣದಲ್ಲಿ ನೀರು ಲಭಿಸುತ್ತದೆ.

Advertisement

ರೀಸೈಕಲ್‌ ಮಂತ್ರ
ಯಾವುದೇ ಬೆಳೆಯ ಫ‌ಸಲಿನ ಕಟಾವಿನ ನಂತರ ಉಳಿಯುವ ತ್ಯಾಜ್ಯವನ್ನು ಸಂಪೂರ್ಣವಾಗಿ ಮರುಬಳಕೆ ಮಾಡುವ ಕಲೆಯನ್ನು ಬಸವರಾಜ್‌ ಅವರು ಕರಗತ ಮಾಡಿಕೊಂಡಿದ್ದಾರೆ. ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಭೂಮಿಯಲ್ಲಿರುವ ಅಗತ್ಯ ಬ್ಯಾಕ್ಟೀರಿಯಾಗಳು ನಶಿಸಿಹೋಗುವ ಅಪಾಯವಿರುತ್ತದೆ. ಅದೇ, ಕೃಷಿ ತ್ಯಾಜ್ಯದ ಮರುಬಳಕೆಯಿಂದ ಮಣ್ಣಿನಲ್ಲಿ ತೇವಾಂಶ ಲಭಿಸುವುದಲ್ಲದೆ ರೈತ ಮಿತ್ರ ಎರೆಹುಳುಗಳು ಹೆಚ್ಚಾಗುತ್ತವೆ. ಕಾಯಿಪಲ್ಲೆ, ಬಾಳೆ, ಕಬ್ಬು ಮತ್ತು ಮೆಕ್ಕೆ ಜೋಳ ಇವು ಬಸವರಾಜರ ತೋಟದಲ್ಲಿ ಸರ್ವೇಸಾಮಾನ್ಯವಾಗಿದೆ. ಏಕದಳ ಬೆಳೆಗಳೊಂದಿಗೆ ದ್ವಿದಳ ಬೆಳೆಗಳ ಮಿಶ್ರ ಬೇಸಾಯವನ್ನು ಇವರು ತಮ್ಮ ಭೂಮಿಯಲ್ಲಿ ಕೈಗೊಂಡು ನೈಸರ್ಗಿಕ ಪ್ರಧಾನ ಮತ್ತು ಲಘು ಪೋಷಕಾಂಶಗಳನ್ನು ಸ್ಥಿರೀಕರಣಗೊಳಿಸಿದ್ದಾರೆ.

– ಬಸವರಾಜ ಶಿವಪ್ಪ ಗಿರಗಾಂವಿ

Advertisement

Udayavani is now on Telegram. Click here to join our channel and stay updated with the latest news.

Next