Advertisement
ಸ್ಥಳಕ್ಕೆ ಡಿಡಿಪಿಐ ಬರಬೇಕು ಎಂದು ಪ್ರತಿಭಟನೆ ನಿರತರು ಪಟ್ಟು ಹಿಡಿದರು. 1947ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆ ಕಳೆದ ಹಲವು ವರ್ಷಗಳಿಂದ ಖಾಯಂ ಶಿಕ್ಷಕರನ್ನೇ ಕಂಡಿಲ್ಲ. ಶಾಲೆಗೆ ಖಾಯಂ ಶಿಕ್ಷಕರನ್ನು ನೀಡುವಂತೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಆರು ವರ್ಷಗಳಿಂದ ವಾರಕ್ಕೆ ಒಬ್ಬರು ಶಿಕ್ಷಕರು ಮಾತ್ರ ಈ ಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ತೊಡಕುಂಟಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೂ ಖಾಯಂ ಶಿಕ್ಷಕರ ನಿಯೋಜನೆ ಗೊಂಡಿಲ್ಲ ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಒಟ್ಟು 55 ಮಕ್ಕಳು ವ್ಯಾಸಂಗ ಮಾಡಿಕೊಂಡಿದ್ದಾರೆ. ಶಾಲೆಯ ಬೀಗವು ಸಂಚಾಲಕರ ಬಳಿ ಇದ್ದು, ಅವರಿಗೆ ಅನಾರೋಗ್ಯವಾದ ಕಾರಣ ಮಕ್ಕಳು ಶಾಲೆಗೆ ಬಂದರೂ ಮಕ್ಕಳಿಗೆ ಬಿಸಿ ಊಟದ ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳಿಗೆ ಸಿಇಟಿ ಅರ್ಜಿ ಸಲ್ಲಿಸಲು ಕೆಲವೇ ದಿನ ಮಾತ್ರ ಉಳಿದಿರುವುದರಿಂದ ಸುಮಾರು 10 ವಿದ್ಯಾರ್ಥಿಗಳಿಗೆ ದೃಢೀಕರಣ ಪತ್ರದ ಪಡೆಯುವುದು ಕಷ್ಟವಾಗುತ್ತಿದೆ. ಇದಕ್ಕಾಗಿಯೇ ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ವಿದ್ಯಾರ್ಥಿಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶೀಘ್ರದಲ್ಲಿ ಶಾಲೆಗೆ ಖಾಯಂ ಶಿಕ್ಷಕರನ್ನು ನಿಯೋಜನೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.