ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ ಚುನಾವಣೆಯ ಮತಎಣಿಕೆ ಗುರುವಾರ ನಡೆಯುತ್ತಿದ್ದು, ಮಾಧ್ಯಮಗಳ ವರದಿ ಪ್ರಕಾರ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏತನ್ಮಧ್ಯೆ ಮುಂಬೈ ದಾಳಿ ರೂವಾರಿ, ಉಗ್ರ ಹಫೀಜ್ ಸಯೀದ್ ಬೆಂಬಲಿತ ಅಲ್ಲಾ ಹೋ ಅಕ್ಬರ್ ತೆಹ್ರೀಕ್ ಪಕ್ಷವನ್ನು ಪಾಕ್ ಮತದಾರರು ಸಾರಸಗಟಾಗಿ ತಿರಸ್ಕರಿಸಿದ್ದಾರೆ.
ಉಗ್ರ ಸಯೀದ್ ನ ಮಿಲ್ಲಿ ಮುಸ್ಲಿಂ ಲೀಗ್ ಗೆ ರಾಜಕೀಯ ಪಕ್ಷ ಎಂದು ಮಾನ್ಯತೆ ಕೊಡಲು ಪಾಕ್ ಚುನಾವಣಾ ಆಯೋಗ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಾ ಹೋ ಅಕ್ಬರ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿತ್ತು. ಬಳಿಕ ಸಯೀದ್ ಬೆಂಬಲಿತ ಅಭ್ಯರ್ಥಿಗಳು ಈ ಸಾರ್ವತ್ರಿಕ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದರು.
ಡಾನ್ ಡಾಟ್ ಕಾಂನ ಫಲಿತಾಂಶದ ಪ್ರಕಾರ, 272 ಸ್ಥಾನಗಳ ಮತಎಣಿಕೆ ನಡೆಯುತ್ತಿದ್ದು, ಇದರಲ್ಲಿ ಎಎಟಿ(ಅಲ್ಲಾ ಹೋ ಅಕ್ಬರ್ ಪಕ್ಷ) ಕೇವಲ ಒಂದು ಸ್ಥಾನದಲ್ಲಷ್ಟೇ ಗೆಲುವು ಸಾಧಿಸಿದೆ ಎಂದು ವರದಿ ತಿಳಿಸಿದೆ.
ಅಲ್ಲದೇ ಇಸ್ಲಾಂ ಐಡಿಯಾಲಜಿಯ ತೆಹ್ರೀಕ್ ಇ ಲಬ್ಬೈಕ್ ಪಾಕಿಸ್ತಾನ ಪಕ್ಷವನ್ನೂ ಕೂಡಾ ಜನ ತಿರಸ್ಕರಿಸಿದ್ದಾರೆ. ಟಿಎಲ್ ಪಿ ಕೇವಲ ಒಂದು ಸ್ಥಾನದಲ್ಲದಷ್ಟೇ ಮುನ್ನಡೆ ಸಾಧಿಸಿದೆ ಎಂದು ವರದಿ ವಿವರಿಸಿದೆ.
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಚುನಾವಣೆಯ 272 ಸ್ಥಾನಗಳಲ್ಲಿ ಎಎಟಿ ಹಾಗೂ ಟಿಎಲ್ ಪಿಯನ್ನು ಜನ ತಿರಸ್ಕರಿಸುವ ಮೂಲಕ ಧಾರ್ಮಿಕ ಮೂಲಭೂತವಾದ ಪೋಷಿಸುವ ಕಟ್ಟರ್ ವಾದಿಗಳಿಗೆ ಬೆಂಬಲ ಇಲ್ಲ ಎಂಬ ಸಂದೇಶ ರವಾನಿಸಿರುವುದಾಗಿ ವರದಿ ವಿಶ್ಲೇಷಿಸಿದೆ.